ವಾಷಿಂಗ್ಟನ್: ಅಮೆರಿಕದ ಈ ಮಹಿಳೆಯ ಹೆಸರು ಗ್ಲೋರಿಯಾ ರಿಚರ್ಡ್ಸ್, ವಯಸ್ಸು 34 ವರ್ಷ. ಪ್ರತಿ ದಿನ 1.6 ಲಕ್ಷ ರೂ. ಆದಾಯ ಇರುವ ಉದ್ಯೋಗ ಅವರದ್ದು. (2,000 ಡಾಲರ್) ಹಾಗಾದರೆ ಅವರ ಕೆಲಸವೇನು? ಬಿಲಿಯನೇರ್ ಅಥವಾ ಆಗರ್ಭ ಶ್ರೀಮಂತರ ಮಕ್ಕಳ ಲಾಲನೆ-ಪಾಲನೆ. ಆಯಾ ಆಗಿ ತಮ್ಮ ಕೆಲಸದ ಅನುಕೂಲ- ಅನಾನುಕೂಲಗಳನ್ನು ಅವರು ಇತ್ತೀಚೆಗೆ ವಿವರಿಸಿದ್ದಾರೆ.
ಅನುಕೂಲ ಏನೇನು?
ಬಿಲಿಯನೇರ್ ಮಕ್ಕಳನ್ನು ನೋಡಿಕೊಳ್ಳುವ ಕೆಲಸವಾದ್ದರಿಂದ ದಿನಕ್ಕೆ 2,000 ಡಾಲರ್ (ದಿನಕ್ಕೆ 1.6 ಲಕ್ಷ ರೂ.) ಸಂಬಳ ಬರುತ್ತದೆ. ಇದು ದೊಡ್ಡ ಆಕರ್ಷಣೆ. ಜತೆಗೆ ವಿಶ್ವದ ನಾನಾ ಕಡೆಗಳಿಗೆ ಸುಸಜ್ಜಿತ ಖಾಸಗಿ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ಸಿಗುತ್ತೆ. ತಮ್ಮ ವಾರ್ಷಿಕ ಆದಾಯದಲ್ಲಿ 90% ಈ ಕೆಲಸದಿಂದ ಸಿಗುತ್ತದೆ ಎನ್ನುತ್ತಾರೆ ಅವರು.
ವರ್ಷದ ಮೊದಲ ಎರಡು ತಿಂಗಳು ಆಯಾ ಆಗಿ ಬಿಲಿಯನೇರ್‌ಗಳ ಮಕ್ಕಳನ್ನು ನೋಡಿಕೊಂಡರೂ, ಅದರಿಂದ ಸಿಗುವ ಆದಾಯ ಉಳಿದ ತಿಂಗಳುಗಳಿಗೆ ಸಾಕಾಗುತ್ತದೆ ಎನ್ನುತ್ತಾರೆ ಗ್ಲೋರಿಯಾ ರಿಚರ್ಡ್ಸ್. ದಿನಕ್ಕೆ 12-15 ಗಂಟೆಯ ಕೆಲಸಕ್ಕೆ ಪ್ರತಿಯಾಗಿ 2,000 ಡಾಲರ್ ಸಿಗುತ್ತದೆ. ಐಷಾರಾಮಿ ಕಾರುಗಳಲ್ಲಿ ಓಡಾಡಬಹುದು. ಸಿರಿವಂತರ ಮಕ್ಕಳ ಬರ್ತ್ ಡೇ ಸಮಾರಂಭದಲ್ಲಿ ಭಾಗವಹಿಸಬಹುದು. ಆಗ ಪಾರ್ಟಿಯ ಬಾಬ್ತು ಇವರಿಗೂ ಹೆಚ್ಚುವರಿ ಹಣ, ಉಡುಗೊರೆ ಸಿಗುತ್ತದೆ.
ಹೀಗಿದ್ದರೂ ಕೆಲವು ಅಡಚಣೆಗಳೂ ಗ್ಲೋರಿಯಾ ಅವರಿಗೆ ಆಗಿದೆಯಂತೆ. ಕಪ್ಪು ವರ್ಣದ ಮಹಿಳೆಯಾದ್ದರಿಂದ ಶ್ವೇತ ವರ್ಣೀಯರ ಮಕ್ಕಳನ್ನು ಲಾಲನೆ ಪಾಲನೆ ಮಾಡುವಾಗ ಭಿನ್ನ ಸಾಂಸ್ಕೃತಿಕ ಸನ್ನಿವೇಶವನ್ನು ನಿಭಾಯಿಸಬೇಕಾಗುತ್ತದೆ. ಇದು ಸವಾಲಿನದ್ದು ಎನ್ನುತ್ತಾರೆ ಗ್ಲೋರಿಯಾ.
ಗ್ರಾಹಕರ ಮೂಡ್ ಕೆಲವೊಮ್ಮೆ ಇದ್ದಕ್ಕಿದ್ದಂತೆ ಬದಲಾಗುತ್ತದೆ. ಅದಕ್ಕೆ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟ. ಬಿಲಿಯನೇರ್‌ಗಳ ಕುಟುಂಬದಲ್ಲಿ ಡೈವೋರ್ಸ್, ಸಾವು ಇತ್ಯಾದಿ ಘಟನೆಗಳನ್ನು ಕಂಡಿದ್ದೇನೆ. ಆಗ ಸದಸ್ಯರು ಭಾವುಕರಾಗುತ್ತಾರೆ. ಕೆಲವೊಮ್ಮೆ ಯಾವುದೋ ಸಂದರ್ಭ ನನ್ನ ಮೇಲೆ ಸಿಟ್ಟಾಗುವುದೂ ಇದೆ. ಆ ಎಲ್ಲ ಸಂದರ್ಭಗಳನ್ನು ಸೂಕ್ಷ್ಮವಾಗಿ ನಿಭಾಯಿಸಬೇಕಾಗುತ್ತದೆ ಎನ್ನುತ್ತಾರೆ ಗ್ಲೋರಿಯಾ.
ವಿಮಾನ ಪ್ರಯಾಣಕ್ಕೆ ಮುನ್ನ ತೂಕ ಪರಿಶೀಲನೆ:
ಏರ್ ನ್ಯೂಜಿಲೆಂಡ್ ಏರ್‌ಲೈನ್ ಸಂಸ್ಥೆಯು ಮುಂಬರುವ ಜೂನ್‌ನಿಂದ ಹೊಸ ನಿಯಮ ಜಾರಿಗೊಳಿಸಿದೆ. ಪ್ರಯಾಣಕ್ಕೆ ಮುನ್ನ ಪ್ರಯಾಣಿಕರ ತೂಕವನ್ನು ಪರಿಶೀಲನೆ ಮಾಡಲು ನಿರ್ಧರಿಸಿದೆ. ವಿಮಾನದ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಇಲ್ಲಿ ಪ್ರಯಾಣಿಕರ ತೂಕ ಎಲ್ಲೂ ಡಿಸ್ ಪ್ಲೇ ಆಗುವುದಿಲ್ಲ, ಆದರೆ ತೂಕ ಎಷ್ಟೆಂಬುದನ್ನು ಏರ್‌ಲೈನ್ ಖಾತರಿಪಡಿಸುತ್ತದೆ.