ನವದೆಹಲಿ: ಕೇಂದ್ರ ಬಜೆಟ್ ಅಧಿವೇಶನವು (Budget Session) ಜನವರಿ 31ರಿಂದ ಆರಂಭವಾಗಿ, ಫೆಬ್ರವರಿ 9ರವರೆಗೂ ಮುಂದುವರಿಯಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಕೇಂದ್ರ ಬಜೆಟ್ (Interim Budget) ಅನ್ನು ಫೆಬ್ರವರಿ 1ರಂದು ಮಂಡಿಸಲಿದ್ದಾರೆ. ಅಧಿವೇಶನದ ಆರಂಭದ ದಿನ ಎರಡೂ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು (rashtrapati draupadi murmu) ಅವರು ಮಾತನಾಡಲಿದ್ದು, ಪ್ರಮುಖ ಹಣಕಾಸು ನಿರ್ಧಾರಗಳನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಈ ಬಜೆಟ್ ಅಧಿವೇಶನದಲ್ಲಿ ಯಾವುದೇ ಹೊಸ ಕಾನೂನು ಸಂಬಂಧ ಚರ್ಚೆಗಳಾಗದಿದ್ದರೂ, ಗೇಮ್ ಚೇಂಜರ್ ಎಂದು ಪ್ರತಿಬಿಂಬಿಸಲಾಗುತ್ತಿರುವ ಕಿಸಾನ್ ಸಮ್ಮಾನ್ ನಿಧಿ ಸ್ಕೀಮ್ ಮೊತ್ತವನ್ನು ಮಹಿಳಾ ರೈತರಿಗೆ ದ್ವಿಗುಣಗೊಳಿಸುವ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಗಳಿವೆ. ಮಹಿಳಾ ರೈತರಿಗೆ ನಿಧಿ ಮೊತ್ತವನ್ನು ವಾರ್ಷಿಕವಾಗಿ ದ್ವಿಗುಣಗೊಳಿಸುವ ಸಾಧ್ಯತೆಗಳಿವೆ ಎಂದು ಸುದ್ದಿ ಸಂಸ್ಥೆಯೊಂದು ಕೆಲವು ದಿನಗಳ ಹಿಂದೆ ವರದಿ ಮಾಡಿತ್ತು. ಈ ಮೊತ್ತವನ್ನು 12 ಸಾವಿರ ರೂ. ವರೆಗೆ ಹೆಚ್ಚಿಸುವ ಸಾಧ್ಯತೆಗಳಿವೆ.
ಈ ಯೋಜನೆಯನ್ನು ಫೆಬ್ರವರಿ 1 ರಂದು ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆಯಿದೆ ಮತ್ತು ಸರ್ಕಾರಕ್ಕೆ ಹೆಚ್ಚುವರಿ 12,000 ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದು ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿತ್ತು.
ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ, ಮುಂಬರುವ ಬಜೆಟ್ ಪೂರ್ಣ ಬಜೆಟ್‌ಗಿಂತ ಮಧ್ಯಂತರ ಬಜೆಟ್ ಆಗಿರುತ್ತದೆ. ಏಕೆಂದರೆ ಎರಡು-ಮೂರು ತಿಂಗಳಲ್ಲಿ ಲೋಕಸಭೆ ಚುನಾವಣೆಗಳು ನಡೆಯಲಿವೆ. ಆಡಳಿತಾರೂಢ ಸರ್ಕಾರವು ಚುನಾವಣಾ ವರ್ಷದಲ್ಲಿ ಅಥವಾ ಪೂರ್ಣ ಬಜೆಟ್‌ಗೆ ಸಾಕಷ್ಟು ಸಮಯವಿಲ್ಲದಿದ್ದಾಗ ಮಧ್ಯಂತರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸುತ್ತದೆ. ಚುನಾವಣೆಯ ನಂತರ ಬರುವ ಸರ್ಕಾರವು ಸಂಪೂರ್ಣ ವಾರ್ಷಿಕ ಬಜೆಟ್ ಅನ್ನು ರೂಪಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ.
Budget 2024: ಕೇಂದ್ರ ಬಜೆಟ್‌ನಲ್ಲಿ ಈ 5 ಪ್ರಮುಖ ವರ್ಗಗಳಿಗೆ ಸಿಗಲಿದೆ ಆದ್ಯತೆ
ಕೇಂದ್ರ ಸರ್ಕಾರವು (Central Government) ಫೆಬ್ರವರಿ 1ರಂದು ಮಧ್ಯಂತರ ಬಜೆಟ್ (Interim budget) ಮಂಡಿಸಲಿದೆ. ಈಗಾಗಲೇ ಈ ಬಗ್ಗೆ ಸಿದ್ಧತೆ ಆರಂಭವಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Union finance minister Nirmala Sitharaman) ಮಂಡಿಸಲಿರುವ ಈ ಚುನಾವಣಾ ಪೂರ್ವ ಬಜೆಟ್ ಮಹಿಳೆಯರು, ಬಡವರು, ಯುವಜನತೆ, ರೈತರು ಮತ್ತು ಬುಡಕಟ್ಟು ಜನಾಂಗದವರು ಸೇರಿ ಸಮಾಜದ ಐದು ಪ್ರಮುಖ ವರ್ಗಗಳ ಕಲ್ಯಾಣ ಯೋಜನೆಗಳಿಗೆ ಆದ್ಯತೆ ನೀಡಲಿದೆ (Budget 2024).
