ನವ ದೆಹಲಿ: ಅಂತಾರಾಷ್ಟ್ರೀಯ ವೈಮಾನಿಕ ಸುರಕ್ಷತೆಯ ದರ್ಜೆಯಲ್ಲಿ ಭಾರತದ ಸ್ಥಾನ 48ಕ್ಕೆ ಸುಧಾರಿಸಿದೆ (Aviation safety) ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ತಿಳಿಸಿದೆ.
ಇಂಟರ್‌ನ್ಯಾಶನಲ್ ಸಿವಿಲ್ ಏವಿಯೇಶನ್ ಆರ್ಗನೈಸೇಶನ್ (ICAO) ಹೊರಡಿಸಿರುವ ರ‍್ಯಾಂಕಿಂಗ್ ಪಟ್ಟಿಯಲ್ಲಿ ದೇಶದ ವೈಮಾನಿಕ ಸುರಕ್ಷತಾ ಕ್ರಮಗಳ ಅನುಷ್ಠಾನ 85.49%ಕ್ಕೆ ಸುಧಾರಿಸಿದೆ. ಚೀನಾ (49), ಇಸ್ರೇಲ್ (50), ಟರ್ಕಿಯನ್ನು (54) ಭಾರತ ಹಿಂದಿಕ್ಕಿದೆ.
ನಾಲ್ಕು ವರ್ಷಗಳ ಹಿಂದೆ ಭಾರತದ ರ‍್ಯಾಂಕ್ 102ರಲ್ಲಿ ಇತ್ತು. ಹೊಸ ಸ್ಥಾನಮಾನವನ್ನು ಉಳಿಸಿಕೊಳ್ಳುವುದು ಕೂಡ ಸವಾಲಿನದ್ದಾಗಿದೆ. ಇದಕ್ಕಾಗಿ ಸಕಲ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಸಿಎ ಪ್ರಧಾನ ನಿರ್ದೇಶಕ ಅರುಣ್ ಕುಮಾರ್ ತಿಳಿಸಿದ್ದಾರೆ.
ರ‍್ಯಾಂಕ್ ಹೆಚ್ಚಳ ಎಂದರೆ ಸುರಕ್ಷತೆಯ ಮಟ್ಟದಲ್ಲಿ ಉಂಟಾಗಿರುವ ಸುಧಾರಣೆ ಎಂದರ್ಥ. ಇದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಭಾರತದ ವೈಮಾನಿಕ ಉದ್ದಿಮೆಗೆ ಅನುಕೂಲ ನಿರೀಕ್ಷಿಸಲಾಗಿದೆ.