ಲಖನೌ: ಅಯೋಧ್ಯೆಯಲ್ಲಿ ಈ ಸಲದ ಹಾಗೂ ಮುಂದಿನ ವರ್ಷದ ದೀಪಾವಳಿಗೆ ವಿಶೇಷ ಮಹತ್ವ ಇದೆ. ಸುಮಾರು 18 ಲಕ್ಷ ಮಣ್ಣಿನ ಹಣತೆಗಳು ಬೆಳಗಲಿದ್ದು, ದೀಪೋತ್ಸವದ ( Deepotsav in Ayodhya) ಸಂಭ್ರಮ ಇದೀಗ ಮುಗಿಲು ಮುಟ್ಟಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಗಮನಕ್ಕೆ ಐತಿಹಾಸಿಕ ನಗರಿ ಸಜ್ಜಾಗಿದೆ. ಜತೆಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಸುಮಾರು ಅರ್ಧದಷ್ಟು ಕೆಲಸಗಳು ಈಗಾಗಲೇ ನಡೆದಿವೆ. ಮುಂದಿನ ದೀಪಾವಳಿಯ ವೇಳೆಗೆ (2023ರ ಅಂತ್ಯಕ್ಕೆ) ಬಹುಶಃ ರಾಮ ಮಂದಿರ ನಿರ್ಮಾಣ ಉದ್ಘಾಟನೆಗೆ ಸಜ್ಜಾಗಲಿದೆ. ಆಗ ಇಡೀ ಅಯೋಧ್ಯೆ ಆಮೂಲಾಗ್ರವಾಗಿ ಬದಲಾಗಲಿದೆ.
ಅಯೋಧ್ಯೆಯನ್ನು ಜಾಗತಿಕ ಮಹತ್ವದ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಹಾಗೂ ಉತ್ತರಪ್ರದೇಶ ಸರ್ಕಾರ ಸಂಕಲ್ಪಿಸಿವೆ. ಸುಮಾರು 20,000 ಕೋಟಿ ರೂ. ಮೌಲ್ಯದ ಯೋಜನೆಗಳು ಈಗಾಗಲೇ ಅನುಷ್ಠಾನದ ಹಂತದಲ್ಲಿವೆ.
ಎರಡು ವರ್ಷಗಳ ಹಿಂದೆ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಿದ್ದರು. ಬಳಿಕ ಅಯೋಧ್ಯೆಯ ಚಿತ್ರಣವೇ ಬದಲಾಗುತ್ತಿದೆ. ಸರ್ಕಾರದ ಹೇಳಿಕೆಗಳ ಪ್ರಕಾರ, 1,157 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಏರ್‌ಪೋರ್ಟ್ ನಿರ್ಮಾಣವಾಗುತ್ತಿದ್ದು, ವರ್ಷಾಂತ್ಯದ ವೇಳೆಗೆ ಪೂರ್ಣವಾಗಲಿದೆ. 2024ರ ವೇಳೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲೆ ಎತ್ತಿಕೊಳ್ಳಲಿದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮ ಏರ್‌ಪೋರ್ಟ್ ನಿರ್ಮಾಣಕ್ಕೆ ಇದುವರೆಗೆ 1,175 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ.
ಶ್ರೀರಾಮ ಜನ್ಮಭೂಮಿ ಕಾರಿಡಾರ್
ವಾರಾಣಸಿಯಲ್ಲಿನ ಕಾಶಿ ವಿಶ್ವನಾಥ್ ಕಾರಿಡಾರ್ ಮಾದರಿಯಲ್ಲಿ ಶ್ರೀರಾಮ ಜನ್ಮಭೂಮಿ ಕಾರಿಡಾರ್ ಅಭಿವೃದ್ಧಿಯಾಗುತ್ತಿದೆ. ಅಯೋಧ್ಯೆಯ ಸುತ್ತುಮುತ್ತಲಿನ ಸಮಗ್ರ ಅಭಿವೃದ್ಧಿಗೆ ನಾನಾ ಇಲಾಖೆಗಳು ಕೈ ಜೋಡಿಸಿವೆ. ಉತ್ತರಪ್ರದೇಶ ವಸತಿ ಮತ್ತಿ ಅಭಿವೃದ್ಧಿ ಮಂಡಳಿಯು 3,000 ಕೋಟಿ ರೂ. ವೆಚ್ಚದಲ್ಲಿ ವೇದಿಕ್ ಗ್ರೀನ್‌ಫೀಲ್ಡ್ ಟೌನ್‌ಶೀಪ್ ಯೋಜನೆಯನ್ನು ಅಭಿವೃದ್ಧಿಪಡಿಸಲಿದೆ. 2024ರ ಮಾರ್ಚ್ ವೇಳೆಗೆ ಅದು ಪೂರ್ಣವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಯೋಧ್ಯೆಯಲ್ಲಿ 12,000 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿದೆ.
