ನವ ದೆಹಲಿ: ಬಿಸಿನೆಸ್ ಮಾಡಲು ಒಂದೊಳ್ಳೆಯ ಐಡಿಯಾ ಕೂಡ ಮುಖ್ಯವಾಗುತ್ತದೆ ಎಂಬುದಕ್ಕೆ ಇಲ್ಲಿದೆ ತಾಜಾ ಉದಾಹರಣೆ. ದಿಲ್ಲಿಯ ವಿಶ್ವವಿದ್ಯಾಲಯದಲ್ಲಿ ಓದಿದ್ದ ಮೂವರು ಸ್ನೇಹಿತರು ಸೇರಿ ೨೦೧೬ರಲ್ಲಿ ಆರಂಭಿಸಿದ ಆನ್‌ಲೈನ್ ಬೇಕರಿಯೊಂದು ಈಗ ದೇಶದ ೧೧ ನಗರಗಳಲ್ಲಿ ವಹಿವಾಟು ನಡೆಸುತ್ತಿದೆ. ೭೫ ಕೋಟಿ ರೂ.ಗಳ ಬಿಸಿನೆಸ್ ನಡೆಸುವ ಸಂಸ್ಥೆಯಾಗಿ (Business success) ಹೊರಹೊಮ್ಮಿದೆ!
ಕೇವಲ ಆರು ವರ್ಷಗಳ ಹಿಂದೆ ದಿಲ್ಲಿಯ ನೇತಾಜಿ ಸುಭಾಷ್ ಯುನಿವರ್ಸಿಟಿಯಲ್ಲಿ ಓದಿದ್ದ ಮೂವರು ಸ್ನೇಹಿತರಾದ ಹಿಮಾಂಶು ಚಾವ್ಲಾ, ಶ್ರೇ ಸೆಹಗಲ್ ಮತ್ತು ಸುಮನ್ ಪಾತ್ರಾ ಅವರು ಹೊಸ ಬಿಸಿನೆಸ್ ಆರಂಭಿಸಲು ನಿರ್ಧರಿಸಿದರು.
೨೦೦೬ರಲ್ಲಿ ಕಾಲೇಜು ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಸ್ವಲ್ಪ ಸಮಯ ಕೆಲ ಕಂಪನಿಗಳಲ್ಲಿ ಉದ್ಯೋಗದಲ್ಲಿದ್ದರು. ಬಳಿಕ ಸ್ವಂತ ಬಿಸಿನೆಸ್ ಶುರು ಮಾಡಲು ನಿರ್ಧರಿಸಿದರು. ೨೦೧೦ರಲ್ಲಿ ಫ್ಲವರ್ ಔರಾ ಎಂಬ ಗಿಫ್ಟಿಂಗ್ ಕಂಪನಿಯನ್ನು ಗುರ್‌ಗಾಂವ್‌ನಲ್ಲಿ ತೆರೆದರು. ೨೦೧೦ರಲ್ಲಿ ೨ ಲಕ್ಷ ರೂ. ಬಂಡವಾಳದಲ್ಲಿ ವಹಿವಾಟು ಶುರುವಾಯಿತು. ಆನ್‌ಲೈನ್ ಮೂಲಕ ಅಲಂಕಾರಿಕ ಹೂವು, ಕೇಕ್‌ಗಳ ಆರ್ಡರ್ ಗಳಿಸಿ ಮಾರಾಟ ಮಾಡುತ್ತಿದ್ದರು. ೨೦೧೬ರಲ್ಲಿ ಈ ಮೂವರು ಸ್ನೇಹಿತರು ಬೇಕಿಂಗೊ ( Bakingo) ಎಂಬ ಹೆಸರಿನಲ್ಲಿ ಹೊಸ ಕಂಪನಿಯನ್ನು ಆರಂಭಿಸಿದರು. ತಾಜಾ ಕೇಕ್‌ಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಲು ಶುರು ಮಾಡಿದರು. ಇದು ದಿನದಿಂದ ದಿನಕ್ಕೆ ಜನಪ್ರಿಯತೆ ಗಳಿಸಿತು. ಕಂಪನಿಯಲ್ಲಿ ೬೫೦ ಸಿಬ್ಬಂದಿ ಇದ್ದಾರೆ.
ಭಾರತದಲ್ಲಿ ಬೇಕರಿ ವಹಿವಾಟು ಸಾಂಪ್ರದಾಯಿಕ ವಿಧಾನದಲ್ಲಿ ನಡೆಯುತ್ತಿದೆ. ಇದಕ್ಕೆ ಸ್ಥಳೀಯ ಸೊಗಡಿನ ಸ್ಪರ್ಶ ನೀಡಿದರೆ ಹೆಚ್ಚು ಗ್ರಾಹಕರನ್ನು ಆಕರ್ಷಿಸಬಹುದುʼʼ ಎನ್ನುತ್ತಾರೆ ಹಿಮಾಂಶು.
೨೦೨೧-೨೨ರಲ್ಲಿ ೭೫ ಕೋಟಿ ರೂ. ವಹಿವಾಟು!
ಬೇಕಿಂಗೊ ಆನ್‌ಲೈನ್ ಬೇಕರಿಯು ಹೈದರಾಬಾದ್, ಬೆಂಗಳೂರು, ದಿಲ್ಲಿ, ಎನ್‌ಸಿಆರ್ ಇತ್ಯಾದಿ ನಗರಗಳಲ್ಲಿ ಅಸ್ತಿತ್ವ ಹೊಂದಿದೆ. ೩೦% ಬಿಸಿನೆಸ್ ಬಕಿಂಗೊದ ವೆಬ್‌ಸೈಟ್ ಮೂಲಕ ನಡೆಯುತ್ತದೆ. ೭೦% ಬಿಸಿನೆಸ್ ಇತರ ಫುಡ್ ಪೋರ್ಟಲ್‌ಗಳಾದ ಸ್ವಿಗ್ಗಿ, ಜೊಮ್ಯಾಟೊ ಮೂಲಕ ನಡೆಯುತ್ತದೆ. ೨೦೨೧-೨೨ರಲ್ಲಿ ಕಂಪನಿ ೭೫ ಕೋಟಿ ರೂ. ವಹಿವಾಟು ನಡೆಸಿದೆ. ಬೇಕಿಂಗೊ ಈ ವರ್ಷ ದಿಲ್ಲಿಯಲ್ಲಿ ತನ್ನ ಮೊದಲ ಆಫ್‌ಲೈನ್ ಬೇಕರಿ ಮಳಿಗೆ ತೆರೆದಿದೆ.
ಬೇಕಿಂಗೊ ಆನ್‌ಲೈನ್ ಮೂಲಕ ಆರ್ಡರ್‌ಗಳನ್ನು ಸ್ವೀಕರಿಸಿ, ಭಾರತದ ಯಾವುದೇ ಮೂಲೆಗೂ ನಾನಾ ವಿಧದ ಕೇಕ್‌ಗಳನ್ನು ತಲುಪಿಸುತ್ತದೆ. ಸ್ಥಳೀಯ ಬೇಕರಿಗಳಲ್ಲಿ ನಿಮಗೆ ೧೦-೧೫ ಮಾರಿಯ ಕೇಕ್ ಲಭಿಸಿದರೆ, ಇಲ್ಲಿ ೫೦೦ಕ್ಕೂ ಹೆಚ್ಚು ಮಾದರಿಯ ಕೇಕ್‌ಗಳು ದೊರೆಯುತ್ತದೆ.