Site icon Vistara News

Banking system : ಬ್ಯಾಂಕ್‌ಗಳಲ್ಲಿ ಲಿಕ್ವಿಡಿಟಿ 9 ತಿಂಗಳಿನಲ್ಲಿಯೇ ಗರಿಷ್ಠ, ಕಾರಣವೇನು?

cash

ಮುಂಬಯಿ: ಭಾರತದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ನಗದು ಲಭ್ಯತೆ ಅಥವಾ ಲಿಕ್ವಿಡಿಟಿಯ ಪ್ರಮಾಣ ಕಳೆದ 9 ತಿಂಗಳಿನಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಇಂಥ ಪರಿಸ್ಥಿತಿಯನ್ನು ಲಿಕ್ವಿಡಿಟಿ ಸರ್‌ಪ್ಲಸ್‌ (Liquidity surplus) ಎನ್ನುತ್ತಾರೆ. ಅಂದರೆ ಬ್ಯಾಂಕ್‌ಗಳು ಆರ್‌ಬಿಐನಲ್ಲಿ ಇಡುತ್ತಿರುವ ಹಣದ ಮೊತ್ತ ಹೆಚ್ಚುತ್ತಿದೆ. ಇದಕ್ಕೆ ಎರಡು ಕಾರಣವಿದೆ. ಸರಕಾರ ಮಾಡುತ್ತಿರುವ ಗಣನೀಯ ಸಾರ್ವಜನಿಕ ವೆಚ್ಚಗಳು ಹಾಗೂ ವಿದೇಶಿ ಬಂಡವಾಳ ಹೂಡಿಕೆಯ ಹರಿವು ಹೆಚ್ಚುತ್ತಿರುವುದು. ಲಿಕ್ವಿಡಿಟಿ ಎಂದರೆ ನಗದು ಲಭ್ಯತೆ. ಅಂದರೆ ನಿಮಗೆ ಬೇಕಾದಾಗ ನಗದಾಗಿ ಪಡೆಯಬಹುದು.

ಕಳೆದ ಏಪ್ರಿಲ್‌ನಲ್ಲಿ ಆರ್‌ಬಿಐ ಪ್ರತಿ ದಿನ ಸರಾಸರಿ 2 ಲಕ್ಷ ಕೋಟಿ ರೂ.ಗಳನ್ನು ವ್ಯವಸ್ಥೆಯಿಂದ ಹೀರಿಕೊಂಡಿದೆ. ಸರಕಾರದ ತೆರಿಗೆ ಸಂಗ್ರಹ ಉನ್ನತ ಮಟ್ಟದಲ್ಲಿ ಇರುವುದರಿಂದ ಸಾರ್ವಜನಿಕ ಯೋಜನೆಗಳಿಗೆ ಸರಕಾರದ ವೆಚ್ಚದ ಪ್ರಮಾಣವೂ ಏರಿಕೆಯಾಗಿದೆ. ಇದರ ಪರಿಣಾಮ ಬ್ಯಾಂಕಿಂಗ್‌ನಲ್ಲಿ ಲಿಕ್ವಿಡಿಯ ಪ್ರಮಾಣ ಏರಿಕೆಯಾಗಿದೆ ಎಂದು ವರದಿಯಾಗಿದೆ.

ಪರ್ಸನಲ್‌ ಲೋನ್‌ ವಿತರಣೆ ಭಾರಿ ಹೆಚ್ಚಳ:

ಬ್ಯಾಂಕ್‌ಗಳಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್‌ ಲೋನ್‌ ವಿತರಣೆ ಈಗ ಮುಂಚೂಣಿಯಲ್ಲಿದೆ. ಕಾರ್ಪೊರೇಟ್‌ ಸಾಲವನ್ನೂ ಅದು ಮೀರಿದೆ. 2022ರ ಫೆಬ್ರವರಿ ಮತ್ತು 2023ರ ಫೆಬ್ರವರಿ ನಡುವೆ 2.2 ಲಕ್ಷ ಕೋಟಿ ರೂ. ಪರ್ಸನಲ್‌ ಲೋನ್‌ ವಿತರಣೆಯಾಗಿತ್ತು. (unsecured personal loan) ಇದೇ ಅವಧಿಯಲ್ಲಿ ದೊಡ್ಡ ಕಾರ್ಪೊರೇಟ್‌ ಕಂಪನಿಗಳ ವಲಯಕ್ಕೆ ನೀಡಿದ ಸಾಲ 1.18 ಲಕ್ಷ ಕೋಟಿ ರೂ. ಆಗಿತ್ತು. ಗೃಹ ಸಾಲ ವಿತರಣೆಯಲ್ಲಿ 15% ಬೆಳವಣಿಗೆ ದಾಖಳಾಗಿದೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಸರ್ಕಾರಿ ಉದ್ಯೋಗಿಗಳನ್ನು ಗುರಿಯಾಗಿಸಿ ಸಾಲ ವಿತರಿಸುತ್ತಿದ್ದರೆ, ಖಾಸಗಿ ಬ್ಯಾಂಕ್‌ಗಳು ಉತ್ತಮ ಕ್ರೆಡಿಟ್‌ ಸ್ಕೋರ್‌ ಇರುವವರಿಗೆ ಸಾಲ ವಿತರಿಸಲು ಆದ್ಯತೆ ನೀಡುತ್ತಿವೆ.

Exit mobile version