Site icon Vistara News

Business Guide : ಕಿರಾಣಾ ಸ್ಟೋರ್‌ಗಳು ಸೂಪರ್‌ ಮಾರ್ಕೆಟ್‌ ಆಗಿ ಬದಲಾಗಬೇಕೆ?

kirana store

ಭಾರತದಲ್ಲಿ ಯಾವುದಾದರೂ ವ್ಯಾಪಾರ ಶುರು ಮಾಡಬೇಕು ಎಂದು ಬಯಸುವವರಿಗೆ ಕಿರಾಣಾ ಸ್ಟೋರ್ ಮಾಡಬೇಕು ಎಂಬ ಆಲೋಚನೆಯೂ ಬರುತ್ತದೆ. (Business Guide) ಹಾಗಿದ್ದರೆ ಕಿರಾಣಾ ಸ್ಟೋರ್‌ ತೆರೆಯುವುದು ಹೇಗೆ? ಇ-ಕಾಮರ್ಸ್‌ ಕಾಂಪಿಟೇಶನ್‌ ಎದುರಿಸಿ ಲಾಭ ಗಳಿಸುವುದು ಹೇಗೆ ? ಗಳಿಸುವ ಲಾಭವನ್ನು ಹೇಗೆ ಉಳಿತಾಯ ಮಾಡಿ ಬೆಳೆಸಬೇಕು? ಕಿರಾಣಾ ಸ್ಟೋರ್‌ಗಳು ಸೂಪರ್‌ ಮಾರ್ಕೆಟ್‌ ಆಗಿ ಬದಲಾಗಬೇಕೆ? ಎಂಬುದನ್ನು ನೋಡೋಣ. ಆದರೆ ಇದಕ್ಕೂ ಮುನ್ನ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳಬೇಕು.

ನೋಡಿ, ಭಾರತದಲ್ಲಿ 1.3 ಕೋಟಿ ಕಿರಾಣಾ ಸ್ಟೋರ್‌ಗಳಿವೆ.‌ ಆಫ್‌ಲೈನ್‌ ಸ್ಪರ್ಧೆ ಮಾತ್ರವಲ್ಲದೆ ಆನ್‌ಲೈನ್‌ ಅಥವಾ ಇ-ಕಾಮರ್ಸ್‌ ಮೂಲಕವೂ ಸ್ಪರ್ಧೆ ಇದೆ. ಕಿರಾಣಾ ಸ್ಟೋರ್‌ಗಳಲ್ಲಿ ಸಿಗುವ ಎಲ್ಲ ವಸ್ತುಗಳನ್ನು ಆನ್‌ ಲೈನ್‌ ಮೂಲಕವೂ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ಎಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ ಅಂತ ಜನ ನೋಡುತ್ತಾರೆ.

ಕಿರಾಣಾ ಸ್ಟೋರ್‌ ಆರಂಭಿಸುವವರು ಇತರ ಸ್ಟೋರ್‌ಗಳಿಂತ ತುಸು ಭಿನ್ನವಾದ ಸೇವೆಯನ್ನು ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸಬಹುದು. ಇತರ ಸ್ಟೋರ್‌ಗಳಿಗಿಂತ ಸ್ವಲ್ಪ ಹೆಚ್ಚು ಹೊತ್ತು ಸೇವೆ ನೀಡಬಹುದು. ಹೆಚ್ಚು ವಿಶೇಷ ಎನ್ನಿಸುವಂಥ ಉತ್ಪನ್ನಗಳನ್ನು ಮಾರಾಟಕ್ಕಿಡಬಹುದು. ನೀವು ಇರುವ ಏರಿಯಾ ಕೂಡ ನಿಮ್ಮ ಬಿಸಿನೆಸ್‌ ಮಾಡೆಲ್‌ ಅನ್ನು ನಿರ್ಧರಿಸುತ್ತದೆ. ಹೆಚ್ಚು ಮುಂದುವರಿದಿರುವ, ಆರ್ಥಿಕವಾಗಿ ಸಿರಿವಂತರೇ ಹೆಚ್ಚು ಇರುವ ಕಡೆಗಳಲ್ಲಿ ನಿಮ್ಮ ಕಿರಾಣಾ ಸ್ಟೋರ್‌ ಇದ್ದರೆ, ಅಂಥ ಗ್ರಾಹಕರಿಗೆ ಬೇಕಾಗುವ ಬ್ರಾಂಡ್‌ಗಳ ಉತ್ಪನ್ನಗಳನ್ನು ಕೊಡಬೇಕು. ಮಧ್ಯಮ ವರ್ಗ, ಬಡ ಜನತೆ ವಾಸಿಸುವ ಪ್ರದೇಶದಲ್ಲಿ ದುಬಾರಿ ಬ್ರಾಂಡ್‌ಗಳ ಉತ್ಪನ್ನಗಳನ್ನು ತಂದಿಟ್ಟರೆ ನಷ್ಟವಾಗಬಹುದು. ಸಣ್ಣ ಶಾಪ್‌ ಆಗಿದ್ದರೂ, ಚೆನ್ನಾಗಿ ಮಾಡಿ. ಹೋಮ್‌ ಡೆಲಿವರಿ ಸರ್ವೀಸನ್ನೂ ಕೊಡಿ. ಆದರೆ ಸಾಕಷ್ಟು ಶಾಪ್‌ ಗಳು ಇರುವ ಕಡೆಗಳಲ್ಲಿ ನೀವು ತೆರೆಯಬೇಡಿ. ಆಗ ನಿಮಗೆ ಸಿಗುವ ಲಾಭ ಕಡಿಮೆಯಾಗುತ್ತದೆ.

