Site icon Vistara News

Business Guide : ಸೇಲ್ಸ್‌ ಎಂದರೆ ದುಡ್ಡು ಮಾಡೋದಲ್ಲ, ಹಾಗಾದ್ರೆ ಏನು?

iPhone

ಸೇಲ್ಸ್‌ ಎಂದರೆ ದುಡ್ಡು ಮಾಡೋದಲ್ಲ, ಹಾಗಾದ್ರೆ ಏನು? ಹಣ ಎನ್ನುವುದು ಫಲಿತಾಂಶ. ಸೇಲ್ಸ್‌ ವೃತ್ತಿಯಲ್ಲಿ ಇರುವವರು ಮೌಲ್ಯವನ್ನು ಸೇರಿಸುತ್ತಾ ಹೋಗುತ್ತಾರೆ. ಮೌಲ್ಯವನ್ನು ಸೇರಿಸುತ್ತಾ ಹೋದಂತೆಲ್ಲ ( Business Guide ) ಗ್ರಾಹಕರು ಚೆಕ್‌ ಹಿಡಿದುಕೊಂಡು ಸರದಿಯಲ್ಲಿ ಬರುತ್ತಾರೆ. ಆದರೆ ಮೌಲ್ಯವನ್ನು ಸೇರಿಸಲು ನೀವು ಕಷ್ಟಪಡಬೇಕು, ತೀವ್ರ ಹೋರಾಟ ನಡೆಸಬೇಕಾಗುತ್ತದೆ. ಅನೇಕ ಬಗೆಯ ತ್ಯಾಗಗಳನ್ನು ಮಾಡಬೇಕಾಗುತ್ತದೆ. ಸೇಲ್ಸ್‌ ಸೇರಿದಂತೆ ಜೀವನದ ನಾನಾ ಮಗ್ಗುಲುಗಳಲ್ಲಿ ವಿಶಿಷ್ಟ ಹಾದಿಯನ್ನು ಸೃಷ್ಟಿಸುತ್ತಾ ಮುನ್ನಡೆಯಬೇಕಾಗುತ್ತದೆ.

ಹೀಗಾಗಿ ಕೇವಲ ಪ್ರಾಡಕ್ಟ್‌ ಅಥವಾ ಕೋರ್ಸ್‌ಗಳು ಮತ್ತು ಅವುಗಳ ಲಾಭವನ್ನು ಹೇಳುವುದಲ್ಲದೆ, ಅವುಗಳ ಮೂಲಕ ಕನಸುಗಳನ್ನು ಮತ್ತು ಗುರಿಗಳನ್ನು ಸಾಧಿಸುವುದು ಹೇಗೆ ಎಂಬುದನ್ನೂ ಗ್ರಾಹಕರಿಗೆ ಅರ್ಥ ಮಾಡಿಸಬೇಕಾಗುತ್ತದೆ. ಗ್ರಾಹಕರು ಯಾವೆಲ್ಲ ಸವಾಲುಗಳನ್ನು ಎದುರಿಸುತ್ತಿದ್ದಾರೆ ಹಾಗೂ ಅವುಗಳನ್ನು ಪರಿಹರಿಸುವುದು ಹೇಗೆ ಎಂಬುದನ್ನು ತಿಳಿ ಹೇಳಬೇಕಾಗುತ್ತದೆ. ಅದೂ ಪರಿಣಾಮಕಾರಿಯಾಗಿ. ಆಗ ನಿಮ್ಮನ್ನು ಸೇಲ್ಸ್‌ ಕೈ ಹಿಡಿಯುತ್ತದೆ.

