ಬೆಂಗಳೂರು: ಮುಂಬಯಿನಲ್ಲಿ 66, ದಿಲ್ಲಿಯಲ್ಲಿ 39 ಹಾಗೂ ಬೆಂಗಳೂರಿನಲ್ಲಿ 21 ಬಿಲಿಯನೇರ್‌ಗಳು ಇದ್ದಾರೆ ಎಂದು ಹುರುನ್ ಗ್ಲೋಬಲ್ ರಿಚ್ ಲಿಸ್ಟ್ ತಿಳಿಸಿದೆ. ( M3M Hurun Global Rich List ) ದೇಶದ 24 ನಗರಗಳು ಮತ್ತು ಪಟ್ಟಣಗಳು 187 ಬಿಲಿಯನೇರ್‌ಗಳನ್ನು (Billionaires) ಒಳಗೊಂಡಿದೆ. ಬಿಲಿಯನೇರ್‌ಗಳ (ಶತಕೋಟ್ಯಧಿಪತಿಗಳು) ಸಾಂದ್ರತೆಯಲ್ಲಿ ಭಾರತ ವಿಶ್ವದಲ್ಲೇ 6ನೇ ಸ್ಥಾನವನ್ನು ಗಳಿಸಿದೆ.
ಹುರುನ್ ಗ್ಲೋಬಲ್ ರಿಚ್ ಲಿಸ್ಟ್ ಪ್ರಕಾರ 2022ರಲ್ಲಿ ಅತಿ ಹೆಚ್ಚು ಬಿಲಿಯನೇರ್‌ಗಳನ್ನು ಸೃಷ್ಟಿಸಿದ ಟಾಪ್ 25 ನಗರಗಳಲ್ಲಿ ಮುಂಬಯಿ, ದಿಲ್ಲಿ, ಬೆಂಗಳೂರು ಇದೆ. ಮುಂಬಯಿನಲ್ಲಿ ಇರುವ 66 ಬಿಲಿಯನೇರ್‌ಗಳ ಪೈಕಿ ಮುಕೇಶ್ ಅಂಬಾನಿ ಸಿರಿವಂತರಾಗಿದ್ದಾರೆ. ಕಳೆದ 10 ವರ್ಷಗಳಲ್ಲಿ ಅವರ ಸಂಪತ್ತಿನಲ್ಲಿ 356% ಏರಿಕೆಯಾಗಿದೆ. ದಿಲೀಪ್ ಸಾಂಘ್ವಿ, ರಾಧಾಕಿಶನ್ ಧಮಾನಿ, ಕುಮಾರ ಮಂಗಲಂ ಬಿರ್ಲಾ ಮತ್ತು ಉದಯ್ ಕೋಟಕ್ ನಂತರದ ಸ್ಥಾನದಲ್ಲಿದ್ದಾರೆ.
ಮುಕೇಶ್ ಅಂಬಾನಿ ಅವರ ಸಂಪತ್ತಿನಲ್ಲಿ 20 ಪರ್ಸೆಂಟ್ ಇಳಿಕೆಯಾಗಿದ್ದು, 82 ಶತಕೋಟಿ ಡಾಲರ್‌ಗೆ (6.72 ಲಕ್ಷ ಕೋಟಿ ರೂ.) ಇಳಿದಿದೆ. ಹೊಸದಿಲ್ಲಿಯ ವಿಭಾಗದಲ್ಲಿ ಶಿವ್ ನಡಾರ್ ಅವರು ಹುರುನ್ ಲಿಸ್ಟ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಜಗತ್ತಿನ ಟಾಪ್ 10 ಸಿರಿವಂತರ ಪಟ್ಟಿಯನ್ನೂ ಕಂಪನಿ ಬಿಡುಗಡೆಗೊಳಿಸಿದ್ದು, ಇದರಲ್ಲಿ ಭಾರತದ ಮುಕೇಶ್ ಅಂಬಾನಿ ಇದ್ದಾರೆ.