- ಜುಲೈ-ಸೆಪ್ಟೆಂಬರ್ ವೇಳೆಗೆ ಕಚ್ಚಾ ತೈಲ ದರ ಬ್ಯಾರೆಲ್‌ಗೆ 140 ಡಾಲರ್‌ಗೆ ಜಿಗಿಯಲಿದೆ ಎಂದ ಗೋಲ್ಡ್‌ಮನ್ ಸ್ಯಾಕ್ಸ್ ವರದಿ
- ಕಚ್ಚಾ ತೈಲ ದರ 140 ಡಾಲರ್‌ಗೆ ಏರಿದರೆ ಅಮೆರಿಕದಲ್ಲಿ 12-18 ತಿಂಗಳಲ್ಲಿ ಆರ್ಥಿಕ ಹಿಂಜರಿತ
- ಸೌದಿ ಅರೇಬಿಯಾದಿಂದ ಏಷ್ಯಾ ಗ್ರಾಹಕರಿಗೆ ತೈಲ ದರ ಹೆಚ್ಚಳ
ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಮಾದರಿಯ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 123 ಡಾಲರ್‌ಗೆ ಏರಿಕೆಯಾಗಿದೆ. ಪದೇಪದೆ ಕಚ್ಚಾ ತೈಲ ದರ ಜಿಗಿಯುತ್ತಿದ್ದು, ದರ 140ರಿಂದ 150 ಡಾಲರ್‌ಗೆ ವೃದ್ಧಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಒಂದು ವೇಳೆ ಇದೇ ರೀತಿ ದರ ಸ್ಫೋಟವಾದರೆ ಭಾರತಕ್ಕೆ ಭಾರಿ ಸವಾಲಾಗಿ ಪರಿಣಮಿಸಲಿದೆ.
ಗೋಲ್ಡ್‌ಮನ್ ಸ್ಯಾಕ್ಸ್ ಪ್ರಕಾರ ಕಚ್ಚಾ ತೈಲ ದರ ಜುಲೈ-ಸೆಪ್ಟೆಂಬರ್ ವೇಳೆಗೆ 140 ಡಾಲರ್‌ಗೆ ಜಿಗಿಯುವ ಸಾಧ್ಯತೆ ದಟ್ಟವಾಗಿದೆ.
ಮುಖ್ಯವಾಗಿ ಸೌದಿ ಅರೇಬಿಯಾ ಏಷ್ಯಾದ ತನ್ನ ಗ್ರಾಹಕರಿಗೆ ಕಚ್ಚಾ ತೈಲ ದರದಲ್ಲಿ ಏರಿಕೆ ಮಾಡಿದೆ. ಏಷ್ಯಾದಲ್ಲಿ ಆರ್ಥಿಕತೆ ಚೇತರೊಸುತ್ತಿದ್ದು, ನಿರೀಕ್ಷ ಮೀರಿ ಬೇಡಿಕೆ ಸೃಷ್ಟಿಯಾಗಲಿರುವುದನ್ನು ಮನಗಂಡಿರುವ ಸೌದಿ ಅರೇಬಿಯಾ, ಲಾಭ ಗಳಿಸಿಕೊಳ್ಳಲು ತೈಲ ದರವನ್ನು ಹೆಚ್ಚಿಸಿದೆ.
ಕಳೆದ 2018ರಲ್ಲಿ ಉನ್ನತ ಮಟ್ಟಕ್ಕೇರಿದ್ದ ಕಚ್ಚಾ ತೈಲ ದರ 2020ರಲ್ಲಿ ಕುಸಿದಿತ್ತು. ಇದೀಗ ಕಳೆದ ಮಾರ್ಚ್‌ನಿಂದ ಮತ್ತೆ ತೈಲ ದರ ಸ್ಫೋಟವಾಗಿದೆ. ಒಂದು ಸಲ ಬ್ಯಾರೆಲ್‌ಗೆ 130 ಡಾಲರ್‌ನ ಗಡಿ ದಾಟಿದರೆ ಬಳಿಕ 140-150 ಡಾಲರ್ ತನಕ ವೇಗವಾಗಿ ಮುಟ್ಟುವ ಅಪಾಯ ಇದೆ ಎಂದು ಮಾರುಕಟ್ಟೆ ಸಮೀಕ್ಷೆಗಳು ತಿಳಿಸಿವೆ. ಬ್ರೆಂಟ್ ಕಚ್ಚಾ ತೈಲ ದರ 123 ಡಾಲರ್‌ಗೆ ಜಿಗಿದು ಆತಂಕಕ್ಕೆ ಕಾರಣವಾಗಿದೆ.
ಆರ್ಥಿಕ ಹಿಂಜರಿತದ ಆತಂಕ
ರಷ್ಯಾ-ಉಕ್ರೇನ್ ಸಂಘರ್ಷದ ಪರಿಣಾಮ ಕಚ್ಚಾ ತೈಲದ ದರ ತೀವ್ರವಾಗಿ ಏರಿಕೆಯಾಗಿದೆ. ಕಚ್ಚಾ ತೈಲ ದರ ಬ್ಯಾರೆಲ್‌ಗೆ 140 ಡಾಲರ್‌ಗೆ ಸ್ಫೋಟವಾದರೆ, ಅಮೆರಿಕ ಸೇರಿದಂತೆ ಜಗತ್ತಿನ ನಾನಾ ದೇಶಗಳಲ್ಲಿ ಮುಂದಿನ 12-18 ತಿಂಗಳುಗಳಲ್ಲಿ ಆರ್ಥಿಕ ಹಿಂಜರಿತ ಸಂಭವಿಸಬಹುದು ಎಂಬ ಆತಂಕ ಉಂಟಾಗಿದೆ.
ಗೋಲ್ಡ್ ಮ್ಯಾನ್ ಸ್ಯಾಕ್ಸ್ ವರದಿಯ ಪ್ರಕಾರ, ಕಚ್ಚಾ ತೈಲ ದರ ಜುಲೈ-ಸೆಪ್ಟೆಂಬರ್ ವೇಳೆಗೆ 140 ಡಾಲರ್‌ಗೆ ಜಿಗಿಯಲಿದ್ದು, ಭಾರತ ಸೇರಿದಂತೆ ತೈಲ ಆಮದು ಅವಲಂಬಿತ ದೇಶಗಳಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.