ಮೀರತ್: ನೀವು ನಿಮ್ಮ ಜನ್ಮದಿನಕ್ಕೆ 12 ಕೆ.ಜಿ ತೂಕದ ಸಮೋಸಾವನ್ನು ಕತ್ತರಿಸಿ ಆಚರಿಸುವಿರಾ? ಅಥವಾ ಅದನ್ನು ಕೇವಲ 30 ನಿಮಿಷದಲ್ಲಿ ತಿಂದು 71,000 ರೂ. ನಗದು ಬಹುಮಾನ ಗೆಲ್ಲುವಿರಾ?! ಅಚ್ಚರಿ ಆಗುತ್ತಿದೆಯೇ?
ಮೀರತ್‌ನಲ್ಲಿ ಬೇಕರಿ ಮಾಲೀಕರೊಬ್ಬರು ಗ್ರಾಹಕರಿಗೆ ಇಂಥ ವಿನೂತನ ಆಫರ್ ನೀಡಿದ್ದಾರೆ. ಲಾಲ್ ಕುರ್ತಿ ಮೂಲದ ಕುಶಾಲ್ ಸ್ವೀಟ್ಸ್‌ನ ಮಾಲೀಕರಾದ ಶುಭಮ್ ಕೌಶಲ್ ಅವರು ಈ ಬಾಹುಬಲಿ ಸಮೋಸಾದ ಆಫರ್ ನೀಡುತ್ತಿದ್ದಾರೆ. ಈ ಪ್ರಯೋಗದ ಬಳಿಕ ಜನ ತಮ್ಮ ಬೇಕರಿಯಿಂದ ಸಾಂಪ್ರದಾಯಿಕ ಕೇಕ್ ಬದಲಿಗೆ ಸಮೋಸಾವನ್ನು ಹೆಚ್ಚು ಕೊಂಡೊಯ್ಯುತ್ತಿದ್ದಾರೆ ಎನ್ನುತ್ತಾರೆ ಅವರು.
ಆಲೂಗಡ್ಡೆ, ಬಟಾಣಿ, ಮಸಾಲೆ ಪದಾರ್ಥಗಳು, ಪನೀರ್ ಮತ್ತು ಒಣ ಹಣ್ಣುಗಳನ್ನು ಒಳಗೊಂಡಿರುವ 12 ಕೆ.ಜಿ ಸಮೋಸಾವನ್ನು ಕೇವಲ 30 ನಿಮಿಷದಲ್ಲಿ ತಿಂದು ಮುಗಿಸುವವರಿಗೆ 71,000 ರೂ. ಬಹುಮಾನ ನೀಡಲಾಗುವುದು ಎಂದು ಶುಭಮ್ ಕೌಶಲ್ ತಿಳಿಸಿದ್ದಾರೆ. ಅವರ ಬೇಕರಿ ಶಾಪ್ ಕೇವಲ ಸಮೋಸಾಗೆ ಮಾತ್ರ ಮುಂಗಡ ಆರ್ಡರ್ ಪಡೆಯುತ್ತದೆ.
ಸಮೋಸಾದಲ್ಲಿಯೇ ಏನಾದರೂ ಹೊಸತನ್ನು ಮಾಡಬೇಕು ಎಂಬುದು ನನ್ನ ಕನಸಾಗಿತ್ತು. ಆದ್ದರಿಂದ ಬಾಹುಬಲಿ ಸಮೋಸಾ ಬಗ್ಗೆ ನಿರ್ಧರಿಸಲಾಯಿತು. ಮೊದಲು ನಾಲ್ಕು ಕೆಜಿ ಸಮೋಸಾ, ಬಳಿಕ 8 ಮತ್ತು 12 ಕೆಜಿ ಸಮೋಸಾ ತಯಾರಿಸಲಾಯಿತು ಎಂದು ಅವರು ವಿವರಿಸಿದ್ದಾರೆ. 12 ಕೆಜಿ ಸಮೋಸಾದ ವೆಚ್ಚ 1,500 ರೂ. ಆಗುತ್ತದೆ. ಇದುವರೆಗೆ 40-50 ಬಾಹುಬಲಿ ಸಮೋಸಾ ಆರ್ಡರ್ ಪಡೆದಿದ್ದೇವೆ. ಇದು ದೇಶದಲ್ಲಿಯೇ ಅತಿ ದೊಡ್ಡ ಸಮೋಸಾ ಎನ್ನುತ್ತಾರೆ ಬೇಕರಿ ಮಾಲೀಕ ಕೌಶಲ್.
ಇದನ್ನೂ ಓದಿ: Monsoon Food: ಮಳೆಗಾಲದಲ್ಲಿ ಕರಾವಳಿಯ ಜಡಿಮಳೆಗೆ ಅಲ್ಲಿನ ಈ ಆಹಾರಗಳನ್ನು ಸವಿಯಲೇಬೇಕು!