ಅಲ್ಲದೆ ಈ ವರ್ಗಗಳಿಗಾಗಿ ಅಸ್ತಿತ್ವದಲ್ಲಿರುವ ಯೋಜನೆಗಳ ಅನುದಾನ ಹೆಚ್ಚಾಗುವ ಸಾಧ್ಯತೆಯಿದೆ. ಜತೆಗೆ ಇನ್ನೂ ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯೂ ಇದೆ ಎಂದು ಊಹಿಸಲಾಗಿದೆ. “ಸಮಾಜದ ಈ ವರ್ಗಗಳಿಗೆ ಮೀಸಲಾಗಿರುವ ಯೋಜನೆಗಳಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಗುವುದು. ಉದಾಹರಣೆಗೆ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ. ಈ ಕ್ಷೇತ್ರದತ್ತ ವಿಶೇಷ ಗಮನ ಹರಿಸಲಾಗುವುದು. ಯುವ ಜನತೆಯ ಆಶೋತ್ತರಗಳಿಗೆ ಸ್ಪಂದಿಸಲಾಗುವುದುʼʼ ಎಂದು ಮೂಲಗಳು ತಿಳಿಸಿವೆ.
2023-24ರಲ್ಲಿ ಶಾಲಾ ಶಿಕ್ಷಣ, ಸಾಕ್ಷರತೆ ಮತ್ತು ಉನ್ನತ ಶಿಕ್ಷಣವನ್ನು ನಿರ್ವಹಿಸುವ ಎರಡು ಇಲಾಖೆಗಳಿಗೆ ಕೇಂದ್ರ ಸರ್ಕಾರ 1.12 ಲಕ್ಷ ಕೋಟಿ ರೂ. ಮೀಸಲಿಟ್ಟಿದೆ. ಮಹಿಳಾ ನೇತೃತ್ವದ ಅಭಿವೃದ್ಧಿಯ ಗುರಿ ಹೊಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಈ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ಪ್ರಮುಖ ಆಧಾರಸ್ತಂಭವಾಗಿ ಮಹಿಳೆಯರ ಕಲ್ಯಾಣವೂ ಇರಲಿದೆ. ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರು ನಿರ್ಣಾಯಕರಾಗಿದ್ದರು. ಹೀಗಾಗಿ ಬೆಜೆಪಿ ಮತ್ತು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮಹಿಳೆಯರಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತರುವ ಪ್ರಸ್ತಾವ ಇಟ್ಟಿದ್ದವು.
ಅನುದಾನ ಹೆಚ್ಚಳ
ʼʼಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜಾರಿಗೆ ತರುವ ಬುಡಕಟ್ಟು ಅಭಿವೃದ್ಧಿ ಸಚಿವಾಲಯಕ್ಕೆ 2023-24ರ ಸಾಲಿನಲ್ಲಿ ಅನುದಾನವನ್ನು ಹೆಚ್ಚಿಸಲಾಗಿತ್ತು. ಇದು 2024-25ರಲ್ಲಿಯೂ ಮುಂದುವರಿಯಲಿದೆ” ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2023-24ರ ಬಜೆಟ್‌ನಲ್ಲಿ, ಬುಡಕಟ್ಟು ಅಭಿವೃದ್ಧಿ ಸಚಿವಾಲಯಕ್ಕೆ ಹಂಚಿಕೆಯು ಸುಮಾರು ಶೇ. 71ರಷ್ಟು ಹೆಚ್ಚಳವಾಗಿತ್ತು. ಅದರಲ್ಲಿ ಹೆಚ್ಚಿನ ಭಾಗವನ್ನು ಪರಿಶಿಷ್ಟ ಪಂಗಡದ ಮಕ್ಕಳಿಗೆ ಆರನೇ ತರಗತಿಯಿಂದ ಉಚಿತ ಶಿಕ್ಷಣವನ್ನು ಒದಗಿಸುವ ಏಕಲವ್ಯ ಮಾದರಿ ವಸತಿ ಶಾಲೆಗಳು (EMRS) ಯೋಜನೆಗೆ ವಿನಿಯೋಗಿಸಲಾಗುತ್ತದೆ. ಅಲ್ಲದೆ ಬುಡಕಟ್ಟು ಸಮುದಾಯಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಎಲ್ಲ ಅರ್ಹರಿಗೆ ತಲುಪುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ವಿಕಾಸ್ ಭಾರತ್ ಸಂಕಲ್ಪ ಯಾತ್ರೆಯನ್ನು ಆರಂಭಿಸಿದೆ. ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಝಾರ್ಖಂಡ್‌ನ ಖುಂಟಿ ಗ್ರಾಮದಲ್ಲಿ 2023ರ ನವೆಂಬರ್ 15ರಂದು ಮೋದಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದರು.
ರೈತರ ಕಲ್ಯಾಣ
ಶೇ. 33ಕ್ಕೂ ಹೆಚ್ಚಿನ ರೈತರು ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಈ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರತಿ ವರ್ಷ 6,000 ರೂ. ಒದಗಿಸಲಾಗುತ್ತದೆ. 2023-24ರಲ್ಲಿ ಕೇಂದ್ರವು ಈ ಯೋಜನೆಗೆ 60,000 ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಇದು 2024-25ರಲ್ಲಿ ಹೆಚ್ಚಾಗಲಿದೆ. ವಿವಿಧ ಸಚಿವಾಲಯಗಳಿಗೆ ಅನುದಾನವನ್ನು ಸಮರ್ಪಕವಾಗಿ ಹಂಚಿಕೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Business success secrets : ನಿಮ್ಮನ್ನು ನೀವು ಮಾರಿಕೊಳ್ಳಿ, ಇದೇ ಬಿಸಿನೆಸ್ ಸೂಪರ್ ಸೀಕ್ರೆಟ್