ಪ್ರತಿಯೊಂದು ಸಿನಿಮಾದಲ್ಲೂ ಒಬ್ಬ ಹೀರೊ ಇರುತ್ತಾನೆ. ಅವನ ಸುತ್ತ ಸಿನಿಮಾ ನಡೆಯುತ್ತದೆ. ಹೀರೊ ಇಲ್ಲದ ಚಿತ್ರವನ್ನು ನೀವು ಊಹಿಸಲೂ ಸಾಧ್ಯವಿಲ್ಲ. ನೀವು ಬಿಸಿನೆಸ್‌ನಲ್ಲಿ ಒಂದು ಉತ್ಪನ್ನವನ್ನು ಮಾರಾಟ ಮಾಡುವಾಗ, ನಿಮ್ಮ ಗ್ರಾಹಕರನ್ನೂ ಹೀರೊ ಎಂದು ಭಾವಿಸಿ ಗೌರವಿಸಬೇಕಾಗುತ್ತದೆ. ಯಶಸ್ವಿಯಾಗಿ ಬಿಸಿನೆಸ್ ನಡೆಸುವವರು ಈ ಸೂತ್ರವನ್ನು ಕಡ್ಡಾಯವಾಗಿ ಪಾಲಿಸುತ್ತಾರೆ. ಏಕೆಂದರೆ ಒಬ್ಬ ಗ್ರಾಹಕನನ್ನು ನೀವು ಚೆನ್ನಾಗಿ ನೋಡಿಕೊಂಡರೆ, ಆತ ಮತ್ತಷ್ಟು ಬಿಸಿನೆಸ್ ಕೊಡುತ್ತಾನೆ. ನಿಮ್ಮ ಮಾರ್ಕೆಟಿಂಗ್ ಸ್ಟ್ರಾಟಜಿಯಲ್ಲಿ ಗ್ರಾಹಕರೇ ಪ್ರಭುಗಳು.
ಸಾಮಾನ್ಯವಾಗಿ ಕಂಪನಿಗಳು ಮಾಡುವ ಪ್ರಮಾದ ಏನೆಂದರೆ ಕಂಪನಿ ಅಥವಾ ಉತ್ಪನ್ನವನ್ನೇ ಹೀರೊ ಎಂದು ಪರಿಗಣಿಸಿ ಪ್ರಚಾರ ಮಾಡುತ್ತಾರೆ. ಆದರೆ ಕಟು ವಾಸ್ತವ ಏನೆಂದರೆ, ಗ್ರಾಹಕರು ಕಂಪನಿ ಅಥವಾ ಪ್ರಾಡಕ್ಟ್ ಅನ್ನು ಕೇರ್ ಮಾಡುವುದಿಲ್ಲ, ಅವರಿಗೆ ಅವರ ಅಗತ್ಯಗಳು ಈಡೇರಬೇಕು. ಆದ್ದರಿಂದ ನಿಮ್ಮ ಉತ್ಪನ್ನ ಮತ್ತು ಸೇವೆಗಳು ಮಾರುಕಟ್ಟೆಯಲ್ಲಿ ಗೆಲ್ಲಬೇಕಿದ್ದರೆ ಅವುಗಳು ಗ್ರಾಹಕರ ಅಗತ್ಯಗಳನ್ನು ಪೂರೈಸಬೇಕು.
ನೀವು ಡಾ ಬ್ರೊ ತನ್ನ ವೀಕ್ಷಕರನ್ನು ದೇವ್ರು ಅಂತ ಗೌರವಿಸಿ ಕರೆಯುವುದನ್ನು ಕಾಣಬಹುದು. ವೀಕ್ಷಕರಿದ್ದರೆ ಮಾತ್ರ ಎಲ್ಲವೂ ಸಾಧ್ಯ ಎಂಬುದದನ್ನು ಡಾ ಬ್ರೊ ಮನಗಂಡಿರುವುದು ಸ್ಪಷ್ಟ. ಆದರೆ ಇದರಲ್ಲೊಂದು ದೊಡ್ಡ ಸಂದೇಶವಂತೂ ಇದೆ. ಗ್ರಾಹಕರೇ ದೇವರು ಎನ್ನೋದು ಸಾರ್ವಕಾಲಿಕ ಸತ್ಯ. ಯಾರು ಎಷ್ಟೇ ಚೆನ್ನಾಗಿ ಉತ್ಪನ್ನಗಳನ್ನು ಮಾರಾಟಕ್ಕಿಟ್ಟರೂ, ಗ್ರಾಹಕರನ್ನು ಕಡೆಗಣಿಸಿದರೆ ಒಂದಿಲ್ಲೊಂದು ಹಂತದಲ್ಲಿ ವ್ಯಾಪಾರ ಕುಸಿಯುತ್ತದೆ. ನೀವು ಬಿಟುಸಿ ಕಂಪನಿಯ ಮಾಕಲೀಕರಾಗಿರಬಹುದು, ಬಿಟುಬಿ ವಿಭಾಗದಲ್ಲಿ ಇರಬಹುದು. ಅಂತಿಮವಾಗಿ ಎಲ್ಲ ಖರೀದಿದಾರರೂ ಗ್ರಾಹಕರೇ ಆಗಿರುತ್ತಾರೆ. ಆದ್ದರಿಂದ ಗ್ರಾಹಕರನ್ನು ಗೌರವಿಸುವುದು, ಅವರ ಅಗತ್ಯಗಳಿಗೆ ದನಿಯಾಗುವುದು ಮುಖ್ಯ.
