Site icon Vistara News

BTS 2022 | ಸ್ಟಾರ್ಟಪ್‌ಗಳ ನೆರವಿಗೆ ಬೂಸ್ಟರ್ ಕಿಟ್‌ ಉಪಕ್ರಮ, 9 ಒಪ್ಪಂದಗಳಿಗೆ ಸಹಿ

BITS 2022

ಬೆಂಗಳೂರು: ನವೋದ್ಯಮಗಳ ಬೆಳವಣಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮತ್ತಷ್ಟು ರಚನಾತ್ಮಕ ನೆರವು ನೀಡುವ ಉದ್ದೇಶದ ಬೂಸ್ಟರ್ ಕಿಟ್‌ ಉಪಕ್ರಮಕ್ಕೆ ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಬೆಂಗಳೂರು ತಂತ್ರಜ್ಞಾನ ಸಮಾವೇಶದ ಕೊನೆಯ ದಿನವಾದ ಶುಕ್ರವಾರ ಚಾಲನೆ (BTS 2022) ನೀಡಿದರು. ಒಟ್ಟು ಒಂಬತ್ತು ಸಂಸ್ಥೆಗಳ ಜತೆಗೆ ಕರ್ನಾಟಕ ಇನ್ನೋವೇಶನ್‌ ಮತ್ತು ಟೆಕ್ನಾಲಜಿ ಸೊಸೈಟಿ (ಕಿಟ್ಸ್‌) ವ್ಯವಸ್ಥಾಪಕ ನಿರ್ದೇಶಕಿ ಮೀನಾ ನಾಗರಾಜ ಅವರು ಸರ್ಕಾರದ ಪರವಾಗಿ ಸಹಿ ಹಾಕಿದರು.

ಈ ಸಂಬಂಧವಾಗಿ ಗೂಗಲ್‌, ಪೇಟಿಎಂ, ಎಚ್‌ಡಿಎಫ್‌ಸಿ, ರೇಜರ್ ಪೇ, ಮೈಕ್ರೋಸಾಫ್ಟ್‌, ಗೆಯ್ನ್, ದಯಾನಂದ ಸಾಗರ್ ಉದ್ಯಮಶೀಲತಾ ಮತ್ತು ವಾಣಿಜ್ಯ ಪರಿಪೋಷಣಾ ಕೇಂದ್ರ, ಎಡಬ್ಲ್ಯುಎಸ್‌ ಮತ್ತು ಸ್ಟ್ರಾಂಗ್‌ಹರ್ ವೆಂಚರ್‍ಸ್ ಜತೆಗೆ ಐಟಿ-ಬಿಟಿ ಇಲಾಖೆ ಮತ್ತು ಕರ್ನಾಟಕ ಇನ್ನೋವೇಶನ್‌ ಮತ್ತು ಟೆಕ್ನಾಲಜಿ ಸೊಸೈಟಿಗಳು (ಕಿಟ್ಸ್‌) ಸಚಿವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಅಂಕಿತ ಹಾಕಿದವು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ‘ಕರ್ನಾಟಕ ಸ್ಟಾರ್ಟಪ್‌ ಸೆಲ್‌ನಲ್ಲಿ ನೋಂದಣಿ ಮಾಡಿಕೊಂಡಿರುವ ನವೋದ್ಯಮಗಳಿಗೆ ಇನ್ನುಮುಂದೆ ಎಚ್‌ಡಿಎಫ್‌ಸಿ, ಪೇಟಿಎಂ ಮತ್ತು ರೇಜರ್‍‌ಪೇ ಸಂಸ್ಥೆಗಳ ಮೂಲಕ ಬ್ಯಾಂಕಿಂಗ್‌ ಹಾಗೂ ಫಿನ್‌-ಟೆಕ್‌ ಸೇವೆಗಳು ಸಿಗಲಿವೆ. ಜತೆಗೆ ಸ್ಮಾರ್ಟ್-ಅಪ್‌ ಉಪಕ್ರಮದಡಿ ಹೆಚ್ಚಿನ ಮಾರುಕಟ್ಟೆ ಪ್ರಸ್ತುತಿ, ಬೇಡಿಕೆ ಸೃಷ್ಟಿ ಮತ್ತು ವ್ಯಾಪಾರ-ವಹಿವಾಟುಗಳ ಸುಸ್ಥಿರ ಬೆಳವಣಿಗೆ ಸಾಧ್ಯವಾಗಲಿದೆ’ ಎಂದರು.

