ನವ ದೆಹಲಿ: ಕೇಂದ್ರ ಸರ್ಕಾರವು ಸಾರ್ವಜನಿಕ ರಕಷಣಾ ವಲಯದ ಸಂಸ್ಥೆ, ಬೆಂಗಳೂರು ಮೂಲದ ಬೆಮೆಲ್‌ನಿಂದ ತನ್ನ 26% ಷೇರುಗಳನ್ನು ಮಾರಾಟ ಮಾಡಲು ( BEML Divestment) ಫೈನಾನ್ಷಿಯಲ್ ಬಿಡ್‌ಗಳನ್ನು ಆಹ್ವಾನಿಸಿದೆ. ಬೆಮೆಲ್ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಬೆಮೆಲ್ ತನ್ನ ಪ್ರಮುಖವಲ್ಲದ ಬಿಸಿನೆಸ್ ಅನ್ನು ಬೆಮೆಲ್ ಲ್ಯಾಂಡ್ ಅಸೆಟ್ಸ್ ಎಂದು ಸ್ಟಾಕ್ ಮಾರ್ಕೆಟ್‌ನಲ್ಲಿ ಕಳೆದ ತಿಂಗಳು ನೋಂದಣಿ ಮಾಡಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಬೆಮೆಲ್ ರಕ್ಷಣೆ ಮತ್ತು ಏರೋಸ್ಪೇಸ್ ವಲಯದಲ್ಲಿ ನಾನಾ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಗಣಿಗಾರಿಕೆ ಮತ್ತು ನಿರ್ಮಾಣ ವಲಯದ ಯಂತ್ರೋಪಕರಣಗಳನ್ನು ಉತ್ಪಾದಿಸುತ್ತದೆ. ಮೆಟ್ರೊ, ರೈಲ್ವೆ ವಲಯದಲ್ಲೂ ಸಕ್ರಿಯವಾಗಿದೆ. ಮೆಟ್ರೊ ಬೋಗಿಗಳನ್ನೂ ತಯಾರಿಸುತ್ತದೆ.
ಕೇಂದ್ರ ಸರ್ಕಾರ ಬೆಮೆಲ್‌ನಲ್ಲಿ 54.03% ಷೇರುಗಳನ್ನು ಹೊಂದಿದೆ. 26% ಷೇರುಗಳ ವಿಕ್ರಯದಿಂದ ಸರ್ಕಾರದ ಬೊಕ್ಕಸಕ್ಕೆ 1,500 ಕೋಟಿ ರೂ. ದೊರೆಯುವ ಸಾಧ್ಯತೆ ಇದೆ. 2016ರಲ್ಲಿ ಕೇಂದ್ರ ಸಚಿವ ಸಂಪುಟವು ಬೆಮೆಲ್‌ನಿಂದ ಬಂಡವಾಳ ಹಿಂತೆಗೆತಕ್ಕೆ ಅನುಮೋದಿಸಿತ್ತು. 2022ರ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಬೆಮೆಲ್‌ನ ಲಾಭ 67 ಕೋಟಿ ರೂ.ಗೆ ಇಳಿದಿತ್ತು. ಕಂಪನಿಯ ಆದಾಯ 1039 ಕೋಟಿ ರೂ.ಗೆ ತಗ್ಗಿತ್ತು. ಬೆಮೆಲ್‌ನ ಕಾರ್ಮಿಕ ಒಕ್ಕೂಟಗಳು ಸರ್ಕಾರದ ಪ್ರಸ್ತಾಪಗಳನ್ನು ಹಿಂದಿನಿಂದಲೂ ವಿರೋಧಿಸಿವೆ.
ಇದನ್ನೂ ಓದಿ :BEML | ಬೆಂಗಳೂರಿನ ಬೆಮೆಲ್‌ನಿಂದ ಬಂಡವಾಳ ಹಿಂತೆಗೆತ ಶೀಘ್ರ ಸಂಭವ
ಬೆಮೆಲ್ ಲಿಮಿಟೆಟ್ 1964ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಿತ್ತು. ಅರ್ತ್ ಮೂವಿಂಗ್, ಮೆಟ್ರೊ ಕೋಚ್, ಗಣಿಗಾರಿಕೆಯ ಬೃಹತ್ ಯಂತ್ರಗಳನ್ನು ಉತ್ಪಾದಿಸುತ್ತದೆ. ಎನ್‌ಎಸ್‌ಇನಲ್ಲಿ ಇದರ ಷೇರು ನೋಂದಣಿಯಾಗಿದೆ. ಬೆಂಗಳೂರು, ಮೈಸೂರು, ಪಾಲಕ್ಕಾಡ್‌ನಲ್ಲಿ ಘಟಕವನ್ನು ಹೊಂದಿದೆ.