ಹೊಸದಿಲ್ಲಿ: ಕೇಂದ್ರ ಸರಕಾರ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ನಿಂದ ಬಂಡವಾಳ ಹಿಂತೆಗೆತ ಪ್ರಸ್ತಾಪವನ್ನುರದ್ದುಗೊಳಿಸಿದೆ. ಕಣದಲ್ಲಿ ಕೇವಲ ಒಬ್ಬರು ಬಿಡ್‌ದಾರರು ಮಾತ್ರ ಉಳಿದ ಕಾರಣ ರದ್ದುಪಡಿಸಲಾಗಿದೆ.
ಆರಂಭದಲ್ಲಿ ಮೂವರು ಬಿಡ್ಡರ್‌ಗಳಿದ್ದರೂ, ಕೊನೆಗೆ ವೇದಾಂತ ಮಾತ್ರ ಉಳಿದಿತ್ತು. ಇತರ ಬಿಡ್ ದಾರರಿಗೆ ಹಣಕಾಸು ವ್ಯವಸ್ಥೆ ಹೊಂದಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಯೋಜನೆಯನ್ನು ರದ್ದುಪಡಿಸಲಾಗಿದೆ.
ಕೇಂದ್ರ ಸರಕಾರ ಆರಂಭದಲ್ಲಿ ಬಿಪಿಸಿಎಲ್‌ನ ಎಲ್ಲ ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿತ್ತು. ಈ ಮೂಲಕ 61,000 ಕೋಟಿ ರೂ. ಸಂಗ್ರಹಿಸುವ ಉದ್ದೇಶ ಇತ್ತು. ಬಿಪಿಸಿಎಲ್ 2021ರಲ್ಲಿ 19,042 ಕೋಟಿ ರೂ. ನಿವ್ವಳ ಆದಾಯ ಗಳಿಸಿತ್ತು. ಇದರೊಂದಿಗೆ ಬಂಡವಾಳ ಹಿಂತೆಗೆತ ಯೋಜನೆಗಳಿಗೆ ಹಿನ್ನಡೆಯಾದಂತಾಗಿದೆ.
ಭಾಗಶಃ ಮಾರಾಟ ಸಂಭವ
ವೇದಾಂತ ಸಮೂಹದ ಮುಖ್ಯಸ್ಥ ಅನಿಲ್ ಅಗರವಾಲ್ ಅವರು ಕೆಲ ದಿನಗಳ ಹಿಂದೆಯೇ ಬಿಪಿಸಿಎಲ್ ಬಂಡವಾಳ ಹಿಂತೆಗೆತ ಯೋಜನೆ ಬಗ್ಗೆ ಸರಕಾರ ಮರುಪರಿಶೀಲಿಸುತ್ತಿದೆ. ಇದು ನಡೆಯುವುದಿಲ್ಲ. ನಾವು ಬಿಡ್ ಅನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದರು. ಅನಿಲ್ ಅಗರವಾಲ್ ಹೇಳಿಕೆಯ ಬೆನ್ನಲ್ಲೇ ಬಿಪಿಸಿಎಲ್ ಷೇರುಗಳ ದರ ಶೇ.5 ಕುಸಿದಿತ್ತು. ಬಿಪಿಸಿಎಲ್‌ನ ಖಾಸಗೀಕರಣದಿಂದ ಅದರ ಹಣಕಾಸು ಮತ್ತು ಬಂಡವಾಳ ಪರಿಸ್ಥಿತಿ ಸುಧಾರಿಸಬಹುದು ಎಂಬ ಆಶಯವಿತ್ತು. ಹೀಗಿದ್ದರೂ ಮುಂಬರುವ ದಿನಗಳಲ್ಲಿ ಸರಕಾರ ಮತ್ತೆ ಬಿಪಿಸಿಎಲ್ ಬಂಡವಾಳ ಹಿಂತೆಗೆತಕ್ಕೆ ಯತ್ನಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
ಇದನ್ನೂ ಓದಿ: ಎಲ್‌ಐಸಿ ಷೇರುದಾರರಿಗೆ 42,500 ಕೋಟಿ ರೂ. ನಷ್ಟ
ಮೂಲಗಳ ಪ್ರಕಾರ ಸರಕಾರ ಬಿಪಿಸಿಎಲ್‌ನಿಂದ ತನ್ನ ಸಂಪೂರ್ಣ ಶೇ.52.98 ಷೇರುಗಳನ್ನು ಮಾರಾಟ ಮಾಡುವ ಬದಲು ಶೇ.25 ಷೇರುಗಳನ್ನು ಮಾರಾಟ ಮಾಡುವ ಹೊಸ ಪ್ರಸ್ತಾಪದೊಂದಿಗೆ ಬರುವ ಸಾಧ್ಯತೆ ಇದೆ.