ಸೇಲ್ಸ್‌ ಎನ್ನುವುದು ಒಂದು ಯಾತ್ರೆ ಇದ್ದಂತೆ. ಆದ್ದರಿಂದ ಹೆಚ್ಚು ನವೀನ ಉತ್ಪನ್ನ, ಸೇವೆಗಳ ಅಭಿವೃದ್ಧಿ, ಗ್ರಾಹಕರೊಂದಿಗೆ ನಿರಂತರ ಒಡನಾಟ ಮುಖ್ಯವಾಗುತ್ತದೆ. ಅದುವೇ ನಿಮ್ಮ ವ್ಯವಹಾರವನ್ನು ಜೀವಂತವಾಗಿಡುತ್ತದೆ. ನಿಮ್ಮನ್ನೂ ಸಕ್ರಿಯವಾಗಿಡುತ್ತದೆ.

ರಾಷ್ಟ್ರ ನಿರ್ಮಾಣದಲ್ಲೂ ಸೇಲ್ಸ್‌ ನಿರ್ಣಾಯಕ ಪಾತ್ರ ವಹಿಸುತ್ತದೆ. ಒಂದು ಸೇತುವೆ ನಿರ್ಮಾಣವಾಗಲಿ, ಕೈಗಾರಿಕಾ ಸಂಕೀರ್ಣ ರಚನೆಯಾಗಲಿ, ಕಾಲೇಜುಗಳ ಸರಣಿಯನ್ನು ವ್ಯವಸ್ಥೆಗೊಳಿಸುವುದಾಗಲಿ, ಯಾವುದಾದರೂ ಉತ್ಪನ್ನ, ಸೇವೆಯನ್ನು ನೀಡುವುದಾಗಲಿ ಸೇಲ್ಸ್‌ ಸಾಮಾನ್ಯವಾಗಿರುತ್ತದೆ. ಆದ್ದರಿಂದ ನೀವು ಸೇಲ್ಸ್‌ ವೃತ್ತಿಯಲ್ಲಿದ್ದರೆ, ಜೀವನೋಪಾಯ ಮಾತ್ರವಲ್ಲದೆ ರಾಷ್ಟ್ರ ನಿರ್ಮಾಣದಲ್ಲೂ ಕೈ ಜೋಡಿಸುತ್ತೀರಿ.

ಇದನ್ನೂ ಓದಿ: Money Guide : ಹಣದ ಬಗ್ಗೆ ಈಗ ಮಧ್ಯಮ ವರ್ಗದ ಜನ ಹೇಗೆ ಯೋಚಿಸಬೇಕು?

ಯಾವುದೇ ಕಾರ್ಪೊರೇಟ್‌ ಸಂಸ್ಥೆಯಲ್ಲಿ 10 % ಸೇಲ್ಸ್‌ ಉದ್ಯೋಗಿಗಖು ಉಳಿದ 90% ಮಂದಿ ಮಾಡುವ ಕೆಲಸಗಳನ್ನ ಸರಿದೂಗಿಸಬಲ್ಲರು. ಕಂಪನಿಗಳಲ್ಲಿ ವರ್ಷಾಂತ್ಯದ ಸಭೆಯ ಬಳಿಕ ಸೇಲ್ಸ್‌ ವಿಭಾಗದಲ್ಲಿ ಇರುವರಿಗೆ ದೇಶ-ವಿದೇಶಗಳ ಪ್ರವಾಸದ ಅವಕಾಶವನ್ನು ಕಂಪನಿಯ ಆಡಳಿತ ಮಂಡಳಿಯು ಮಾಡಿಕೊಡುವುದನ್ನು ಗಮನಿಸಬಹುದು. ಯಾವುದೇ ಸಂಸ್ಥೆ ಅಥವಾ ಸಂಘಟನೆಯಲ್ಲಿ ಮಾರುಕಟ್ಟೆ ವಿಭಾಗಕ್ಕೆ ಇರುವ ಪ್ರಾಮುಖ್ಯತೆಯನ್ನು ಇದು ಬಿಂಬಿಸುತ್ತದೆ. ಪ್ರತಿಯೊಂದು ಸಂಸ್ಥೆಯೂ ಆಂತರಿಕವಾಗಿ ಚೆನ್ನಾಗಿ ತಿಳಿದುಕೊಂಡಿರುವ ಸಂಗತಿ ಯಾವುದಪ್ಪಾ ಎಂದರೆ, ಸೇಲ್ಸ್‌ ತಂಡದಿಂದಲೇ ವಹಿವಾಟು ನಡೆಯುತ್ತದೆ ಎನ್ನುವುದು. ಹೀಗಾಗಿ ಪ್ರತಿಯೊಬ್ಬರೂ ಏನನ್ನಾದರೂ ಮಾರಾಟ ಮಾಡುತ್ತಿರಲೇಬೇಕು.

