ನವ ದೆಹಲಿ: ಫೆಬ್ರವರಿ ೧ ರಂದು 2023-24 ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, (Budget 2023) ಮಧ್ಯಮ ವರ್ಗದ ಜನತೆ ಆದಾಯ ತೆರಿಗೆ ವಿನಾಯಿತಿಯ ಮಿತಿ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ.
2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ನಡೆಯಲಿರುವ ಕೊನೆಯ ಪೂರ್ಣಪ್ರಮಾಣದ ಚುನಾವಣೆ ಇದಾಗಿರುವುದರಿಂದ, ಜನಪ್ರಿಯ ಬಜೆಟ್ ಅನ್ನು ಮಧ್ಯಮ ವರ್ಗದ ಜನತೆ ನಿರೀಕ್ಷಿಸುತ್ತಿದ್ದಾರೆ. ಹಾಗೂ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ, ಸೆಕ್ಷನ್ 80ಡಿ ಮತ್ತು ಸೆಕ್ಷನ್ 87ಎ ಇತ್ಯಾದಿಗಳ ಅಡಿಯಲ್ಲಿ ಕೆಲವು ತೆರಿಗೆ ವಿನಾಯಿತಿಗಳನ್ನು ನಿರೀಕ್ಷಿಸುತ್ತಿದ್ದಾರೆ.
ಕೇಂದ್ರ ಬಜೆಟ್ ಪರಿಣಾಮ ಮಧ್ಯಮ ವರ್ಗದ ಜನತೆಗೆ ಕೈಯಲ್ಲಿ ಹೆಚ್ಚು ಹಣ ಉಳಿತಾಯವಾಗುವಂತಾದರೆ, ಅವರ ಅಗತ್ಯ ಖರ್ಚು ವೆಚ್ಚಗಳಿಗೆ ಸಹಾಯಕವಾಗುತ್ತದೆ ಎನ್ನುತ್ತಾರೆ ಆರ್ಥಿಕ ತಜ್ಞರಾದ ಅರ್ಚಿತ್ ಗುಪ್ತಾ. ಕೋವಿಡ್-ಬಿಕ್ಕಟ್ಟು, ಹಣದುಬ್ಬರ ಹೆಚ್ಚಳ, ರಷ್ಯಾ-ಉಕ್ರೇನ್ ಸಮರ, ಉದ್ಯೋಗ ಕಡಿತ ಇತ್ಯಾದಿಗಳ ಪರಿಣಾಮ ಮಧ್ಯಮ ವರ್ಗದ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಅನಿಶ್ಚಿತತೆ ಎದುರಿಸುತ್ತಿದ್ದಾರೆ. ಹೀಗಾಗಿ ಅವರ ಹಿತಾಸಕ್ತಿಗೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.
ಆದಾಯ ತೆರಿಗೆ ವಿನಾಯಿತಿ ಮಿತಿ ಏರಿಕೆ?
ಆದಾಯ ತೆರಿಗೆ ವಿನಾಯಿತಿಯ ಮಿತಿಯನ್ನು ಈಗಿಮ ವಾರ್ಷಿಕ 2 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಏರಿಕೆ ಮಾಡಬೇಕು. ಸೆಕ್ಷನ್ 87 ಎ ಅಡಿಯಲ್ಲಿ ರಿಬೇಟ್ ಪಡೆಯುವವರಿಗೆ ಇದರಿಂದ ಪರಿಣಾಮವಾಗದು. ಹೀಗಿದ್ದರೂ, ಅವರು ಐಟಿಆರ್ ಸಲ್ಲಿಸುವುದು ಕಡ್ಡಾಯವಾಗಿದೆ. ಆದ್ದರಿಂದ ಸಣ್ಣ ತೆರಿಗೆದಾರರಿಗೆ ಸಹಕರಿಸಲು ಆದಾಯ ತೆರಿಗೆ ಮಿತಿಯನ್ನು 2 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಏರಿಸುವುದು ಸೂಕ್ತ ಎನ್ನುತ್ತಾರೆ ತಜ್ಞರು.
