ನವ ದೆಹಲಿ: ಎಕ್ಸಿಸ್ ಬ್ಯಾಂಕ್ ಮಾರ್ಚ್ 1ರಿಂದ ಸಿಟಿ ಬ್ಯಾಂಕ್‌ನ ಭಾರತೀಯ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಸಿಟಿಬ್ಯಾಂಕ್‌ನ ಕನ್‌ಸ್ಯೂಮರ್ ಬಿಸಿನೆಸ್ ಮತ್ತು ಎನ್‌ಬಿಎಫ್‌ಸಿ (non-banking financial company) ವ್ಯವಹಾರವನ್ನು ಎಕ್ಸಿಸ್ ಬ್ಯಾಂಕ್ ವಹಿಸಲಿದೆ. ಒಟ್ಟು 12,325 ಕೋಟಿ ರೂ.ಗೆ ಡೀಲ್ ನಡೆದಿದೆ. ಎಕ್ಸಿಸ್ ಬ್ಯಾಂಕ್ ಜತೆ ಸಿಟಿ ಬ್ಯಾಂಕ್ ಅನ್ನು ಸಂಯೋಜಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಇದು 2023ರ ಮಾರ್ಚ್ 1ಕ್ಕೆ ಸಂಪೂರ್ಣವಾಗುವ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ. (Axis Citi bank deal) ಎಕ್ಸಿಸ್ ಬ್ಯಾಂಕ್ ಈ ಬಗ್ಗೆ ಷೇರು ವಿನಿಮಯ ಕೇಂದ್ರಕ್ಕೆ ಮಾಹಿತಿ ನೀಡಿದೆ.
ಈ ಪ್ರಕ್ರಿಯೆಯ ಬಳಿಕ ಸಿಟಿ ಬ್ಯಾಂಕ್‌ನ ಎಲ್ಲ ಗ್ರಾಹಕರು, ಉದ್ಯೋಗಿಗಳು ಮತ್ತು ಆಸ್ತಿ ಎಕ್ಸಿಸ್ ಬ್ಯಾಂಕ್ ಅಡಿಗೆ ಬರಲಿದೆ. ಗ್ರಾಹಕರು ಎಕ್ಸಿಸ್‌ಗೆ ಸ್ಥಳಾಂತರವಾಗಲು 18 ತಿಂಗಳಿನ ಕಾಲಾವಕಾಶ ಸಿಗಲಿದೆ.
ಖಾಸಗಿ ವಲಯದ ಎಕ್ಸಿಸ್ ಬ್ಯಾಂಕ್ 1993ರಲ್ಲಿ ಸ್ಥಾಪನೆಯಾಗಿದ್ದು, ಮುಂಬಯಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. 2022ರಲ್ಲಿ 86,114 ಕೋಟಿ ರೂ. ಆದಾಯ ಗಳಿಸಿದೆ. ಎಲ್‌ಐಸಿ ಇದರಲ್ಲಿ 9.19% ಷೇರುಗಳನ್ನು ಹೊಂದಿದೆ. ಭಾರತದಲ್ಲಿ 4,096 ಶಾಖೆಗಳು ಮತ್ತು 12,922 ಎಟಿಎಂಗಳನ್ನು ಒಳಗೊಂಡಿದೆ.