ನವ ದೆಹಲಿ: ಸಾಲಗಾರರ ಖಾತೆಯನ್ನು ಕಪ್ಪು ಪಟ್ಟಿಗೆ ಸೇರಿಸುವುದಕ್ಕೆ ಅಥವಾ ವರ್ಗೀಕರಿಸುವುದಕ್ಕೆ ಮುನ್ನ ಬ್ಯಾಂಕ್ ಅದನ್ನು ಅವರಿಗೆ ತಿಳಿಸಬೇಕು ಎಂದು ಸುಪ್ರೀಂಕೋರ್ಟ್ (Supreme Court ) ಸೋಮವಾರ ತಿಳಿಸಿದೆ.
ಒಂದು ಖಾತೆಯನ್ನು ಕಪ್ಪು ಪಟ್ಟಿಗೆ ಸೇರಿಸುವುದರಿಂದ (blacklisting) ಅದರದ್ದೇ ಆದ ಪ್ರತಿಕೂಲ ಪರಿಣಾಮಗಳು ಎದುರಾಗುತ್ತದೆ. ಸಾಲಗಾರರಿಗೆ ಹೊಸತಾಗಿ ಸಾಲ ಪಡೆಯಲು ಕಷ್ಟವಾದೀತು. ಆರ್‌ಬಿಐ 2016ರಲ್ಲಿ ಬ್ಯಾಂಕ್‌ಗಳಿಗೆ ಉದ್ದೇಶಪೂರ್ವಕ ಸುಸ್ತಿದಾರರ ಖಾತೆಗಳನ್ನು ಭ್ರಷ್ಟ ಖಾತೆಗಳು ಎಂದು ಏಕಪಕ್ಷೀಯವಾಗಿ ಘೋಷಿಸಲು ಅವಕಾಶ ನೀಡಿತ್ತು. ಈ ಕ್ರಮವನ್ನು ಹಲವಾರು ಹೈಕೋರ್ಟ್‌ಗಳಲ್ಲಿ ಪ್ರಶ್ನಿಸಲಾಗಿದೆ.
ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಸಹಜ ನ್ಯಾಯದ ದೃಷ್ಟಿಯಿಂದ ಎಲ್ಲರಿಗೂ ಅವರ ವಿರುದ್ಧದ ನಿರ್ಧಾರಗಳನ್ನು ಕೇಳುವ ಹಕ್ಕು ಇದೆ. ಆದ್ದರಿಂದ ಘೋಷಣೆಗೆ ಮೊದಲು ಸಾಲಗಾರರಿಗೆ ಬ್ಯಾಂಕ್ ತಿಳಿಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಸಾಲಗಾರರ ಖಾತೆಯನ್ನು ಬ್ಯಾಂಕ್ ಫ್ರಾಡ್ ಎಂದು ಘೋಷಿಸಿದಾಗ ಸಾಲಗಾರರು ಸಿವಿಲ್ ಮತ್ತು ಕ್ರಿಮಿನಲ್ ವಿಚಾರಣೆಯನ್ನೂ ಎದುರಿಸಬೇಕಾಗಿ ಬರಬಹುದು. ಆದ್ದರಿಂದ ಮೊದಲೇ ಅವರಿಗೆ ತಿಳಿಸಬೇಕು ಎಂದು ಕೋರ್ಟ್ ಪ್ರತಿಪಾದಿಸಿತು.