ನವ ದೆಹಲಿ: ಜನತೆಗೆ 2023-24ರ ಬಜೆಟ್‌ನಲ್ಲಿ ಘೋಷಿಸಿರುವ ನೂತನ ಆದಾಯ ತೆರಿಗೆ ಪದ್ಧತಿಯು ಹೆಚ್ಚು ಅನುಕೂಲಕರವಾಗಿದೆ. ವಾರ್ಷಿಕ 7 ಲಕ್ಷ ರೂ. ಆದಾಯದ ತನಕ ರಿಬೇಟ್ ಒದಗಿಸುತ್ತಿರುವುದರಿಂದ ಆಕರ್ಷಕವಾಗಿದೆ. ಇದರಿಂದ ಜನರ ಕೈಯಲ್ಲಿ ಖರ್ಚುವೆಚ್ಚಗಳಿಗೆ ಹೆಚ್ಚಿನ ಹಣ ಉಳಿತಾಯವಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. (Budget session) ಲೋಕಸಭೆಯಲ್ಲಿ ಬಜೆಟ್ ಅಧಿವೇಶನ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿತ್ತೀಯ ಶಿಸ್ತಿನ ಚೌಕಟ್ಟಿನೊಳಗೆಯೇ ಬಜೆಟ್ ಅನ್ನುದ ರೂಪಿಸಲಾಗಿದೆ ಎಂದರು.
ಭಾರತ ವೇಗವಾಗಿ ಬೆಳೆಯುತ್ತಿರುವ ಎಕಾನಮಿ:
ಹೊಸ ಪದ್ಧತಿಯಲ್ಲಿ ಯಾವುದೇ ಷರತ್ತಿಲ್ಲದೆಯೇ ರಿಬೇಟ್ ಅನ್ನು ವಿಸ್ತರಿಸಲಾಗಿದೆ. ಹೀಗಾಗಿ ಕಡಿಮೆ ತೆರಿಗೆಯ ಶ್ರೇಣಿಯೊಳಗೆ ಬರುವ ಮಧ್ಯಮ ವರ್ಗದ ಜನತೆಗೆ ತೆರಿಗೆ ಉಳಿತಾಯವಾಗಲಿದೆ. ಸವಾಲುಗಳ ನಡುವೆಯೂ ಭಾರತ ಈಗಲೂ ವಿಶ್ವದಲ್ಲಿಯೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ. 2023-24ರಲ್ಲೂ ಇದೇ ಟ್ರೆಂಡ್ ಮುಂದುವರಿಯುವ ವಿಶ್ವಾಸ ಇದೆ ಎಂದು ತಿಳಿಸಿದರು. ಕೇಂದ್ರ ಬಜೆಟ್, ಭಾರತವನ್ನು ವಿತ್ತೀಯ ಶಿಸ್ತಿನ ಇತಿ-ಮಿತಿಯಲ್ಲಿಯೇ ಅಭಿವೃದ್ಧಿ ಸಾಧಿಸಲು ಪೂರಕವಾಗಿದೆ ಎಂದರು. ನಾವು ಒಬ್ಬ ವ್ಯಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಬಜೆಟ್ ಅನ್ನು ಸಿದ್ಧಪಡಿಸಿಲ್ಲ, ಪ್ರತಿಯೊಬ್ಬರ ಅಗತ್ಯವನ್ನೂ ಗಮನಿಸಿಕೊಳ್ಳಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಆಹಾರ ಸಬ್ಸಿಡಿ ಡಬಲ್, 1.97 ಲಕ್ಷ ಕೋಟಿ ರೂ.ಗೆ ಏರಿಕೆ
ಆಹಾರ ಸಬ್ಸಿಡಿ ವೆಚ್ಚವನ್ನು ಸರ್ಕಾರ 1.97 ಲಕ್ಷ ಕೋಟಿ ರೂ.ಗೆ ಏರಿಸಿದ್ದು, ಪ್ರಮಾಣದಲ್ಲಿ ಇಮ್ಮಡಿಯಾಗಿದೆ. ರಸಗೊಬ್ಬರ ಸಬ್ಸಿಡಿಯನ್ನು 2.25 ಲಕ್ಷ ಕೋಟಿ ರೂ.ಗೆ ಏರಿಸಲಾಗಿದೆ. ವಾಸ್ತವವಾಗಿ ಬಜೆಟ್ ಅಂದಾಜು 1.05 ಲಕ್ಷ ಕೋಟಿ ರೂ.ಗಳಾಗಿತ್ತು. ಆದರೆ ಜಾಗತಿಕ ಮಟ್ಟದಲ್ಲಿ ದರ ಏರಿಕೆಯ ಪರಿಣಾಮ ರೈತರಿಗೆ ಬಿಸಿ ತಟ್ಟದಂತೆ ನೋಡಿಕೊಳ್ಳಲು ರಸಗೊಬ್ಬರ ಸಬ್ಸಿಡಿಯನ್ನು ಹೆಚ್ಚಿಸಲಾಯಿತು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. 2023-24ರಲ್ಲಿ ಕೃಷಿ ಸಾಲ ವಿತರಣೆಯ ಗುರಿಯನ್ನು 20 ಲಕ್ಷ ಕೋಟಿ ರೂ.ಗೆ ಏರಿಸಲಾಗಿದೆ ಎಂದರು.
ರಾಜ್ಯಗಳಿಗೆ 17.98 ಲಕ್ಷ ಕೋಟಿ ರೂ. ವರ್ಗಾವಣೆ:
ರಾಜ್ಯಗಳಿಗೆ ಕೇಂದ್ರೀಯ ತೆರಿಗೆ ಮತ್ತು ಸಂಪನ್ಮೂಲ ಹಂಚಿಕೆಯ ಪಾಲಿನಲ್ಲಿ 17.8 ಲಕ್ಷ ಕೋಟಿ ರೂ.ಗಳನ್ನು ವಿತರಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು 1.55 ಲಕ್ಷ ಕೋಟಿ ರೂ. ಹೆಚ್ಚು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.