ಕಂಪನಿಗಳ ಜಾಹೀರಾತುಗಳಲ್ಲಿಯೂ ಗ್ರಾಹಕರೇ ಹೀರೊ ಎಂಬ ಪರಿಕಲ್ಪನೆ ಬೇರೂರಿರುವುದನ್ನು ಗಮನಿಸಬಹುದು. ಉದಾಹರಣೆಗೆ ನೀವು ಬೂಸ್ಟ್ ಕುಡಿಯಿರಿ, ಸಚಿನ್ ತೆಂಡೂಲ್ಕರ್ ಥರ ಹೀರೊ ಆಗಬಹುದು, ಹೀರೋ ಡ್ರೈವ್ ಮಾಡಿದಂತೆ ಕಾರು ಚಲಾಯಿಸಿ, ಮಗುವಿನಂತೆ ಆರಾಮವಾಗಿ ನಿದ್ರಿಸುತ್ತಾ ಪ್ರಯಾಣಿಸಿ, ಮನೆ ಬಾಗಿಲಿಗೇ ಸಕಲ ಸೇವೆಗಳನ್ನು ಪಡೆಯಿರಿ ಎಂಬಿತ್ಯಾದಿ ಜಾಹೀರಾತುಗಳನ್ನು ನೀವು ಗಮನಿಸಬಹುದು.
ಅಮೆಜಾನ್‌ನಂಥ ಇ-ಕಾಮರ್ಸ್ ಕಂಪನಿ ಕೂಡ ನಿರಂತರವಾಗಿ ಗ್ರಾಹಕರ ರಿವ್ಯೂಸ್‌ಗಳನ್ನು ಬಯಸುತ್ತದೆ. ಕಂಪನಿಯ ಬಾಸ್ ಜೆಫ್ ಬಿಜೋಸ್ ಪ್ರಕಾರ ಅಮೆಜಾನ್ ಕೇವಲ ಉತ್ಪನ್ನಗಳನ್ನು ಸೇಲ್ ಮಾಡುವುದಿಲ್ಲ, ಖರೀದಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಲೂ ಸಹಕರಿಸುತ್ತದೆ. ನಿಮ್ಮ ವ್ಯಾಪಾರ ಗ್ರಾಹಕ ಕೇಂದ್ರಿತವಾಗಿದ್ದರೆ ಯಶಸ್ಸು ಸಿಗುತ್ತದೆ. ಆದರೆ ಅದಕ್ಕಾಗಿ ನೀವು ಕೆಲವು ಕ್ರಮಗಳನ್ನು ಕೈಗೊಳ್ಳಬೇಕು. ನಿಮ್ಮ ಗ್ರಾಹಕರು ಯಾರು ಎಂಬುದನ್ನು ಅರಿಯಬೇಕು. ಕಸ್ಟಮರ್ ಸೆಂಟ್ರಿಕ್ ಕಲ್ಚರ್ ಅನ್ನು ಬೆಳೆಸಬೇಕಿದ್ದರೆ ನಿಮ್ಮ ವ್ಯಾಪಾರದಲ್ಲಿ ನಿಮ್ಮ ಜತೆ ಇರುವ ಎಲ್ಲರನ್ನೂ ಒಳಗೊಳ್ಳಬೇಕು. ಸಂಸ್ಥೆಯ ಸಿಬ್ಬಂದಿಗೂ ಈ ಬಗ್ಗೆ ತರಬೇತಿ ಒದಗಿಸಬೇಕು. ಏಕೆಂದರೆ ಗ್ರಾಹಕರನ್ನು ದೇವರಂತೆ ಗೌರವಿಸುವ, ಆದರಿಸುವ ಮತ್ತು ಅವರ ಬೇಕು ಬೇಡಗಳನ್ನು ಪೂರೈಸುವ ಕಂಪನಿಗಳ ಮಾರುಕಟ್ಟೆಯನ್ನು ಅಂಥ ಗ್ರಾಹಕರೇ ಹೆಚ್ಚಿಸುತ್ತಾರೆ.
ಇದನ್ನೂ ಓದಿ: Mutual Fund : ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ನಿಮ್ಮ ಆಯ್ಕೆ ಬಗ್ಗೆ ಎಚ್ಚರದಿಂದಿರಿ
ನಿಮ್ಮ ಗ್ರಾಹಕರು ಏನು ಹೇಳುತ್ತಾರೆ ಎಂಬುದನ್ನು ಕಿವಿಗೊಟ್ಟು ಕೇಳಿ. ಅವರ ಜತೆಗೆ ಪರಿಣಾಮಕಾರಿ ಕಮ್ಯುನಿಕೇಶನ್ ಬೆಳೆಸಿ. ಅಪಿಯರೆನ್ಸ್ ಮತ್ತು ಬಿಹೇವಿಯರ್‌ನಲ್ಲಿ ವೃತ್ತಿಪರತೆ ಇರಲಿ. ಕೇವಲ ಕೇಳುವುದೊಂದೇ ಇದ್ದರೂ ಸಾಕಾಗುವುದಿಲ್ಲ. ನೀಡುವ ಭರವಸೆಗಳನ್ನು ಪೂರೈಸಬೇಕು. ಸರಿಯಾಗಿ ಸ್ಪಂದಿಸಬೇಕು. ಆಧುನಿಕ ಕಾಲದಲ್ಲಿ ಗ್ರಾಹಕರ ಸೇವೆಯನ್ನು ಉತ್ತಮವಾಗಿಸಲು ತಂತ್ರಜ್ಞಾನ ನೆರವಿಗೆ ಬರುತ್ತದೆ. ಅದನ್ನೂ ಬಳಸಿ.