ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ ಮಧ್ಯಂತರ ವಹಿವಾಟಿನಲ್ಲಿ ೭50 ಅಂಕ ಕುಸಿತಕ್ಕೀಡಾಗಿದೆ. ಸೆನ್ಸೆಕ್ಸ್ ಮಧ್ಯಾಹ್ನ ೨ ಗಂಟೆಯ ವೇಳೆಗೆ ೫೮,೯೦೫ಕ್ಕೆ ಕುಸಿದಿದೆ. ನಿಫ್ಟಿ ೨೨೮ ಅಂಕ ಪತನವಾಗಿದ್ದು, ೧೭,೫೨೮ರಲ್ಲಿ ವಹಿವಾಟು ನಡೆಸುತ್ತಿತ್ತು.
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಪ್ರಾಬಲ್ಯ ಹೆಚ್ಚುತ್ತಿರುವುದು ಮತ್ತು ಅಮೆರಿಕದಲ್ಲಿ ಬಾಂಡ್‌ಗಳಲ್ಲಿನ ಹೂಡಿಕೆಗೆ ಆದಾಯ ಸುಧಾರಿಸುತ್ತಿರುವುದು ಷೇರು ಮಾರುಕಟ್ಟೆ ಮೇಲೆ ನಕಾರಾತ್ಮಕ ಪ್ರಭಾವ ಬೀರಿದೆ ಎಂದು ತಜ್ಞರು ತಿಳಿಸಿದ್ದಾರೆ. ಡಾಲರ್ ಪ್ರಾಬಲ್ಯ ಹೆಚ್ಚುತ್ತಿರುವುದರಿಂದ ಹೂಡಿಕೆದಾರರು ಡಾಲರ್ ಮೇಲಿನ ಹೂಡಿಕೆಯನ್ನು ಹೆಚ್ಚಿಸುತ್ತಿದ್ದಾರೆ. ಇದು ಷೇರು ಸೂಚ್ಯಂಕಗಳ ಪತನಕ್ಕೆ ಕಾರಣವಾಗಿದೆ.
ಅಮೆರಿಕದಲ್ಲಿ ಆಗಸ್ಟ್ ೨೫-೨೭ರಂದು ಆರ್ಥಿಕತೆ ಕುರಿತ ಜಾಕ್ಸನ್ ಹೋಲ್ ವಿಚಾರಸಂಕಿರಣ ನಡೆಯಲಿದೆ. ಇದಕ್ಕೂ ಮುನ್ನ ಆರ್ಥಿಕ ತಜ್ಞರು ಬಿಗಿ ಹಣಕಾಸು ನೀತಿ ಜಾರಿಗೆ ಒಲವು ವ್ಯಕ್ತಪಡಿಸಿದ್ದಾರೆ. ಇದು ಷೇರು ಪೇಟೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರಿದೆ. ಯುರೋಪ್‌ನಲ್ಲೂ ಷೇರು ಸೂಚ್ಯಂಕಗಳು ಮುಗ್ಗರಿಸಿತು.
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ೭೯.೯೧ ರೂ.ಗೆ ಕುಸಿದಿದೆ.