Site icon Vistara News

Business Guide : ಸೇಲ್ಸ್‌ ಎಂದರೆ ಗ್ರಾಹಕರ ಜತೆ ಅತ್ಯುತ್ತಮ ಸಂಬಂಧದ ನಿರ್ಮಾಣ

ಸೇಲ್ಸ್‌ ಎಂದರೆ ಯಾವುದಾದರೂ ವಸ್ತುವನ್ನು ಮಾರುವುದು ಮಾತ್ರವಲ್ಲ, ಯಾವುದೋ ಸರ್ವೀಸ್‌ ಕೊಟ್ಟು ದುಡ್ಡು ಗಳಿಸುವುದು ಮಾತ್ರವಲ್ಲ. ಅದು ಭಾವನಾತ್ಮಕ ವಿನಿಮಯಕ್ಕಿಂತಲೂ ಮಿಗಿಲಾದದ್ದು. ಇದು ಗ್ರಾಹಕರ ಸಮಸ್ಯೆಗಳಿಗೆ, ಅಗತ್ಯಗಳಿಗೆ ಸ್ಪಂದಿಸುವಂಥದ್ದು, ಇದರಿಂದಾಗಿ ಅವರಿಗೆ ಮಾಹಿತಿ ಪೂರ್ಣ ಖರೀದಿಯ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಯಾರಾದರೂ ಕಾಯಿಲೆ ಬಿದ್ದಿದ್ದಾರೆ ಎಂದು ಇಟ್ಟುಕೊಳ್ಳೋಣ. ಅವರು ಔಷಧಿ ಖರೀದಿಸುತ್ತಾರೆ. ಯಾರಾದರೂ ವಿದ್ಯಾರ್ಥಿ ಪರೀಕ್ಷೆ ಎದುರಿಸುತ್ತಿದ್ದರೆ, ಪುಸ್ತಕಗಳನ್ನು ಖರೀದಿಸುತ್ತಾರೆ. ಯಾವುದಾದರೂ ಕೋಚಿಂಗ್‌ ಸೆಂಟರ್‌ಗೆ ಹೋಗುತ್ತಾರೆ. ಹೀಗಾಗಿ ಸೇಲ್ಸ್‌ ಮಾಡುವವರು ಗ್ರಾಹಕರನ್ನು ಖರೀದಿಸುವ ನಿರ್ಧಾರ ತೆಗೆದುಕೊಳ್ಳುವಂತೆ ಮನವೊಲಿಸಬೇಕು. ಅದಕ್ಕೆ ತಕ್ಕಂತಹ ಕಮ್ಯುನಿಕೇಶನ್‌ ಮಾಡಬೇಕು.

ಬಿಸಿನೆಸ್‌ ಮಾಡುವವರು ಜನರೊಂದಿಗೆ ಆತ್ಮೀಯವಾಗಿ ಮಾತನಾಡಬೇಕು. ಅವರ ಕಷ್ಟ-ಸುಖಗಳನ್ನು ವಿಚಾರಿಸಬೇಕು. ಪ್ರೀತಿ, ಆರೈಕೆ, ಕಾಳಜಿ, ಇತರರನ್ನು ಅರ್ಥ ಮಾಡಿಕೊಳ್ಳುವಿಕೆ, ಅಗತ್ಯ ಇದ್ದಾಗ ಅವರಿಗೆ ಸಲಹೆಗಳನ್ನು ನೀಡುವುದು ಮುಖ್ಯ. ಸೇಲ್ಸ್‌ ಎಂದರೆ ನಿಮಗೆ ಬೇಕಾದ್ದನ್ನು ಗ್ರಾಹಕರಿಗೆ ಕೊಡುವುದಲ್ಲ, ಗ್ರಾಹಕರಿಗೆ ಬೇಕಾದ್ದನ್ನು ಕೊಡುವಂಥದ್ದು. ವ್ಯಾಪಾರದಲ್ಲಿ ಸಂವಹನ ಅತಿ ಮುಖ್ಯ. Sale is nothing but communication ಎನ್ನುತ್ತಾರೆ ಬಿಸಿನೆಸ್‌ ಸಲಹೆಗಾರ ಭೂಪೇಂದ್ರ ಸಿಂಗ್‌ ರಾಥೋರ್.‌ ನೀವು ಗ್ರಾಹಕರ ಅಗತ್ಯಗಳನ್ನು ಕೇಳಬೇಕು, ಅರ್ಥ ಮಾಡಿಕೊಳ್ಳಬೇಕು ಮತ್ತು ಬಾಂಧವ್ಯ ವೃದ್ಧಿಸಬೇಕು. ಆಗ ಆಟೊಮ್ಯಾಟಿಕ್‌ ಆಗಿ ಸೇಲ್ಸ್‌ ವೃದ್ಧಿಸುತ್ತದೆ.