ಒಟ್ಟು ಆದಾಯ | ತೆರಿಗೆಯ ಪ್ರಮಾಣ |
ವಾರ್ಷಿಕ 5 ಲಕ್ಷ ರೂ. | ಇಲ್ಲ(ರಿಬೇಟ್ ಲಭ್ಯ) |
5ರಿಂದ 7.5 ಲಕ್ಷ ರೂ. | 5% |
7.5 ಲಕ್ಷ ರೂ.ಗಳಿಂದ 10 ಲಕ್ಷ ರೂ. | 10% |
10 ಲಕ್ಷ ರೂ.ಗಳಿಂದ 12.5 ಲಕ್ಷ ರೂ. | 15% |
12.5 ಲಕ್ಷ ರೂ.ಗಳಿಂದ 15 ಲಕ್ಷ ರೂ. | 20% |
15 ಲಕ್ಷ ರೂ.ಗಳಿಂದ 20 ಲಕ್ಷ ರೂ. | 25% |
20 ಲಕ್ಷ ರೂ. ಮೇಲ್ಪಟ್ಟು | 30% |
ಸೆಕ್ಷನ್ 80 ಸಿ ಅಡಿಯಲ್ಲಿ ಮಿತಿ ಹೆಚ್ಚಳ?
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಈಗ 1.5 ಲಕ್ಷ ರೂ. ಹೂಡಿಕೆಗೆ ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ. ಕಳೆದ ದಶಕದಿಂದ ಇದು ಬದಲಾಗಿಲ್ಲ. ಹೀಗಾಗಿ ಇದನ್ನು ಏರಿಸುವ ಮೂಲಕ ಉಳಿತಾಯ ಮತ್ತು ಹೂಡಿಕೆಗೆ ಸಹಕರಿಸಬೇಕು ಎಂದು ತಜ್ಞರು ಒತ್ತಾಯಿಸಿದ್ದಾರೆ.
ಸೆಕ್ಷನ್ 80 ಡಿ ಅಡಿಯಲ್ಲಿ ಮಿತಿ ವಿಸ್ತರಣೆ?
ಮಧ್ಯಮ ವರ್ಗದ ಜನತೆ ಜನ ಜೀವನದ ಗುಣಮಟ್ಟ ವೃದ್ಧಿಯನ್ನು ನಿರೀಕ್ಷಿಸುತ್ತಿದೆ. ಕೋವಿಡ್ ಬಿಕ್ಕಟ್ಟಿನ ಬಳಿಕ ವೈದ್ಯಕೀಯ ವೆಚ್ಚಗಳು ಏರಿಕೆಯಾಗಿವೆ. ಹೀಗಾಗಿ ಆದಾಯ ತೆರಿಗೆ ಸೆಕ್ಷಮ್ 80 ಡಿ ಅಡಿಯಲ್ಲಿ ಆರೋಗ್ಯ ವೆಚ್ಚಗಳಿಗೆ ತೆರಿಗೆ ವಿನಾಯಿತಿಯನ್ನು ಬಯಸುತ್ತಿದ್ದಾರೆ.
ಗೃಹ ಖರೀದಿದಾರರಿಗೆ ರಿಲೀಫ್?
ಸ್ವಂತ ಮನೆ ನಿರ್ಮಿಸುವುದು ಎಂದರೆ ಮಧ್ಯಮ ವರ್ಗದ ಜನತೆಗೆ ಈಗಲೂ ಲಕ್ಸುರಿ. ಈ ಹೊರೆಯನ್ನು ಇಳಿಸಲು ಗೃಹ ಸಾಲದ ಬಡ್ಡಿಯ ಮೇಲಿನ ತೆರಿಗೆ ಕಡಿತ ಮಿತಿಯನ್ನು ಈಗಿನ 2 ಲಕ್ಷ ರೂ.ಗಳಿಂದ ವಿಸ್ತರಿಸಬೇಕು ಎಂಬ ಒತ್ತಾಯ ಇದೆ.
ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ಏರಿಕೆ:
ಈ ಹಿಂದೆ 2018-19ರಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಪರಿಚಯಿಸಲಾಗಿತ್ತು. ಇಂಧನ ಮತ್ತು ವೈದ್ಯಕೀಯ ವೆಚ್ಚಗಳು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಇದನ್ನು ಈಗಿನ 50,000 ರೂ.ಗಳಿಂದ 1 ಲಕ್ಷ ರೂ.ಗೆ ಏರಿಸಬೇಕು ಎಂಬ ನಿರೀಕ್ಷೆ ಇದೆ.
ನಾನೂ ಮಧ್ಯಮ ವರ್ಗದಿಂದ ಬಂದವಳು: ನಿರ್ಮಲಾ ಸೀತಾರಾಮನ್
ನಾನೂ ಮಧ್ಯಮ ವರ್ಗದ ಕುಟುಂಬದಿಂದ ಬಂದವಳು. ಆದ್ದರಿಂದ ಅವರ ಕಷ್ಟಗಳು ಮನವರಿಕೆಯಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ನಮ್ಮ ಸರ್ಕಾರ 5 ಲಕ್ಷ ರೂ.ಗಿಂತ ಕಡಿಮೆ ವಾರ್ಷಿಕ ಆದಾಯ ಇರುವವರಿಗೆ ಯಾವುದೇ ಹೊಸ ತೆರಿಗೆಯನ್ನು ವಿಧಿಸಿಲ್ಲ ಎಂದಿದ್ದರು.
ಮೂವರಲ್ಲಿ ಒಬ್ಬರು ಮಿಡ್ಲ್ ಕ್ಲಾಸ್:
ಭಾರತದಲ್ಲಿ ಪ್ರತಿ ಮೂವರಲ್ಲಿ ಒಬ್ಬರು ಮಧ್ಯಮ ವರ್ಗದ ಆದಾಯ ಇರುವ ಜನರಾಗಿದ್ದು, ಈ ಸಂಖ್ಯೆ ಮುಂದಿನ 25 ವರ್ಷಗಳಲ್ಲಿ ಇಮ್ಮಡಿಯಾಗಲಿದೆ. ಹೀಗಾಗಿ ಈ ವರ್ಗದ ಜನರ ಹಿತಾಸಕ್ತಿಯನ್ನು ಬಜೆಟ್ ಪರಿಗಣಿಸಬೇಕಾಗುತ್ತದೆ ಎನ್ನುತ್ತಾರೆ ಹಣಕಾಸು ತಜ್ಞರು.
ಉಳಿತಾಯ ಇಳಿಕೆ: 2021-22ರಲ್ಲಿ ಮಧ್ಯಮ ವರ್ಗದ ಜನರ ಆದಾಯದಲ್ಲಿ ಇಳಿಕೆಯಾಗಿದೆ. ಹೆಚ್ಚುತ್ತಿರುವ ಹಣದುಬ್ಬರ ಅವರ ಉಳಿತಾಯವನ್ನು ಕರಗಿಸುತ್ತಿದೆ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮಾದರಿಯಲ್ಲಿ ನಗರ ಉದ್ಯೋಗ ಖಾತರಿ ಯೋಜನೆಯ ಅವಶ್ಯಕತೆ ಇದೆ ಎನ್ನುತ್ತಾರೆ ತಜ್ಞರು.
ಸಾಮೂಹಿಕ ಉದ್ಯೋಗ ಕಡಿತ: ಮಧ್ಯಮ ವರ್ಗದ ಜನತೆ ಆರ್ಥಿಕ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲರು. ಆದರೆ ಅವರಿಗೆ ಈಗ ಉದ್ಯೋಗ ಕಡಿತದ ಭೀತಿಯೂ ಆವರಿಸಿದೆ. ಆದ್ದರಿಂದ ಈ ಸಮಸ್ಯೆ ಬಗೆಹರಿಸಲು ಬಜೆಟ್ ಆದ್ಯತೆ ನೀಡಬೇಕು ಎಂಬ ಒತ್ತಾಯವೂ ಇದೆ.