ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರವನ್ನು ಯಥಾಸ್ಥಿತಿ ಕಾಪಾಡಿಕೊಂಡ ಬೆನ್ನಲ್ಲೇ ಸ್ಥಿರ ಠೇವಣಿದಾರರಿಗೆ ಬ್ಯಾಂಕ್ ಆಫ್ ಬರೋಡಾ (Bank Of Baroda) ಸಿಹಿ ಸುದ್ದಿ ನೀಡಿದೆ. ಸ್ಥಿರ ಠೇವಣಿ (Fixed Deposit) ಮೇಲಿನ ಬಡ್ಡಿ ದರದಲ್ಲಿ 50 ಮೂಲ ಅಂಕಗಳನ್ನು (Bps) ಬ್ಯಾಂಕ್ ಹೆಚ್ಚಿಸಿದ್ದು, ಇದರಿಂದಾಗಿ ಠೇವಣಿದಾರರಿಗೆ ಹೆಚ್ಚಿನ ಬಡ್ಡಿಯ ಲಾಭ ಸಿಗಲಿದೆ.
ಅಕ್ಟೋಬರ್ 9ರಿಂದಲೇ ನೂತನ ಬಡ್ಡಿದರವು ಗ್ರಾಹಕರಿಗೆ ಸಿಗಲಿದೆ. ಹೊಸದಾಗಿ ಠೇವಣಿ ಮಾಡುವವರು ಹಾಗೂ ಈಗಾಗಲೇ ಠೇವಣಿ ಮಾಡಿದವರಿಗೆ ಹೊಸ ಬಡ್ಡಿದರದ ಲಾಭ ಸಿಗಲಿದೆ. ಗರಿಷ್ಠ ಎರಡು ಕೋಟಿ ರೂಪಾಯಿವರೆಗೆ ಸ್ಥಿರ ಠೇವಣಿ ಇಡುವವರಿಗೆ 50 ಮೂಲಾಂಕಗಳನ್ನು ಏರಿಕೆ ಮಾಡಿದರೆ, 2 ಕೋಟಿ ರೂ.ನಿಂದ 10 ಕೋಟಿ ರೂ.ವರೆಗೆ ಠೇವಣಿ ಇಡುವವರಿಗೆ 100 ಮೂಲಾಂಕ ಏರಿಕೆ ಮಾಡಿದೆ.
ಎಷ್ಟು ವರ್ಷ ಇಟ್ಟರೆ ಎಷ್ಟು ಬಡ್ಡಿ?
ಸ್ಥಿರ ಠೇವಣಿ ಇಡುವ ಅವಧಿಯ ಅನ್ವಯ ಠೇವಣಿದಾರರಿಗೆ ಬಡ್ಡಿ ನೀಡಲಾಗುತ್ತದೆ. ಮೂರರಿಂದ ಆರು ತಿಂಗಳು ಸ್ಥಿರ ಠೇವಣಿ ಇಟ್ಟರೆ ಸಾಮಾನ್ಯ ಜನರಿಗೆ ಶೇ. 5, ಹಿರಿಯ ನಾಗರಿಕರಿಗೆ ಶೇ.5.5, ಒಂದು ವರ್ಷ ಠೇವಣಿ ಇಟ್ಟರೆ ಸಾಮಾನ್ಯ ಜನರಿಗೆ ಶೇ.6.75, ಹಿರಿಯ ನಾಗರಿಕರಿಗೆ ಶೇ.7.25, ಎರಡರಿಂದ ಮೂರು ವರ್ಷದವರೆಗೆ ಠೇವಣಿ ಮಾಡಿದರೆ ಸಾಮಾನ್ಯ ಜನರಿಗೆ ಶೇ.7.25, ಶೇ.7.75ರಷ್ಟು ಬಡ್ಡಿದರ ಸಿಗಲಿದೆ.
ಇದನ್ನೂ ಓದಿ: BOB Recruitment 2023 : ಬ್ಯಾಂಕ್ ಆಫ್ ಬರೋಡಾದಲ್ಲಿ 500 ಸ್ವಾಧೀನಾಧಿಕಾರಿ ಹುದ್ದೆಗಳಿಗೆ ನೇಮಕ
5 ಲಕ್ಷ ರೂ. ಠೇವಣಿ ಇಟ್ಟರೆ ಎಷ್ಟು ಲಾಭ?
ಹಿರಿಯ ನಾಗರಿಕರಲ್ಲದವರು ಐದು 5 ಲಕ್ಷ ರೂಪಾಯಿಯನ್ನು ಮೂರು ವರ್ಷಗಳವರೆಗೆ ಬ್ಯಾಂಕ್ ಆಫ್ ಬರೋಡಾದಲ್ಲಿ ಠೇವಣಿ ಮಾಡಿದರೆ ಮೂರು ವರ್ಷದ ಬಳಿಕ ಬಡ್ಡಿ ಸೇರಿ ಒಟ್ಟು 6,20,273 ರೂ. ಸಿಗಲಿದೆ. ಹಿರಿಯ ನಾಗರಿಕರಾದರೆ ಇದೇ 5 ಲಕ್ಷ ರೂ. ಸ್ಥಿರ ಠೇವಣಿಗೆ ಬಡ್ಡಿ ಸೇರಿ ಒಟ್ಟು 6,29,474 ರೂ. ಸಿಗಲಿದೆ. ಒಂದರಿಂದ ಮೂರು ವರ್ಷದವರೆಗೆ ಸ್ಥಿರ ಠೇವಣಿ ಇಡುವುದು ಒಳ್ಳೆಯದು ಎಂಬುದು ಹೂಡಿಕೆ ತಜ್ಞರ ಅಭಿಪ್ರಾಯವಾಗಿದೆ.