ದಿನಸಿ ಅಂಗಡಿಗಳಲ್ಲಿ ಮಾರ್ಜಿನ್‌ ಅಥವಾ ಲಾಭಾಂಶದ ಪ್ರಮಾಣ ಅತ್ಯಲ್ಪ. ಹಾಗಾದರೆ ಎಷ್ಟು ಬಂಡವಾಳ ಬೇಕು? 5 ಲಕ್ಷ ರೂ.ಗಳಿಂದ 25 ಲಕ್ಷ ರೂ. ತನಕ ಬಂಡವಾಳ ಬೇಕಾಗುತ್ತದೆ. ಉತ್ತಮ ಮಾರ್ಕೆಟ್‌ ಪ್ರದೇಶದಲ್ಲೂ ಭರ್ಜರಿ ವ್ಯಾಪಾರ ನಡೆಯುತ್ತದೆ. ನೀವು ಲಕ್ಷಾಂತರ ರೂ. ಹೂಡಿಕೆಯೊಂದಿಗೆ ಕಿರಾಣಾ ಸ್ಟೋರ್‌ ತೆರೆದಾಗ, ಅದಕ್ಕೆ ಟ್ರೇಡ್‌ ಲೈಸೆನ್ಸ್‌, ಬಾಡಿಗೆ ಕಟ್ಟಡದಲ್ಲಿ ಮಾಡಿದರೆ ಲೀಸ್‌ ಅಗ್ರಿಮೆಂಟ್‌, ಆಹಾರ ವಸ್ತುಗಳ ಮಾರಾಟಕ್ಕೆ ಎಫ್‌ಎಸ್‌ ಎಸ್‌ ಎಐ ಲೈಸೆನ್ಸ್‌, ಶಾಪ್‌ ಆಂಡ್‌ ಎಸ್ಟಾಬ್ಲಿಷ್‌ಮೆಂಟ್‌ ಲೈಸೆನ್ಸ್‌ ಅಗತ್ಯ. ನಿಮ್ಮ ವಾರ್ಷಿಕ ವಹಿವಾಟು 40 ಲಕ್ಷ ರೂ. ದಾಟಿದರೆ ಜಿಎಸ್‌ಟಿ ರಿಜಿಸ್ಟ್ರೇಶನ್‌ ಕೂಡ ಅಗತ್ಯ. ಕಿರಾಣಾ ಸ್ಟೋರ್‌ನ ಇಂಟೀರಿಯರ್‌ ಡಿಸೈನ್‌ ಅನ್ನು 50 ಸಾವಿರ ರೂ.ಗಳಿಂದ ಕೆಲವು ಲಕ್ಷ ರೂ. ತನಕ ಮಾಡಿಸಬಹುದು.

