ಸೂರತ್: ದೇಶದ ಮೊಟ್ಟ ಮೊದಲ ಬುಲೆಟ್ ರೈಲು ಗುಜರಾತಿನ ಸೂರತ್ ಮತ್ತು ಬಿಲಿಮೊರಾ ನಡುವೆ 2026ರಲ್ಲಿ ಆರಂಭವಾಗುವ ವಿಶ್ವಾಸ ಇದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಅಹಮದಾಬಾದ್-ಮುಂಬಯಿ ಬುಲೆಟ್ ರೈಲು ಯೋಜನೆಯ ಕಾಮಗಾರಿಗಳನ್ನು ವೀಕ್ಷಿಸಿದ ಸಂದರ್ಭ ಈ ವಿಷಯ ತಿಳಿಸಿದರು.
ಬುಲೆಟ್ ರೈಲು ಯೋಜನೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಬುಲೆಟ್ ರೈಲು ಅಹಮದಾಬಾದ್-ಮುಂಬಯಿ ನಡುವೆ ಗಂಟೆಗೆ 320 ಕಿ.ಮೀ ವೇಗದಲ್ಲಿ ಸಂಚರಿಸಲಿದೆ. 508 ಕಿ,ಮೀ ದೂರವನ್ನು ಕ್ರಮಿಸಲಿದೆ. ನಡುವೆ 12 ನಿಲ್ದಾಣಗಳು ಇರಲಿವೆ. ಇದರ ಪರಿಣಾಮ ಎರಡೂ ನಗರಗಳ ನಡುಣ ರೈಲು ಪ್ರಯಾಣದ ಅವಧಿ ಈಗಿನ 6 ಗಂಟೆಯ ಬದಲಿಗೆ 3 ಗಂಟೆಗೆ ಇಳಿಯಲಿದೆ.
ಈ ಯೋಜನೆಯ ಒಟ್ಟು ವೆಚ್ಚ ಅಂದಾಜು 1.1 ಲಕ್ಷ ಕೋಟಿ ರೂ.ಗಳಾಗಿದ್ದು, ಜಪಾನ್ ಇಂಟರ್‌ನ್ಯಾಶನಲ್ ಕಾರ್ಪೊರೇಷನ್ ಏಜೆನ್ಸಿ 81% ಹಣಕಾಸು ನೆರವನ್ನು ನೀಡಲಿದೆ. ಯೋಜನೆಗೆ ಅಗತ್ಯವಿರುವ ಭೂಮಿಯ ಪೈಕಿ 90% ಸ್ವಾಧೀನ ನಡೆದಿದೆ.
ಬುಲೆಟ್ ರೈಲು ಯೋಜನೆಯ 61 ಕಿ.ಮೀ ಉದ್ದಕ್ಕೂ ಸ್ತಂಭಗಳನ್ನು ಅಳವಡಿಸಲಾಗಿದೆ. 150 ಕಿ.ಮೀ. ಉದ್ದಕ್ಕೂ ಕಾಮಗಾರಿ ನಡೆಯುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಮಹಾರಾಷ್ಟ್ರ ಸರಕಾರ ಕೂಡ ಉತ್ಸಾಹದಿಂದ ಯೋಜನೆಗೆ ಸಹಕರಿಸಬೇಕು. ಇದು ರಾಷ್ಟ್ರೀಯ ಯೋಜನೆಯಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಸಲ್ಲದು ಎಂದರು. ಮಹಾರಾಷ್ಟ್ರ ವಲಯದಲ್ಲಿ ಯೋಜನೆ ಮಂದಗತಿಯಲ್ಲಿದೆ. ಆದರೆ ನಾವು ಅಲ್ಲೂ ಚುರುಕುಗೊಳಿಸಿ ಮಾದರಿಯಾಗಬೇಕು ಎಂದರು.