Site icon Vistara News

Cable TV Channel Price hike : 4.5 ಕೋಟಿ ಕೇಬಲ್‌ ಟಿ.ವಿ ಗ್ರಾಹಕರಿಗೆ ಜೀ, ಸ್ಟಾರ್‌, ಸೋನಿ ಪ್ರಸಾರ ಸ್ಥಗಿತ

cable tv

ನವ ದೆಹಲಿ: ಜೀ ಎಂಟರ್‌ಟೈನ್‌ಮೆಂಟ್‌, ಸ್ಟಾರ್‌ ಮತ್ತು ಸೋನಿ ಪಿಕ್ಚರ್ಸ್ ವಾಹಿನಿಗಳು ಫೆಬ್ರವರಿ 1ರಿಂದ ಹಾಥ್‌ವೇ ಡಿಜಿಟಲ್‌, ಡಿಇಎನ್‌ ನೆಟ್‌ ವರ್ಕ್ಸ್‌, ಜಿಟಿಪಿಎಲ್‌, ಹಿಂದೂಜಾ ಗ್ಲೋಬಲ್‌ ಸಲ್ಯೂಷನ್ಸ್‌, ಫಾಸ್ಟ್‌ವೇ ಟ್ರಾನ್ಸ್‌ಮಿಶನ್‌, ಯುಸಿಎನ್‌ ಕೇಬಲ್ ಇತ್ಯಾದಿ ಕೆಲವು ಕೇಬಲ್‌ ಆಪರೇಟರ್‌ಗಳಿಗೆ (Cable TV Channel Price hike) ತಮ್ಮ ಚಾನೆಲ್‌ಗಳ ಸಿಗ್ನಲ್ ಪ್ರಸಾರವನ್ನು ಬಂದ್‌ ಮಾಡುತ್ತಿವೆ. (Cable TV) ಇದರ ಪರಿಣಾಮ ಸುಮಾರು 4.5 ಕೋಟಿ ಕೇಬಲ್‌ ಟಿ.ವಿ ಗ್ರಾಹಕರಿಗೆ ಈ ಚಾನೆಲ್‌ಗಳು ಅಲಭ್ಯವಾಗಿವೆ.

ಕಾರಣವೇನು?

ಫೆಬ್ರವರಿ 1ರಿಂದ ಟಿ.ವಿ ಸಂಸ್ಥೆಗಳು ಹೊಸ ದರ ಪಟ್ಟಿ 3.0 ಅನ್ನು‌ (NTO ೩.೦) ಜಾರಿಗೊಳಿಸಿದ್ದು,‌ ಚಾನೆಲ್‌ಗಳ ದರದಲ್ಲಿ 10-15% ಹೆಚ್ಚಿಸಿವೆ. ಇದನ್ನು ಅನುಸರಿಸದ ಕೇಬಲ್‌ ಆಪರೇಟರ್‌ಗಳಿಗೆ ಪ್ರವೇಶ ನಿರಾಕರಿಸುತ್ತಿವೆ.‌ ಹೊಸ ದರ ಪಟ್ಟಿಗೆ ಈ ಕೇಬಲ್‌ ಆಪರೇಟರ್‌ಗಳು ಇನ್ನೂ ಸಹಿ ಮಾಡಿಲ್ಲ. ಇದರೊಂದಿಗೆ ಕೇಬಲ್‌ ಟಿವಿ ಆಪರೇಟರ್‌ ಹಾಗೂ ಚಾನೆಲ್‌ ಪ್ರಸಾರ ಕಂಪನಿಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಮತ್ತೊಂದು ಕಡೆ ಕೋಟ್ಯಂತರ ಗ್ರಾಹಕರಿಗೆ ಅವರ ನೆಚ್ಚಿನ ಚಾನೆಲ್‌ಗಳನ್ನು ವೀಕ್ಷಿಸುವ ಅವಕಾಶ ಕೈ ತಪ್ಪಲಿದೆ. ಆದ್ದರಿಂದ ಶೀಘ್ರ ಬಿಕ್ಕಟ್ಟು ಇತ್ಯರ್ಥ ನಿರ್ಣಾಯಕವಾಗಿದೆ.

ಟೆಲಿಕಾಂ ವಲಯದ ನಿಯಂತ್ರಕ ಟ್ರಾಯ್‌ ಕಳೆದ ನವೆಂಬರ್‌ನಲ್ಲಿ ಟಿವಿ ಚಾನೆಲ್‌ಗಳ ಗರಿಷ್ಠ ರಿಟೇಲ್‌ ದರ ಪದ್ಧತಿಯನ್ನು (maximum retail price) ಪುನರಾರಂಭಿಸಿತ್ತು. ಟ್ರಾಯ್‌ ಆದೇಶದ ಬಳಿಕ ಟಿವಿ ಚಾನೆಲ್‌ಗಳ ದರಗಳಲ್ಲಿ ಏರಿಕೆಯಾಗಿದೆ. ದರ ಏರಿಕೆಯ ಪರಿಣಾಮ ಟಿವಿ ಚಾನೆಲ್‌ಗಳಿಗೆ 5,000 ಕೋಟಿ ರೂ. ಆದಾಯ ಹೆಚ್ಚಳ ನಿರೀಕ್ಷಿಸಲಾಗಿದೆ.

ನೂತನ ದರ ಪದ್ಧತಿಯಡಿಯಲ್ಲಿ ಗ್ರಾಹಕರು ಈ ಹಿಂದಿನ 100 ಚಾನೆಲ್‌ ಬದಲಿಗೆ 228 ಚಾನೆಲ್‌ಗಳನ್ನು ವೀಕ್ಷಿಸಲು ಸಾಧ್ಯವಾಗಲಿದೆ ಎಂದು ಟ್ರಾಯ್‌ ತಿಳಿಸಿದೆ. ಆಲ್‌ ಇಂಡಿಯಾ ಡಿಜಿಟಲ್‌ ಕೇಬಲ್‌ ಫೆಡರೇಷನ್‌ನ ಕೇಬಲ್‌ ಆಪರೇಟರ್‌ಗಳು ದರ ಏರಿಕೆಯನ್ನು ವಿರೋಧಿಸಿದ್ದಾರೆ. ಟಿವಿ ಚಾನೆಲ್ ಚಂದಾದಾರಿಕೆಯ ದರ ಹೆಚ್ಚಳದ ಪರಿಣಾಮ ಸಣ್ಣ ಆದಾಯದ ಗ್ರಾಹಕರು ದೂರವಾಗುವ ಆತಂಕವೂ ಕೇಬಲ್‌ ಟಿವಿ ಉದ್ಯಮವನ್ನು ಕಾಡುತ್ತಿದೆ.

Exit mobile version