ನವ ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24 ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಆದಾಯ ತೆರಿಗೆದಾರರ ನಿರೀಕ್ಷೆಗಳು ಸೇರಿದಂತೆ (Budget 2023) ಉಪಯುಕ್ತ ಮಾಹಿತಿ ಇಲ್ಲಿದೆ.
ಕೇಂದ್ರ ಬಜೆಟ್ 2023 ದಿನಾಂಕ ಮತ್ತು ಸಮಯ
ಫೆಬ್ರವರಿ 1 ಕ್ಕೆ ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಬೆಳಗ್ಗೆ 11 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಬಜೆಟ್ ಭಾಷಣ ನೀಡಲಿದ್ದಾರೆ.
ಆರ್ಥಿಕ ವರ್ಷ | 2023-24 |
ಬಜೆಟ್ ಮಂಡನೆ ಎಲ್ಲಿ | ಸಂಸತ್ತು |
ಮಂಡಿಸುವವರು | ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ |
ದಿನಾಂಕ | 1 ಫೆಬ್ರವರಿ, 2023 |
ಬಿಡುಗಡೆ | ಕೇಂದ್ರ ಸರ್ಕಾರ |
ಅಂಕಿತ | ರಾಷ್ಟ್ರಪತಿಗಳು |
ನೋಡಲ್ ಸಂಸ್ಥೆ | ಆರ್ಥಿಕ ಇಲಾಖೆ |
2022ರಲ್ಲಿ ಬಜೆಟ್ 1.5 ಗಂಟೆಗಳಷ್ಟು ಸುದೀರ್ಘವಾಗಿತ್ತು. 2021ರ ಬಜೆಟ್ ಭಾಷಣ 2 ಗಂಟೆ 40 ನಿಮಿಷ ಇತ್ತು.
ಬಜೆಟ್ 2023 ಎಲ್ಲಿ ವೀಕ್ಷಿಸಬಹುದು?
ಲೋಕಸಭಾ ಟಿವಿ, ರಾಜ್ಯ ಸಭಾ ಟಿವಿ, ಡಿಡಿ ನ್ಯೂಸ್ ಮತ್ತು ಇತರ ನ್ಯೂಸ್ ಚಾನೆಲ್‌ಗಳು ಕೇಂದ್ರ ಬಜೆಟ್ ಮಂಡನೆಯನ್ನು ಪ್ರಸಾರ ಮಾಡಲಿವೆ. ಸಂಸದ್ ಟಿವಿ ಮತ್ತು ಸಂಸತ್ತಿನ ಟ್ವಿಟರ್ ಖಾತೆ, ದೂರದರ್ಶನದ ಮೂಲಕವೂ ವೀಕ್ಷಿಸಬಹುದು.
ಸಂಸತ್ತಿನಲ್ಲಿ ಬಜೆಟ್ ಅಧಿವೇಶನ
ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಫೆಬ್ರವರಿ 10 ರ ತನಕ ನಡೆಯಲಿದೆ. ಎರಡನೇ ಹಂತದ ಬಜೆಟ್ ಅಧಿವೇಶನ ಮಾರ್ಚ್ 6 ಕ್ಕೆ ಶುರುವಾಗಿ ಏಪ್ರಿಲ್ 6ರಂದು ಮುಕ್ತಾಯವಾಗಲಿದೆ.
ಬಜೆಟ್ ನಿರೀಕ್ಷೆಗಳು
ಮಧ್ಯಮ ವರ್ಗದ ಜನತೆ ಈ ಸಲದ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿಯ ಮಿತಿ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ನಡೆಯಲಿರುವ ಕೊನೆಯ ಪೂರ್ಣಪ್ರಮಾಣದ ಚುನಾವಣೆ ಇದಾಗಿರುವುದರಿಂದ, ಜನಪ್ರಿಯ ಬಜೆಟ್ ಅನ್ನು ಮಧ್ಯಮ ವರ್ಗದ ಜನತೆ ನಿರೀಕ್ಷಿಸುತ್ತಿದ್ದಾರೆ. ಹಾಗೂ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ, ಸೆಕ್ಷನ್ 80ಡಿ ಮತ್ತು ಸೆಕ್ಷನ್ 87ಎ ಇತ್ಯಾದಿಗಳ ಅಡಿಯಲ್ಲಿ ಕೆಲವು ತೆರಿಗೆ ವಿನಾಯಿತಿಗಳನ್ನು ನಿರೀಕ್ಷಿಸುತ್ತಿದ್ದಾರೆ.
ಆದಾಯ ತೆರಿಗೆ ವಿನಾಯಿತಿಯ ಮಿತಿ ಹೆಚ್ಚಳ?
