ನವ ದೆಹಲಿ: ಭಾರ್ತಿ ಏರ್‌ಟೆಲ್ ಕಳೆದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ 1,588 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, 92% ಏರಿಕೆಯಾಗಿದೆ. (Bharti Airtel Q3 Results) ಆದಾಯ 35,804 ಕೋಟಿ ರೂ.ಗೆ ಏರಿದ್ದು, 20% ಹೆಚ್ಚಳವಾಗಿದೆ. ಸರಾಸರಿ ಅಂದಾಜಿಗೆ ಹೋಲಿಸಿದರೆ (2,673 ಕೋಟಿ ರೂ.) ನಿವ್ವಳ ಲಾಭ ಇಳಿಕೆಯಾಗಿದ್ದರೂ, ಆದಾಯ ಸರಾಸರಿ ಅಂದಾಜಿಗಿಂತ (35,299 ಕೋಟಿ ರೂ.) ಏರಿಕೆಯಾಗಿದೆ. ಮೂರನೇ ತ್ರೈಮಾಸಿಕದಲ್ಲಿ ಒಟ್ಟು ವೆಚ್ಚ 15,164 ಕೋಟಿ ರೂ.ಗಿಂತ 17,351 ಕೋಟಿ ರೂ.ಗೆ ವೃದ್ಧಿಸಿದೆ.
ಏರ್ ಟೆಲ್ ಪ್ರತಿ ಬಳಕೆದಾರರಿಂದ ಸರಾಸರಿ ಆದಾಯವನ್ನು (ARPU) 193 ರೂ.ಗೆ ಏರಿಸಿದೆ. ಹಿಂದಿನ ತ್ರೈಮಾಸಿಕದಲ್ಲಿ ಇದು 190 ರೂ. ಇತ್ತು. ಹೋಮ್ ಬ್ರಾಡ್ ಬ್ಯಾಂಡ್ ಬಿಸಿನೆಸ್‌ನಲ್ಲಿ ಕಂಪನಿ ಪ್ರಗತಿ ದಾಖಲಿಸಿದೆ. 5ಜಿ ನೆಟ್‌ವರ್ಕ್ ವಿಸ್ತರಣೆ ಕೂಡ ಚುರುಕಾಗಿದೆ ಎಂದು ಕಂಪನಿ ತಿಳಿಸಿದೆ.
ಭಾರ್ತಿ ಏರ್‌ಟೆಲ್ ಡಿಸೆಂಬರ್‌ನಲ್ಲಿ 36.9 ಕೋಟಿ ಗ್ರಾಹಕರ ನೆಲೆಯನ್ನು ಹೊಂದಿತ್ತು. ಏರ್‌ಟೆಲ್ ಕಳೆದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಒಟ್ಟು 9,314 ಕೋಟಿ ರೂ. ಬಂಡವಾಳ ವೆಚ್ಚ ಮಾಡಿತ್ತು.