ಜಗತ್ತಿನ ನಾನಾ ಕಡೆಗಳಿಂದ ಮುಂದಿನ ವರ್ಷಗಳಲ್ಲಿ ಯಾತ್ರಿಕರು ಭಾರಿ ಸಂಖ್ಯೆಯಲ್ಲಿ ಭೇಟಿ ನೀಡುವ ನಿರೀಕ್ಷೆ ಇದೆ. ವೇದಿಕ್ ಗ್ರೀನ್‌ಫೀಲ್ಡ್ ಟೌನ್‌ಶಿಪ್ ಸಲುವಾಗಿ 80% ಭೂಸ್ವಾಧೀನ ನಡೆದಿದೆ. 5,924 ಕೋಟಿ ರೂ. ವೆಚ್ಚದಲ್ಲಿ 67 ಕಿ.ಮೀ ಉದ್ದದ ಅಯೋಧ್ಯಾ ಬೈಪಾಸ್ ಪ್ರಾಜೆಕ್ಟ್ ನಡೆಯಲಿದ್ದು, ನಗರದ ರಸ್ತೆ ಸಂಪರ್ಕವನ್ನು ಅನೂಹ್ಯವಾಗಿ ಸುಧಾರಿಸಲಿದೆ. ಭಕ್ತಿಪಥ್ ಮತ್ತು ರಾಮ ಪಥ್ ಎಂಬ ರಸ್ತೆ ಯೋಜನೆಗಳು ನಡೆಯುತ್ತಿವೆ. ಚೌರಾಸಿ ಕೋಸಿ ಪರಿಕ್ರಮ ಮಾರ್ಗ್ ಅನ್ನು ರಾಷ್ಟ್ರೀಯ ಹೆದ್ದಾರಿ ಯೋಜನೆಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಯೋಧ್ಯೆಯನ್ನು ಜಗಮಗಿಸಲು 4 ಲಕ್ಷ ಎಲ್‌ಇಡಿ ಬಲ್ಬ್‌ಗಳಿಂದ ಅಲಂಕರಿಸಲಾಗಿದೆ. ಇದೆಲ್ಲವೂ ಶ್ರೀರಾಮನ ಇತಿಹಾಸ ಪ್ರಸಿದ್ಧ ಸ್ಥಳಗಳ ಅಭಿವೃದ್ಧಿಗೆ ಕಾರಣವಾಗಲಿದೆ. ಉತ್ತರಪ್ರದೇಶದ ಸಿಎಂ ಕಚೇರಿ ಈ ಎಲ್ಲ ಯೋಜನೆಗಳ ಮೇಲುಸ್ತುವಾರಿ ವಹಿಸಿಕೊಂಡಿದೆ.
ಅಯೋಧ್ಯೆಗೆ ಈ ವರ್ಷ 2.4 ಕೋಟಿ ಪ್ರವಾಸಿಗರ ಭೇಟಿ: ಕಳೆದ 2017ರಿಂದ ಅಯೋಧ್ಯೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2017ರಲ್ಲಿ 1.78 ಕೋಟಿ ಮಂದಿ ಭೇಟಿ ನೀಡಿದ್ದರೆ, ಈ ವರ್ಷ ಆಗಸ್ಟ್ ತನಕ ದಾಖಲೆಯ 2.04 ಕೋಟಿ ಪ್ರವಾಸಿಗರು ಆಗಮಿಸಿದ್ದಾರೆ. 2023ರಲ್ಲಿ ರಾಮ ಮಂದಿರವು ಪ್ರವಾಸಿಗರಿಗೆ ತೆರೆದುಕೊಂಡ ಬಳಿಕ ಪ್ರತಿ ವರ್ಷ 10 ಕೋಟಿ ಪ್ರವಾಸಿಗರು ಭೇಟಿ ನೀಡುವ ಸಾಧ್ಯತೆ ಇದೆ ಎಂದು ಉತ್ತರಪ್ರದೇಶ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚಳದ ಪರಿಣಾಮ ಅಯೋಧ್ಯೆಯ ರೈಲ್ವೆ ನಿಲ್ದಾಣವನ್ನು 440 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ.