Site icon Vistara News

Bank credit : ಸಾಲ ತೆಗೆದುಕೊಳ್ಳಲು ಬ್ಯಾಂಕ್‌ಗಳಿಗೆ ಜನರ ಲಗ್ಗೆ, ಕಾರಣವೇನು?

cash

ನವ ದೆಹಲಿ: ಕಳೆದ ಜೂನ್‌ನಲ್ಲಿ ಬ್ಯಾಂಕ್‌ಗಳಲ್ಲಿ ಸಾಲದ ವಿತರಣೆ ಗಣನೀಯವಾಗಿ ಹೆಚ್ಚಳವಾಗಿದೆ. ನಿಖರವಾಗಿ ಹೇಳುವುದಿದ್ದರೆ ಕಳೆದ ವರ್ಷದ ಜೂನ್‌ಗೆ ಹೋಲಿಸಿದರೆ ಈ ಸಲ 16.3% ಏರಿಕೆಯಾಗಿದೆ. ಸೇವೆ, ರಿಟೇಲ್‌ ಮತ್ತು ಕೃಷಿ ಹಾಗೂ ಸಂಬಂಧಿತ ಚಟುವಟಿಕೆಗಳಲ್ಲಿ ಸಾಲ ಪಡೆಯುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. (Bank credit)

ಸೇವಾ ಕ್ಷೇತ್ರದಲ್ಲಿ ಸಾಲದ ವಿತರಣೆ 26.7% ಏರಿಕೆಯಾಗಿದೆ. ವರ್ಷದ ಹಿಂದೆ ಅದು 12.8% ಇತ್ತು. ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ (non-banking financial companies -NBFCs) ಕೂಡ ಸಾಲದ ವಿತರಣೆ ಚುರುಕಾಗಿದೆ ಎಂದು ಆರ್‌ಬಿಐ ಅಂಕಿ ಅಂಶಗಳು ತಿಳಿಸಿದೆ.

ವೈಯಕ್ತಿಕ ಸಾಲಗಳ ವಿತರಣೆಯಲ್ಲಿ 2023ರ ಜೂನ್‌ನಲ್ಲಿ 20.9% ಏರಿಕೆಯಾಗಿದೆ. ಮುಖ್ಯವಾಗಿ ಹೌಸಿಂಗ್‌ (ವಸತಿ) ಮತ್ತು ವಾಹನ ಸಾಲಗಳ ವಿತರಣೆಯಲ್ಲಿ ಗಣನೀಯ ಹೆಚ್ಚಳವಾಗಿದೆ ಎಂದು ಆರ್‌ಬಿಐ ತಿಳಿಸಿದೆ. (RBI Statement) ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಸಾಲ ವಿತರಣೆಯ ಪ್ರಮಾಣದಲ್ಲಿ 19.7 % ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 12.9% ವಿತರಣೆಯಾಗಿತ್ತು.

ಇದನ್ನೂ ಓದಿ: ITR Filing : ವಿಳಂಬಿತ ಐಟಿಆರ್‌ ಫೈಲಿಂಗ್‌ಗೆ ಕೊನೆಯ ದಿನ ಯಾವಾಗ?

2023ರ ಜೂನ್‌ನಲ್ಲಿ ಕೈಗಾರಿಕಾ ವಲಯಲ್ಲಿ ಸಾಲ ವಿತರಣೆ ಕಳೆದ ವರ್ಷಕ್ಕೆ ಹೋಲಿಸಿದರೆ 8.1%ಕ್ಕೆ ಇಳಿಕೆಯಾಗಿದೆ. 2022ರ ಜೂನ್‌ನಲ್ಲಿ 9.5% ವಿತರಣೆಯಾಗಿತ್ತು. ಹೀಗಿದ್ದರೂ ಭಾರಿ ಕೈಗಾರಿಕೆಗಳಿಗೆ ಸಾಲದ ವಿತರಣೆಯಲ್ಲಿ 6.4% ಹೆಚ್ಚಳವಾಗಿದೆ. ಮಧ್ಯಮ ಮತ್ತು ಸಣ್ಣ ಉದ್ದಿಮೆಗಳಿಗೆ ಸಾಲ ವಿತರಣೆ ಇಳಿಕೆಯಾಗಿದೆ. ವೈಯಕ್ತಿಕ ಸಾಲದ ವ್ಯಾಪಕ ಬೆಳವಣಿಗೆಯಿಂದ ಒಟ್ಟಾರೆ ಸಾಲ ವಿತರಣೆ ಹೆಚ್ಚಳವಾಗಿದೆ ಎಂದು ಆರ್‌ಬಿಐ ಬುಲೆಟಿನ್‌ ತಿಳಿಸಿದೆ.

ಉತ್ಪಾದನೆ ಮತ್ತು ಹೂಡಿಕೆಯ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಮಂದಗತಿಯಲ್ಲಿ ಮುಂದುವರಿದಿದೆ. ಭಾರತದಲ್ಲಿ ಹಲವು ಕಡೆ ಮಳೆಯ ಕೊರತೆಯೂ ಕಂಡು ಬಂದಿದೆ. ಹೀಗಿದ್ದರೂ ದೇಶದಲ್ಲಿ ಒಟ್ಟಾರೆಯಾಗಿ ಪರಿಸ್ಥಿತಿ ಸುಧಾರಿಸಿದೆ. ಸರ್ಕಾರದ ಸಾರ್ವಜನಿಕ ವೆಚ್ಚದ ಗುಣಮಟ್ಟ ಹೆಚ್ಚಳವಾಗಿದೆ. ಭಾರತ ಅಭಿವೃದ್ಧಿ ಹೊಂದಿದ ಎಕಾನಮಿಯಾಗಲು ಮುಂದಿನ 25 ವರ್ಷಗಳ ಕಾಲ ವಾರ್ಷಿಕ ಸರಾಸರಿ ಜಿಡಿಪಿ 7.6% ಇರಬೇಕು ಎಂದು ಆರ್‌ಬಿಐ ಬುಲೆಟಿನ್‌ ತಿಳಿಸಿದೆ.

Exit mobile version