ಕಂಪನಿಯ ಅಧಿಕೃತ ಡೀಲರ್‌ಗಳಿಂದ ದಿನಸಿ ವಸ್ತುಗಳನ್ನು ಖರೀದಿಸಬಹುದು. ಬೇಳೆ ಕಾಳುಗಳು ಬೇಕಿದ್ದರೆ ಪ್ರತ್ಯೇಕ ಡೀಲರ್‌ಗಳಿರುತ್ತಾರೆ. ಅವರು ಕಾಳುಗಳನ್ನು ಲಾರಿಗಳಲ್ಲಿ ತಂದು ಮೂಟೆಗಳಲ್ಲಿ ಮಾರುತ್ತಾರೆ. ಬೇಳೆಕಾಳುಗಳನ್ನು ಸ್ವಚ್ಛಗೊಳಿಸಿ ಸಣ್ಣ ಪ್ಯಾಕೇಟ್‌ಗಳಲ್ಲಿ ಸ್ವಲ್ಪ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು. ಜತೆಗೆ ರಿಟೇಲ್‌ ಆಗಿ ಐಸ್‌ ಕ್ರೀಮ್‌, ಹಾಲು, ಮೊಸರು ಮಾರಾಟ ಮಾಡಬಹುದು. ಮಾರ್ಜಿನ್‌ 5-15% ಸಿಗುತ್ತದೆ. ದಿನಕ್ಕೆ 10,000 ರೂ. ವ್ಯಾಪಾರ ಮಾಡಿದರೆ ಸುಮಾರು 500 ರೂ. ಲಾಭ ಸಿಗುತ್ತದೆ.

ಕಿರಾಣಿ ಅಂಗಡಿ ನಡೆಸುವವರು ಎದುರಿಸುವ ಸವಾಲುಗಳೇನು ಎಂಬುದನ್ನು ನೋಡೋಣ. ಮೊದಲನೆಯದಾಗಿ ಯಾವಾಗಲೂ ಅಂಗಡಿ ತೆರೆಯಬೇಕು. ಬೆಳಗ್ಗೆ 7 ಗಂಟೆಗೆ ತೆರೆದರೆ ರಾತ್ರಿ 10 ರ ತನಕ ತೆರೆದಿರಬೇಕು. ಎರಡನೆಯದಾಗಿ ಲೆಕ್ಕಾಚಾರ ಕರೆಕ್ಟಾಗಿ ಇಟ್ಟುಕೊಳ್ಳಬೇಕು. ಎಂಟಾಣೆ, ಒಂದು ರೂ. ಲೆಕ್ಕದಲ್ಲಿ ಅಲ್ಪ ಲಾಭಾಂಶ ಇರುವುದರಿಂದ ಲೆಕ್ಕಾಚಾರ ಬೇಕು. ಮೂರನೆಯದಾಗಿ ಉದ್ರಿ ಅಥವಾ ಸಾಲಕ್ಕೆ ತೆಗೆದುಕೊಳ್ಳುವ ಗ್ರಾಹಕರು ಇದ್ದೇ ಇರುತ್ತಾರೆ. ಅವರನ್ನು ಸಂಪೂರ್ಣ ದೂರವಿಡಲು ಸಾಧ್ಯವಾಗುವುದಿಲ್ಲ. ನಾಲ್ಕನೆಯದಾಗಿ, ವೈವಿಧ್ಯಮಯ ಉತ್ಪನ್ನಗಳನ್ನು ಇಡಬೇಕು. ಐದನೆಯದಾಗಿ ಒಬ್ಬರಿಂದಲೇ ಅಂಗಡಿ ನಡೆಸುವುದು ಕೂಡ ಕಷ್ಟ. ಇಬ್ಬರು ಇದ್ದರೆ ಸೂಕ್ತ.

ಆರನೆಯದಾಗಿ, ನೀವು ಮಾರುಕಟ್ಟೆಯಿಂದ 10,000 ರೂ. ಮಾಲುಗಳನ್ನು ತಂದು ಇಡುತ್ತೀರಿ. ಅದರಲ್ಲಿ ಒಂದು ರೂಪಾಯಿ-ಹತ್ತು ರೂಪಾಯಿ-ಐವತ್ತು ರೂಪಾಯಿ ಲೆಕ್ಕದ ಅನೇಕ ವಸ್ತುಗಳಿರುತ್ತವೆ. ಅದನ್ನು ಮಾರಾಟ ಮಾಡಿ ಆದಾಯ ಗಳಿಸುವುದು ಸವಾಲು.

ಏಳನೆಯದಾಗಿ, ಫೋನ್‌ ಪೇ-ಗೂಗಲ್‌ ಪೇ ಇತ್ಯಾದಿ ಯುಪಿಐ ವ್ಯವಸ್ಥೆಗೆ ತಕ್ಕಂತೆ ಅಪ್‌ ಡೇಟ್‌ ಆಗಬೇಕು. ಭವಿಷ್ಯದ ದಿನಗಳಲ್ಲಿ ಡಿಜಿಟಲ್‌ ಟ್ರಾನ್ಸಕ್ಷನ್‌ ಜಾಸ್ತಿಯಾಗುವುದರಲ್ಲಿ ಸಂದೇಹವೇ ಬೇಡ.

