ನವ ದೆಹಲಿ: ಕೇಂದ್ರ ಸರ್ಕಾರ ಬೆಲೆ ಏರಿಕೆಯನ್ನು ತಡೆಯಲು ಗೋಧಿ ಹಿಟ್ಟು, ಮೈದಾ, ರವೆಯ ರಫ್ತನ್ನು ನಿಷೇಧಿಸಿದೆ. ಕಳೆದ ಮೇನಲ್ಲಿ ಸರ್ಕಾರ ಗೋಧಿಯ ರಫ್ತನ್ನು (Export ban) ನಿರ್ಬಂಧಿಸಿತ್ತು.
ಕೇಂದ್ರ ಸಚಿವ ಸಂಪುಟದ ನಿರ್ಧಾರದ ಹಿನ್ನೆಲೆಯಲ್ಲಿ ಅಧಿಸೂಚನೆ ಹೊರಡಿಸಿರುವ ವಿದೇಶಾಂಗ ವ್ಯವಹಾರಗಳ ನಿರ್ದೇಶನಾಲಯವು ನಿರ್ದಿಷ್ಟ ಪ್ರಕರಣಗಳಲ್ಲಿ ಸರ್ಕಾರದ ಅನುಮತಿ ಮೂಲಕ ಮಾತ್ರ ಇವುಗಳ ರಫ್ತು ಮಾಡಬಹುದು. ಉಳಿದಂತೆ ರಫ್ತು ನಿಷೇಧ ಅನ್ವಯವಾಗಲಿದೆ ಎಂದು ತಿಳಿಸಿದೆ.
ರಷ್ಯಾ ಮತ್ತು ಉಕ್ರೇನ್ ಸಂಘರ್ಷದ ಬಳಿಕ ಬೆಲೆ ಏರಿಕೆ ತಡೆಯಲು ಹಾಗೂ ಸ್ಥಳೀಯವಾಗಿ ಪೂರೈಕೆಯಲ್ಲಿ ಕೊರತೆ ಆಗದಂತೆ ನೋಡಿಕೊಳ್ಳಲು ಸರ್ಕಾರ ಮುಂಜಾಗರೂಕತಾಕ್ರಮವಾಗಿ ಈ ನಿರ್ಧಾರ ತೆಗೆದುಕೊಂಡಿದೆ. ರಷ್ಯಾ-ಉಕ್ರೇನ್ ಸಂಘರ್ಷದ ಪರಿಣಾಮ ಜಾಗತಿಕ ಮಟ್ಟದಲ್ಲಿ ಭಾರತದ ಗೋಧಿಗೆ ಬೇಡಿಕೆಯೂ ಉಂಟಾಗಿತ್ತು. ಇದರ ಬೆನ್ನಲ್ಲೇ ಸ್ಥಳೀಯವಾಗಿ ದರಗಳು ಏರುಗತಿಯಲ್ಲಿತ್ತು.