ಹಾಗೆಯೇ, ಟೆಲಿಗ್ಲೋಬಲ್‌ ಆಕ್ಸಲರೇಟರ್‍‌ ಫಾರ್‍‌ ಇನ್ನೋವೇಷನ್‌ ನೆಟ್‌ವರ್ಕ್ (ಗೆಯ್ನ್) ಜತೆಗಿನ ಒಡಂಬಡಿಕೆಯಿಂದ ನವೋದ್ಯಮಗಳಿಗೆ ವೇಗವರ್ಧಿತ ಬೆಂಬಲ, ದಯಾನಂದ ಸಾಗರ್‍‌ ಸಂಸ್ಥೆಯ ಮೂಲಕ ಪರಿಪೋಷಣೆಯ ಸಹಾಯ, ಸ್ಟ್ರಾಂಗ್‌ಹರ್‍‌ ವೆಂಚರ್‍ಸ್‌ ಮೂಲಕ ಮಹಿಳಾ ಉದ್ಯಮಿಗಳಿಗೆ ಅಗತ್ಯ ಮಾರ್ಗದರ್ಶನ ಮತ್ತು ಎಡಬ್ಲ್ಯುಎಸ್‌ ಆಕ್ಟಿವೇಟ್‌ ಹಾಗೂ ಮೈಕ್ರೋಸಾಫ್ಟ್‌ ಜತೆಗಿನ ಒಡಂಬಡಿಕೆಗಳಿಂದ ಕ್ಲೌಡ್‌ ಆಧಾರಿತ ಸೇವೆಗಳ ಬೆಂಬಲ ಸುಗಮವಾಗಿ ದೊರೆಯಲಿದೆ ಎಂದು ಅವರು ವಿವರಿಸಿದರು.

ಬೂಸ್ಟರ್‍‌ ಕಿಟ್‌ ಉಪಕ್ರಮದಿಂದಾಗಿ ನವೋದ್ಯಮಗಳಿಗೆ ಅಗತ್ಯವಾಗಿರುವ ಕಚೇರಿ ಮೂಲಸೌಲಭ್ಯ, ಪ್ರಯೋಗಾಲಯ, ಪರಿಣತರ ಅನುಭವಗಳು, ಅಗತ್ಯ ನಿಧಿ ಕೂಡ ಲಭ್ಯವಾಗಲಿವೆ. ರಾಜ್ಯದ ಆರ್ಥಿಕತೆಯ ಬೆಳವಣಿಗೆಯಲ್ಲಿ ನವೋದ್ಯಮಗಳು ನಿರ್ಣಾಯಕ ಪಾತ್ರ ವಹಿಸಬೇಕಾಗಿದ್ದು, ಡಿಜಿಟಲ್‌ ಅರ್ಥವ್ಯವಸ್ಥೆಗೆ ಇನ್ನೂ ಹೆಚ್ಚಿನ ಕೊಡುಗೆ ನೀಡಬೇಕಾದ ಅಗತ್ಯವಿದೆ ಎಂದು ಸಚಿವರು ನುಡಿದರು.

ಕಾರ್ಯಕ್ರಮದಲ್ಲಿ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಕಿಟ್ಸ್‌ ವ್ಯವಸ್ಥಾಪಕ ನಿರ್ದೇಶಕಿ ಮೀನಾ ನಾಗರಾಜ್‌ ಮತ್ತು ಒಡಂಬಡಿಕೆಗೆ ಅಂಕಿತ ಹಾಕಿದ ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳು ಉಪಸ್ಥಿತರಿದ್ದರು.

Exit mobile version