ನವ ದೆಹಲಿ: ನಾಳೆ ಮಂಡನೆಯಾಗಲಿರುವ 2023-24 ಸಾಲಿನ ಕೇಂದ್ರ ಬಜೆಟ್ (Budget 2023) ಜನ ಜೀವನದ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡಲಿದೆಯೇ ಹೊರತು ಚುನಾವಣೆ ಅದರ ಗುರಿಯಲ್ಲ ಎಂದು ಕೇಂದ್ರ ಹಣಕಾಸು ಖಾತೆಯ ಸಹಾಯಕ ಸಚಿವ ಪಂಕಜ್ ಚೌಧುರಿ ಮಂಗಳವಾರ ಹೇಳಿದ್ದಾರೆ. ಈ ಸಲದ ಬಜೆಟ್ ಬಗ್ಗೆಯೂ ಎಂದಿನಂತೆ ಮೋದಿ ಹೆಚ್ಚಿನ ಮುತುವರ್ಜಿ, ಕಾಳಜಿ ವಹಿಸಿದ್ದಾರೆ. ಸಮಾಜದ ಎಲ್ಲ ವರ್ಗಗಳ ಹಿತವನ್ನು ಬಜೆಟ್ ಪರಿಗಣಿಸಲಿದೆ ಎಂದರು.
ಇಂದು ಮಂಡನೆಯಾಗಲಿರುವ ಆರ್ಥಿಕ ಸಮೀಕ್ಷೆ ಬಜೆಟ್ ಬಗ್ಗೆ ಕೆಲವು ಸುಳಿವುಗಳನ್ನು ನೀಡುವ ನಿರೀಕ್ಷೆ ಇದೆ. ಬಜೆಟ್‌ನ ಆಶಯ ಏನಾಗಿರಬಹುದು ಎಂಬ ಕುತೂಹಲ ಉಂಟಾಗಿದೆ. 2024ರ ಲೋಕಸಭೆ ಚುನಾವಣೆಗೆ ಮುನ್ನ ಪೂರ್ಣಪ್ರಮಾಣದ ಕೊನೆಯ ಬಜೆಟ್ ಇದಾಗಿರುವುದು ಕಾರಣ. ಫೆಬ್ರವರಿ 1ರಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ ಮಂಡನೆಯಾಗಲಿದೆ.
2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಕೊನೆಯ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಫೆ.1ರಂದು ಮಂಡನೆಯಾಗುತ್ತಿರುವುದರಿಂದ, ಜನಪ್ರಿಯ ಬಜೆಟ್ ನಿರೀಕ್ಷೆ ಇದೆ. ಆದರೆ ಸಚಿವರು ಬಜೆಟ್ ಆದ್ಯತೆ ಒಟ್ಟಾರೆ ಎಕಾನಮಿಯ ಅಭಿವೃದ್ಧಿಯೇ ಹೊರತು ಚುನಾವಣೆ ಅಲ್ಲ ಎಂದಿದ್ದಾರೆ.