ಉತ್ತಮ ಹೂಡಿಕೆಯ ಖಾತೆ ಹೇಗಿರುತ್ತದೆ? ಮ್ಯೂಚುವಲ್ ಫಂಡ್, ಷೇರು, ಬಾಂಡ್, ಇಟಿಎಫ್, ರಿಯಲ್ ಎಸ್ಟೇಟ್, ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡಬಹುದು. ತಕ್ಷಣ ಸಿಗುವಂಥ ಫಿಕ್ಸೆಡ್ ಡಿಪಾಸಿಟ್ ನಲ್ಲೂ ಒಂದಷ್ಟು ಹಣವನ್ನು ಇಟ್ಟಿರಬೇಕು. ಸಾರ್ವಜನಿಕ ಭವಿಷ್ಯನಿಧಿ ಅಥವಾ ಪಿಪಿಎಫ್ ಸೇಫ್ ಇನ್ವೆಸ್ಟ್ ಮೆಂಟ್ ಆಗುತ್ತದೆ. ( Best Investment ) ಆರೋಗ್ಯ ವಿಮೆ, ಟರ್ಮ್ ಇನ್ಷೂರೆನ್ಸ್ ಕೂಡ ಕಡ್ಡಾಯವಾಗಿ ಇಟ್ಟುಕೊಳ್ಳಿ.
ದೀರ್ಘಾವಧಿ ಹೂಡಿಕೆಯ ನಿಟ್ಟಿನಲ್ಲಿ ಮ್ಯೂಚುವಲ್ ಫಂಡ್, ಷೇರು, ಸೈಟ್, ಫ್ಲ್ಯಾಟ್, ಕೃಷಿ ಭೂಮಿ ಅಥವಾ ಕಮರ್ಶಿಯಲ್ ಆಸ್ತಿಗಳಲ್ಲಿ ಹೂಡಿಕೆ ಉತ್ತಮ ಆಯ್ಕೆಯಾಗುತ್ತದೆ. ಷೇರುಗಳನ್ನು ಖರೀದಿಸುವುದರಿಂದ ನಿಮ್ಮ ಸಂಪತ್ತು ಬೆಳೆಯುವುದರ ಜತೆಗೆ ಡಿವಿಡೆಂಡ್ ಕೂಡ ಸಿಗುತ್ತದೆ. ನಿಮ್ಮ ಬ್ರೋಕಿಂಗ್ ಕಂಪನಿಯು ನಿಮ್ಮ ಪರ ಷೇರುಗಳ ಕೊಡು-ಕೊಳ್ಳುವಿಕೆಯನ್ನು ಮಾಡುವುದಲ್ಲದೆ, ಹೂಡಿಕೆಯ ಬಗ್ಗೆ ಉತ್ತಮ ಮಾರ್ಗದರ್ಶಕವೂ ಆಗಿರಬೇಕು.
ಹೂಡಿಕೆಗಳಿಗೆ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಲೆಕ್ಕದಲ್ಲಿ ರಿಟರ್ನ್ ಸಿಗುತ್ತದೆ. ಈಕ್ವಿಟಿ ಷೇರು, ಡಿಬೆಂಚರ್‌ಗಳಲ್ಲಿ ಬಂಡವಾಳ ವೃದ್ಧಿಯ ರೂಪದಲ್ಲೂ ಸಿಗುತ್ತದೆ. ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್‌ಗೆ ತೆರಿಗೆ ವಿನಾಯಿತಿಗಳೂ ಸಿಗುತ್ತದೆ.
ನೀವು ನಿಮ್ಮ ಕರಿಯರ್ ಅನ್ನು ಶುರು ಮಾಡಿದ ಮೊದಲ ಕೆಲವು ವರ್ಷಗಳಲ್ಲಿ ದೊಡ್ಡ ಮೊತ್ತದ ಇನ್ವೆಸ್ಟ್ ಮೆಂಟ್ ಮಾಡಲು ಸಾಧ್ಯವಾಗದು. ಅದು ಸಹಜ ಕೂಡ. ಹೀಗಾಗಿ ರಿಯಲ್ ಎಸ್ಟೇಟ್‌ನಂಥ ಹೆಚ್ಚು ಹಣ ಬೇಕಾಗುವ ಹೂಡಿಕೆ ಮಾಡಲು ಕಷ್ಟವಾದೀತು. ಹೀಗಿದ್ದರೂ ಒಂದು ಸಲ ನೀವು ಸಾಲದ ಡೌನ್ ಪೇಮೆಂಟ್ ಹಾಗೂ ಸಮಾನ ಮಾಸಿಕ ಕಂತು ಅಥವಾ ಇಎಂಐ ಭರಿಸುವ ಸಾಮರ್ಥ್ಯ ಗಳಿಸಿದ ಬಳಿಕ ಆಸ್ತಿ ಖರೀದಿಸುವುದು ಉತ್ತಮ ಆಯ್ಕೆ.
