ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ಫೆಬ್ರವರಿ 1ರಂದು ಮಂಡಿಸಿದ 2023-24ರ ಕೇಂದ್ರ ಬಜೆಟ್‌ನಲ್ಲಿ ಮಹಿಳೆಯರಿಗೆ ಒಂದೇ ಸಲ ಹೂಡಿಕೆ ಮಾಡಬಹುದಾದ ಹೊಸ ಉಳಿತಾಯ ಯೋಜನೆಯನ್ನು ಘೋಷಿಸಿದ್ದಾರೆ. ಈ ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ( Mahila Samman Saving Certificate -MSSC) ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.
ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್‌ನಲ್ಲಿ ಏನೇನಿದೆ?
ಈ ಯೋಜನೆಯಲ್ಲಿ ಮಹಿಳೆ ಅಥವಾ ಹೆಣ್ಣು ಮಗುವಿನ ಹೆಸರಿನಲ್ಲಿ ಹಣವನ್ನು ಠೇವಣಿ ಇಡಬಹುದು. ಇಡಬಹುದಾದ ಠೇವಣಿಯ ಗರಿಷ್ಠ ಮೊತ್ತ 2 ಲಕ್ಷ ರೂ. ಎರಡು ವರ್ಷಗಳಿಗೆ ಡಿಪಾಸಿಟ್ ಇಡಬಹುದು. ಇದಕ್ಕೆ ಸಿಗುವ ಬಡ್ಡಿ ದರ 7.5%. ಈ ಹೂಡಿಕೆಗೆ ಯಾವುದೇ ತೆರಿಗೆ ಅನುಕೂಲಗಳು ಇಲ್ಲ. ಆದರೆ ಭಾಗಶಃ ಹಿಂತೆಗೆತ ಸಾಧ್ಯ. ಈ ಉಳಿತಾಯ ಠೇವಣಿ ಪತ್ರಗಳು ಎರಡು ವರ್ಷದ ಅವಧಿಗೆ ದೊರೆಯಲಿದೆ. ಅಂದರೆ 2025ರ ಮಾರ್ಚ್ ತನಕದ ಅವಧಿಗೆ ಲಭ್ಯವಿದೆ.
ಮಹಿಳೆಯರಿಗೆ ಇದರಲ್ಲಿ ಹೆಚ್ಚು ಬಡ್ಡಿ ದರ ಸಿಗುವುದರಿಂದ ಉಳಿತಾಯ ಮಾಡಲು ಉತ್ತೇಜನ ಸಿಗಲಿದೆ ಎನ್ನುತ್ತಾರೆ ಆರ್ಥಿಕ ಸಲಹೆಗಾರರು.
ಸರ್ಟಿಫಿಕೆಟ್ ಎಲ್ಲಿ, ಯಾವಾಗ ಸಿಗುತ್ತದೆ?
2023ರ ಏಪ್ರಿಲ್ 1ರಿಂದ ಮಹಿಳಾ ಸಮ್ಮಾನ್ ಸರ್ಟಿಫಿಕೆಟ್‌ಗಳು ಲಭ್ಯ. ಸದ್ಯದ ಘೋಷಣೆ ಪ್ರಕಾರ ಇದು 2025ರ ಮಾರ್ಚ್‌ವರೆಗೆ ಮುಂದುವರಿಯುತ್ತದೆ. ಆದರೆ ಆ ಬಳಿಕವೂ ಈ ಯೋಜನೆ ಮುಂದುವರಿಯುವ ಸಾಧ್ಯತೆ ಇದೆ. ಸುಕನ್ಯಾ ಸಮೃದ್ಧಿಯಂತೆ ಸಮೀಪದ ಪೋಸ್ಟ್ ಆಫೀಸ್‌ಗಳಲ್ಲಿ ಮಹಿಳಾ ಸಮ್ಮಾನ್ ಸರ್ಟಿಫಿಕೆಟ್ ಪಡೆಯಬಹುದಾಗಿದೆ. ಮುಂದೆ ಆಯ್ದ ಕೆಲವು ಬ್ಯಾಂಕ್‌ಗಳಲ್ಲೂ ಈ ಸರ್ಟಿಫಿಕೆಟ್ ಪಡೆಯುವ ಅವಕಾಶ ಸಿಗಲೂಬಹುದು. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಸದ್ಯ ಯಾವುದೇ ಮಾಹಿತಿ ನೀಡಿಲ್ಲ. ಏ.1ರ ಬಳಿಕ, ಈ ಸರ್ಟಿಫಿಕೆಟ್ ಎಲ್ಲೆಲ್ಲಿ ಪಡೆಯಬಹುದು ಎಂಬ ಮಾಹಿತಿ ಸಿಗಲಿದೆ.
ಸುಕನ್ಯಾ ಸಮೃದ್ಧಿಗೂ ಎಂಎಸ್‌ಎಸ್‌ಸಿಗೂ ಇರುವ ವ್ಯತ್ಯಾಸ ಏನು?
ಸುಕನ್ಯಾ ಸಮೃದ್ಧಿ ಉಳಿತಾಯ ಯೋಜನೆ ಹೆಣ್ಣು ಮಕ್ಕಳಿಗೆ ವಿಶೇಷವಾಗಿ ಇರುವಂಥದ್ದು. 10 ವರ್ಷದ ಒಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಬಹುದು. ಇದರ ಅವಧಿ 21 ವರ್ಷ. 15ನೇ ವರ್ಷದ ತನಕ ಹೂಡಿಕೆ ಮಾಡಬಹುದು. ಬಾಲಕಿಗೆ 18 ವರ್ಷ ಆಗುವ ತನಕ ಸುಕನ್ಯಾ ಸಮೃದ್ಧಿಯಲ್ಲಿ ಹಣ ಲಾಕ್ ಆಗಿರುತ್ತದೆ. ಬಳಿಕ ಶಿಕ್ಷಣ ಉದ್ದೇಶಕ್ಕೆ ಮಾತ್ರ 50% ಹಿಂಪಡೆಯಬಹುದು.
ಎರಡೂ ಯೋಜನೆಗಳು ಉಳಿತಾಯಕ್ಕೆ ಉತ್ತೇಜಿಸುತ್ತದೆ. ಎಂಎಸ್‌ಎಸ್‌ಸಿ ಎರಡು ವರ್ಷಗಳ ಸಂಕ್ಷಿಪ್ತ ಅವಧಿಯ ಠೇವಣಿ ಯೋಜನೆ. ಆದ್ದರಿಂದ ದೀರ್ಘಾವಧಿ ಉಳಿತಾಯ ಯೋಜನೆಯಾಗಿರುವ ಸುಕನ್ಯಾ ಸಮೃದ್ಧಿ ಜತೆ ಹೋಲಿಸಲಾಗದು.
ಬ್ಯಾಂಕ್‌ಗಳಲ್ಲಿ ಮಹಿಳೆಯರಿಗೆ ಠೇವಣಿಗೆ ಸಿಗುವ ಬಡ್ಡಿ ದರಕ್ಕೆ ಹೋಲಿಸಿದರೆ ಮಹಿಳಾ ಸಮ್ಮಾನ್‌ನಲ್ಲಿ ಹೆಚ್ಚು ಸಿಗಲಿದೆ. ಉದಾಹರಣೆಗೆ ಎಸ್‌ಬಿಐನಲ್ಲಿ ಗರಿಷ್ಠ 7.25%, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ನಲ್ಲಿ 7% ಸಿಗುತ್ತದೆ.