ಆದಾಯ ತೆರಿಗೆ ವಿನಾಯಿತಿಯ ಮಿತಿಯನ್ನು ಈಗಿಮ ವಾರ್ಷಿಕ 2 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಏರಿಕೆ ಮಾಡಬೇಕು. ಸೆಕ್ಷನ್ 87 ಎ ಅಡಿಯಲ್ಲಿ ರಿಬೇಟ್ ಪಡೆಯುವವರಿಗೆ ಇದರಿಂದ ಪರಿಣಾಮವಾಗದು. ಹೀಗಿದ್ದರೂ, ಅವರು ಐಟಿಆರ್ ಸಲ್ಲಿಸುವುದು ಕಡ್ಡಾಯವಾಗಿದೆ. ಆದ್ದರಿಂದ ಸಣ್ಣ ತೆರಿಗೆದಾರರಿಗೆ ಸಹಕರಿಸಲು ಆದಾಯ ತೆರಿಗೆ ಮಿತಿಯನ್ನು 2 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಏರಿಸುವುದು ಸೂಕ್ತ ಎನ್ನುತ್ತಾರೆ ತಜ್ಞರು.
ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ಏರಿಕೆ?
ಈ ಹಿಂದೆ 2018-19ರಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಪರಿಚಯಿಸಲಾಗಿತ್ತು. ಇಂಧನ ಮತ್ತು ವೈದ್ಯಕೀಯ ವೆಚ್ಚಗಳು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಇದನ್ನು ಈಗಿನ 50,000 ರೂ.ಗಳಿಂದ 1 ಲಕ್ಷ ರೂ.ಗೆ ಏರಿಸಬೇಕು ಎಂಬ ನಿರೀಕ್ಷೆ ಇದೆ.
ಸೆಕ್ಷನ್ 80 ಸಿ ಅಡಿಯಲ್ಲಿ ಮಿತಿ ಹೆಚ್ಚಳ?
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಈಗ 1.5 ಲಕ್ಷ ರೂ. ಹೂಡಿಕೆಗೆ ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ. ಕಳೆದ ದಶಕದಿಂದ ಇದು ಬದಲಾಗಿಲ್ಲ. ಹೀಗಾಗಿ ಇದನ್ನು ಏರಿಸುವ ಮೂಲಕ ಉಳಿತಾಯ ಮತ್ತು ಹೂಡಿಕೆಗೆ ಸಹಕರಿಸಬೇಕು ಎಂದು ತಜ್ಞರು ಒತ್ತಾಯಿಸಿದ್ದಾರೆ.
ಬಜೆಟ್‌ಗೆ ಸಂಬಂಧಿಸಿ ಸಂವಿಧಾನದಲ್ಲಿ ಕೆಲವು ನಿಬಂಧನೆಗಳು ಇವೆ. ಅವುಗಳ ವಿವರ ಇಲ್ಲಿದೆ.
ಬಜೆಟ್‌ಗೆ ಸಂಬಂಧಿಸಿ ಸಂವಿಧಾನ ಏನೆನ್ನುತ್ತದೆ?
- ಸಂವಿಧಾನದ 112ನೇ ವಿಧಿಯ ಪ್ರಕಾರ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಫೆಬ್ರವರಿಯ ಕೊನೆಯ ದಿನ ಅಥವಾ ಮೊದಲ ದಿನಕ್ಕೆ ಮುನ್ನ ಮಂಡಿಸಬೇಕು.
- ಸಂವಿಧಾನದ 114ನೇ ವಿಧಿಯ ಪ್ರಕಾರ ಭಾರತದ ಒಟ್ಟು ನಿಧಿ, ಕೇಂದ್ರ ಸರ್ಕಾರದ ಆದಾಯ ಮತ್ತು ಸಂಪನ್ಮೂಲ, ಸಾಲದ ಮೂಲಕ ಪಡೆಯುವ ಫಂಡ್‌ಗಳ ಬಗ್ಗೆ ಪ್ರತ್ಯೇಕ ಲೆಕ್ಕಪತ್ರಗಳನ್ನು ನೀಡಬೇಕು. ಇದಕ್ಕಾಗಿ ಮುಂಗಡಪತ್ರವನ್ನು ಮಂಡಿಸಬೇಕು.
- ಸಂವಿಧಾನದ 266ನೇ ವಿಧಿಯ ಪ್ರಕಾರ ಸರ್ಕಾರ ತೆರಿಗೆ ಮತ್ತು ಇತರ ಮೂಲಗಳಿಂದ ಪಡೆಯುವ ಆದಾಯದ ಲೆಕ್ಕವನ್ನು ನೀಡಬೇಕು.