ಇದನ್ನೂ ಓದಿ: ಮನಿ ಕಹಾನಿ ಅಂಕಣ | ಅವರಿಗೆ ಹಣದ ಬದಲು ಒಂದಷ್ಟು ಸಮಯ ಕೊಡಿ
ನೆನಪಿಟ್ಟುಕೊಳ್ಳಿ. ಭೂಮಿಯ ಬೆಲೆ ದೀರ್ಘಾವಧಿಗೆ ಸದಾ ಏರುತ್ತದೆ. ಮಾತ್ರವಲ್ಲದೆ ನಿಮ್ಮ ಪ್ರಾಪರ್ಟಿ ಭವಿಷ್ಯದಲ್ಲಿ ನಿಮಗೆ ನಿರಂತರವಾಗಿ ಆದಾಯ ಕೊಡುವ ಆಸ್ತಿಯಾಗಿಯೂ ಪರಿವರ್ತನೆಯಾಗಬಹುದು. ಅಂಥ ಅನೇಕ ಅವಕಾಶಗಳು ತೆರೆದುಕೊಳ್ಳುತ್ತವೆ. ಆದರೆ ದಾಖಲಾತಿಗಳನ್ನು ಮಾತ್ರ ತಜ್ಞರ ನೆರವಿನೊಂದಿಗೆ ಪರಿಶೀಲಿಸಿ ಆಸ್ತಿಯನ್ನು ಖರೀದಿಸಿ. ನೀವು ಯಾವುದಾದರೂ ಕಂಪನಿಯ ಉದ್ಯೋಗಿ ಆಗಿರಬಹುದು, ಸ್ವಂತ ಬಿಸಿನೆಸ್ ಮಾಡುತ್ತಿರಬಹುದು. ರಿಯಲ್ ಎಸ್ಟೇಟ್ ಆಸ್ತಿಯಲ್ಲಿ ಹೂಡಿಕೆ ಮಾಡಿದರೆ, ಒಂದಿಲ್ಲೊಂದು ದಿನ ಪ್ರಯೋಜನಕ್ಕೆ ಬರುತ್ತದೆ.
ಹೂಡಿಕೆ ಅಥವಾ ಇನ್ವೆಸ್ಟ್‌ಮೆಂಟ್ ವಿಚಾರಕ್ಕೆ ಬಂದಾಗ ಲಿಕ್ವಿಡಿಟಿ ಎನ್ನುವ ಪದವನ್ನು ನೀವು ಕೇಳಿರಬಹುದು. ಏನಿದು ಲಿಕ್ವಿಡಿಟಿ? ಉತ್ತಮ ಹೂಡಿಕೆಯ ಮಾನದಂಡದಲ್ಲಿ ಇದು ಮುಖ್ಯ. ನೀವು ಎಷ್ಟು ಬೇಗ ನಿಮ್ಮ ಹೂಡಿಕೆಯನ್ನು ನಗದೀಕರಿಸಿಕೊಳ್ಳಬಹುದು ಎಂಬುದನ್ನು ಲಿಕ್ವಿಡಿಟಿ ಪರಿಗಣಿಸುತ್ತದೆ. ಲಿಕ್ವಿಡಿಟಿ ಹೆಚ್ಚು ಇದೆ ಎಂದರೆ, ನಿಮ್ಮ ಅಸೆಟ್ ಅನ್ನು ಬೇಗ ಕ್ಯಾಶ್ ಆಗಿ ಪರಿವರ್ತಿಸಬಹುದು ಎಂದರ್ಥ. ಲಿಕ್ವಿಡಿಟಿ ಕಡಿಮೆ ಎಂದರೆ ಅಂಥ ಅಸೆಟ್ ಅನ್ನು ಬೇಗ ಕ್ಯಾಶ್ ಆಗಿ ಪರಿವರ್ತಿಸಲು ಆಗೋದಿಲ್ಲ ಎಂದರ್ಥ. ಉದಾಹರಣೆಗೆ ನಿಮ್ಮ ಬಳಿ ಚಿನ್ನ ಮತ್ತು ಸೈಟ್ ಇದೆ ಎಂದಿಟ್ಟುಕೊಳ್ಳಿ. ಸೈಟಿಗೆ ಹೋಲಿಸಿದರೆ ಚಿನ್ನವನ್ನು ಬೇಗ ಮಾರಾಟ ಮಾಡಿ ನಗದು ಪಡೆಯಬಹುದು. ಇಲ್ಲಿ ಚಿನ್ನದ ಲಿಕ್ವಿಡಿಟಿ ಹೆಚ್ಚು. ನಿಮ್ಮ ಕೈಯಲ್ಲಿರುವ ನಗದು ಹೆಚ್ಚು ಲಿಕ್ವಿಡಿಟಿ ಹೊಂದಿರುವ ಸಾಧನ.
ಬ್ಯಾಂಕ್ ಖಾತೆಯಲ್ಲಿರುವ ಹಣ, ಫಿಕ್ಸೆಡ್ ಡಿಪಾಸಿಟ್ ಕೂಡ ಲಿಕ್ವಿಡಿಟಿಯನ್ನು ಹೆಚ್ಚು ಹೊಂದಿರುತ್ತವೆ. ಷೇರು ಕೂಡ ಹಾಗೆಯೇ. ಚಿನ್ನ, ಬೆಳ್ಳಿ ನಂತರದ ಸ್ಥಾನದಲ್ಲಿ ಬರುತ್ತವೆ. ಆದರೆ ರಿಯಲ್ ಎಸ್ಟೇಟ್ ಪ್ರಾಪರ್ಟಿಗಳು ಲಿಕ್ವಿಡಿಟಿಯ ವಿಷಯದಲ್ಲಿ ಕೊನೆಯಲ್ಲಿರುತ್ತವೆ. ಏಕೆಂದರೆ ಇದನ್ನು ಫಟಾಫಟ್ ಮಾರಾಟ ಮಾಡಿ ನಗದೀಕರಿಸಲು ಆಗುವುದಿಲ್ಲ.