ಪ್ರತಿಯೊಬ್ಬ ಬಿಲಿಯನೇರ್‌ ಕೂಡ ಏನನ್ನಾದರೂ ಮಾರಾಟ ಮಾಡುತ್ತಿರುತ್ತಾನೆ. ಮಧ್ಯಮ ವರ್ಗದ ಜನರಿಗೆ ದುಡ್ಡಿನ ಅಗತ್ಯ ತುಂಬ ಇದ್ದರೂ, ಅವರು ಸೇಲ್ಸ್‌ ಬಗ್ಗೆ ಆಲೋಚಿಸುವುದು ಕಡಿಮೆ. ಆದರೆ ಸೇಲ್ಸ್‌ನಿಂದ ಹಲವು ಪ್ರಯೋಜನಗಳು ಇವೆ ಎಂಬುದನ್ನು ಅರಿತುಕೊಳ್ಳಬೇಕು. ಆದ್ದರಿಂದ ಈ ಕ್ಷಣದಿಂದಲೇ ಎಂಬಂತೆ ಸೇಲ್ಸ್‌ ಆರಂಭಿಸಿ. ಇದು ನಿಮಗೆ ಹಾಗೂ ನಿಮ್ಮನ್ನು ಅವಲಂಬಿಸಿದ ಕುಟುಂಬಕ್ಕೆ ಉತ್ತಮ ಭವಿಷ್ಯವನ್ನು ನೀಡುತ್ತದೆ.

ಸೇಲ್ಸ್‌ ಅನ್ನು ಶುರು ಮಾಡೋದು ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಆದ್ದರಿಂದ ಮೊದಲು ಮಾರಾಟದ ಕೌಶಲವನ್ನು ಕಲಿತುಕೊಳ್ಳಿ. ಮಧ್ಯಮ ವರ್ಗದ ಕುಟುಂಬಗಳು ಈಗ ಕಲಿಯಬೇಕಿರುವ ಪ್ರಮುಖ ಕೌಶಲವೇ ಮಾರಾಟದ ಸ್ಕಿಲ್‌. ಸೇಲ್ಸ್‌ ಸ್ಕಿಲ್.‌ ಸೇಲ್ಸ್‌ ಕೌಶಲವನ್ನು ಹೇಳಿಕೊಡುವ ಕ್ಲಾಸ್‌ಗಳಿಗೆ ಸೇರುವುದು, ನೀವು ಬಯಸುವ ಸೇಲ್ಸ್‌ನಲ್ಲಿರುವ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರುವುದರಿಂದಲೂ ತಿಳಿಯಬಹುದು. ಉದಾಹರಣೆಗೆ ನೀವು ಯಾವುದಾದರೂ ಹೋಟೆಲ್‌ನಲ್ಲಿ ಏಳೆಂಟು ವರ್ಷ ಕೆಲಸ ಮಾಡಿದರೆ ಹೋಟೆಲ್‌ ಬಿಸಿನೆಸ್‌ ಮಾಡುವ ಕೌಶಲ ನಿಮ್ಮದಾಗುತ್ತದೆ. ಬಳಿಕ ನಮ್ಮದೇ ಸ್ವಂತ ಹೋಟೆಲ್‌ ಶುರು ಮಾಡಬಹುದು. ಹೀಗೆ ಕೌಶಲವನ್ನು ಕರಗತ ಮಾಡಿಕೊಂಡರೆ ಅರ್ಧ ಯುದ್ಧ ಗೆದ್ದಂತೆಯೇ ಸರಿ.

Exit mobile version