ನವ ದೆಹಲಿ: ಕೇಂದ್ರ ಸರ್ಕಾರ ಮಧ್ಯಮ ವರ್ಗಕ್ಕೆ, ತೆರಿಗೆದಾರರಿಗೆ ಬಂಪರ್ ಅನುಕೂಲವನ್ನು ಘೋಷಿಸಿದ್ದು, (Union Budget 2023) ವಾರ್ಷಿಕ 7 ಲಕ್ಷ ರೂ. ತನಕ ಆದಾಯಕ್ಕೆ ತೆರಿಗೆಯನ್ನು ಪಾವತಿಸಬೇಕಿಲ್ಲ. ಏಕೆಂದರೆ ಈ ಹಿಂದಿನ 5 ಲಕ್ಷ ರೂ. ತನಕದ ರಿಬೇಟ್ ಅನ್ನು 7 ಲಕ್ಷ ರೂ.ಗೆ ಏರಿಸಲಾಗಿದೆ. ಇದು ಹೊಸ ತೆರಿಗೆ ಪದ್ಧತಿಗೆ ಅನ್ವಯವಾಗುತ್ತದೆ.
ಏನಿದು ತೆರಿಗೆ ರಿಬೇಟ್? ತೆರಿಗೆ ರಿಬೇಟ್ ಎಂದರೆ, ತೆರಿಗೆ ಕಡಿತಕ್ಕೆ ಸೇರಿದ ಪ್ರಸ್ತಾಪವಾಗಿದ್ದು ಇದುವರೆಗೆ ಒಟ್ಟು 5 ಲಕ್ಷ ರೂ. ತನಕದ ಆದಾಯಕ್ಕೆ ಲಭಿಸುತ್ತಿತ್ತು. ಅದನ್ನು ಇದೀಗ 7 ಲಕ್ಷ ರೂ.ಗೆ ವಿಸ್ತರಿಸಲಾಗಿದೆ. ಪ್ರಸ್ತುತ 5 ಲಕ್ಷ ರೂ. ತನಕದ ಆದಾಯಕ್ಕೆ 12,500 ರೂ. ತನಕ ತೆರಿಗೆ ರಿಬೇಟ್ ಸಿಗುತ್ತದೆ. ಹೀಗಾಗಿ ವೈಯಕ್ತಿಕ ತೆರಿಗೆದಾರರು ಇನ್ನು ಮುಂದೆ 7 ಲಕ್ಷ ರೂ. ತನಕದ ಆದಾಯಕ್ಕೆ ತೆರಿಗೆ ನೀಡದೆ ಇರಬಹುದು. ಮತ್ತೊಂದು ಬದಲಾವಣೆ ಏನೆಂದರೆ ಹೊಸ ತೆರಿಗೆ ಶ್ರೇಣಿಯಲ್ಲಿ ತೆರಿಗೆ ವಿನಾಯಿತಿಯ ಮಿತಿಯನ್ನು 3 ಲಕ್ಷ ರೂ.ಗೆ ಏರಿಸಲಾಗಿದೆ. ವೈಯಕ್ತಿಕ ಆದಾಯ ತೆರಿಗೆ ದರದ ಹೊಸ ಶ್ರೇಣಿ ಇಂತಿದೆ.
ಹೊಸ ಪದ್ಧತಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ವಾರ್ಷಿಕ 3 ಲಕ್ಷ ರೂ. ತನಕ ವಿಸ್ತರಿಸಲಾಗಿದೆ.
ವಾರ್ಷಿಕ 3 ಲಕ್ಷ ರೂ.ಗಳಿಂದ 5 ಲಕ್ಷ ರೂ. ತನಕ 5% ತನಕ ತೆರಿಗೆ ವಿಧಿಸಲಾಗುತ್ತದೆ.
ವಾರ್ಷಿಕ 6 ಲಕ್ಷ ರೂ.ಗಳಿಂದ 9 ಲಕ್ಷ ರೂ. ತನಕ 10% ತೆರಿಗೆ ಅನ್ವಯಿಸಲಿದೆ.
ವಾರ್ಷಿಕ ೧೨ ಲಕ್ಷ ರೂ.ಗಳಿಂದ 15 ಲಕ್ಷ ರೂ. ತನಕ ಆದಾಯ ತೆರಿಗೆ 20% ಅನ್ವಯಿಸಲಿದೆ.
ವಾರ್ಷಿಕ 15 ಲಕ್ಷ ರೂ.ಗಳಿಗೂ ಹೆಚ್ಚಿನ ಆದಾಯಕ್ಕೆ 30% ತೆರಿಗೆ ವಿಧಿಸಲಾಗುವುದು.
ಆದಾಯ ತೆರಿಗೆ ರಿಟರ್ನ್‌ಗಳ ಸಂಸ್ಕರಣೆಗೆ ತಗಲುವ ಸರಾಸರಿ ಅವಧಿಯನ್ನು 93 ದಿನಗಳಿಂದ 16 ದಿನಗಳಿಗೆ ಇಳಿಸಲಾಗಿದೆ. ಇದು ಕೂಡ ತೆರಿಗೆ ಸ್ನೇಹಿಯಾಗಲಿದೆ.