ಎಂಟನೆಯದಾಗಿ ಕಿರಾಣಾ ಸ್ಟೋರ್‌ ನಡೆಸುವವರು ಪಿಗ್ಮಿ, ಚೀಟಿಗಳಲ್ಲಿ ಉಳಿತಾಯ ಮಾಡುತ್ತಾರೆ. ಆದರೆ ಖಾಸಗಿ ವಲಯದ ಚೀಟಿ ಉಳಿತಾಯ ಯೋಜನೆಗಳು ಅಷ್ಟೇ ರಿಸ್ಕ್‌ ಅನ್ನು ಹೊಂದಿರುತ್ತವೆ. ಪಿಗ್ಮಿಯಲ್ಲಿ ಬಡ್ಡಿ ಆದಾಯ ಅತ್ಯಲ್ಪ. ಆದ್ದರಿಂದ ಇವುಗಳಿಗಿಂತ ಹೆಚ್ಚು ಆದಾಯ ನೀಡುವ ಮ್ಯೂಚುವಲ್‌ ಫಂಡ್‌, ಸ್ಟಾಕ್ಸ್‌, ಎನ್‌ಪಿಎಸ್‌, ಪಿಪಿಎಫ್‌ ಇತ್ಯಾದಿಗಳಲ್ಲಿಯೂ ಹೂಡಿಕೆ ಮಾಡುವುದು ಉತ್ತಮ. ಇದರಿಂದ ನಿಮ್ಮ ಗಳಿಕೆಯ ಹಣ ಪರಿಣಾಮಕಾರಿಯಾಗಿ ಬೆಳೆಯುತ್ತದೆ.

ಕೊನೆಯದಾಗಿ ಕಿರಾಣಾ ಸ್ಟೋರ್‌ಗಳು ಸೂಪರ್‌ ಮಾರ್ಕೆಟ್‌ ಆಗಿ ಬದಲಾಗಬೇಕೇ? ಎನ್ನುವುದು. ಈಗಿನ ಗ್ರಾಹಕರು ಸಣ್ಣ ಕಿರಾಣಾ ಅಂಗಡಿಗಳ ಬದಲಿಗೆ ವಿಶಾಲವಾದ ಸೂಪರ್‌ ಮಾರ್ಕೆಟ್‌ಗಳಿಗೆ ಕುಟುಂಬ ಸಮೇತರಾಗಿ ಹೋಗಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಬಯಸುತ್ತಾರೆ. ಈ ಟ್ರೆಂಡ್‌ ದಿನೇ ದಿನೆ ಹೆಚ್ಚುತ್ತಿರುವುದರಿಂದ ಕಿರಾಣಾ ಸ್ಟೋರ್‌ ನಡೆಸುವವರು ಸೂಪರ್‌ ಮಾರ್ಕೆಟ್‌ ಬಿಸಿನೆಸ್‌ ಜನಪ್ರಿಯವಾಗುತ್ತಿದೆ. ಹೀಗಿದ್ದರೂ, ಕಿರಾಣಾ ಸ್ಟೋರ್‌ಗೆ ಹೋಲಿಸಿದರೆ ಇದಕ್ಕೆ ಹೆಚ್ಚಿನ ಬಂಡವಾಳ ಅಗತ್ಯ.

ಇಷ್ಟೆಲ್ಲ ಸಂಗತಿಗಳಿದ್ದರೂ, ಕೊನೆಯದಾಗಿ ಕಿರಾಣಾ ಸ್ಟೋರ್‌ ಎಂದರೆ ಹೊಸ ಪ್ರಾಡಕ್ಟ್‌ ಮತ್ತು ಸರ್ವೀಸ್‌ ಅನ್ನು ಸ್ಥಳೀಯರಿಗೆ ನೀಡುವ ಜನೋಪಯೋಗಿ ಕೆಲಸವೂ ಹೌದು. ಆದಾಯ ಮತ್ತು ಲಾಭದ ಜತೆಗೆ ಜನರ ಬೇಸಿಕ್‌ ಅಗತ್ಯಗಳನ್ನು ಪೂರೈಸುವ ಕೆಲಸ ಎನ್ನುವುದು ವಿಶೇಷ.

Exit mobile version