ಸೇಲ್ಸ್‌ ವೃತ್ತಿಯಲ್ಲಿ ಇರುವವರು ದಿನ ನಿತ್ಯ ಹಲವಾರು ಜನರನ್ನು ಭೇಟಿಯಾಗುತ್ತಾರೆ. ಅವರು ನೆಟ್‌ ವರ್ಕ್‌ ಅನ್ನು ಅಭಿವೃದ್ಧಿಪಡಿಸುತ್ತಾರೆ. ಇದು ಮಹತ್ವದ್ದು. ನಿಮ್ಮನ್ನು ಬಲ್ಲವರ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಹೊಸ ಹೊಸ ಜನರು ನಿಮ್ಮ ನೆಟ್‌ ವರ್ಕ್‌ ವ್ಯಾಪ್ತಿಯೊಳಗೆ ಬರುತ್ತಾರೆ. ಸಂಬಂಧಗಳು ಹಾಗೆ ವೃದ್ಧಿಸುತ್ತದೆ. ಸೇಲ್ಸ್‌ನಲ್ಲಿ ಇರುವಾಗ ಜಗತ್ತನ್ನು ಹೆಚ್ಚು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ಬಂಧು ಬಳಗದವರು, ಸ್ನೇಹಿತರು, ಸಹೋದ್ಯೋಗಿಗಳ ನಡುವಣ ಸಂಬಂಧ ಸುಧಾರಣೆಯ ಮಹತ್ವ ಮತ್ತು ಅಗತ್ಯ ನಿಮಗೆ ಅರ್ಥವಾಗುತ್ತದೆ. ಇದು ನಿಮ್ಮನ್ನು ಬುದ್ಧಿವಂತರನ್ನಾಗಿಸುತ್ತದೆ.

ಸೇಲ್ಸ್‌ ಎನ್ನುವುದು ಕೇವಲ ಒಂದು ಕಲೆಯಲ್ಲ, ಕೌಶಲ ಮಾತ್ರವಲ್ಲ, ವಿಜ್ಞಾನವೂ ಹೌದು ಎಂದರೆ ನಿಮಗೆ ಅಚ್ಚರಿಯಾಗಬಹುದು. ಏಕೆಂದರೆ ಇದರಲ್ಲಿ ಹಲವು ಪ್ರಕ್ರಿಯೆಗಳು ಇವೆ. ಸೇಲ್ಸ್‌ ಎಂದರೆ ಹುಚ್ಚಾಟಿಕೆಯಲ್ಲ, ಅದಕ್ಕೂ ಅದರದ್ದೇ ಆದ ಸೂತ್ರಗಳೂ ಇವೆ. ಅದು ನಿಮಗೆ ವ್ಯಾಪಾರದಲ್ಲಿ ವಿಜ್ಞಾನವೂ ಅಡಕವಾಗಿದೆ ಎಂಬುದರ ಮೇಲೆ ನಂಬಿಕೆ ಇಡುವಂತೆ ಮಾಡುತ್ತದೆ. ಗ್ರೇಟ್‌ ಸೇಲ್ಸ್‌ ಪರ್ಸನ್ಸ್‌ ಯಾವಾಗಲೂ ಶಿಸ್ತುಬದ್ಧರಾಗಿರುತ್ತಾರೆ. ಪ್ರತಿ ದಿನ ಒಂದು ಪ್ರಕ್ರಿಯೆಯನ್ನು ಅನುಸರಿಸುತ್ತಾರೆ.

ಇದನ್ನೂ ಓದಿ: Moxy Hotels: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮಾಕ್ಸಿ ಹೋಟೆಲ್ ಆರಂಭ!

ಸೇಲ್ಸ್‌ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ಜನರ ನೋವುಗಳು, ದುಮ್ಮಾನಗಳು, ಸಂಕಟಗಳನ್ನು ಅರ್ಥ ಮಾಡಿಕೊಳ್ಳಬಲ್ಲವರಾಗಿರಬೇಕು. ಅವರ ಅಗತ್ಯಗಳನ್ನು ಅರಿತುಕೊಂಡು, ಅವುಗಳನ್ನು ಬಗೆಹರಿಸಲು ತಮ್ಮ ಉತ್ಪನ್ನ ಮತ್ತು ಸೇವೆಗಳನ್ನು ಮುಂದಿಡಬೇಕು. ಗ್ರಾಹಕರ ಅಗತ್ಯಗಳನ್ನು ತಮ್ಮ ಪ್ರಾಡಕ್ಟ್‌ ನಿಜಕ್ಕೂ ಹೇಗೆ ಪರಿಹರಿಸುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ದೀರ್ಘಕಾಲ ರಿಲೇಶನ್‌ ಶಿಪ್‌ ಉಳಿಸಿಕೊಳ್ಳುವುದು ಎಂದರೆ ಅದು ಕಲೆ-ವಿಜ್ಞಾನಗಳ ಸಮ್ಮಿಲನವೂ ಆಗಿರುತ್ತದೆ. ಸೆಲ್ಲಿಂಗ್‌ ಎನ್ನೋದು ಪ್ರತಿಯೊಂದು ಸಂಸ್ಥೆಯ ಬೆಳವಣಿಗೆಗೂ ಬೆನ್ನೆಲೆಬು ಇದ್ದಂತೆ. ಐಟಿ ಕಂಪನಿಯೊಂದಕ್ಕೆ ಕಾರ್ಖಾನೆ ಅಥವಾ ವೇರ್‌ ಹೌಸ್‌ ಬೇಕಾಗದು. ಆದರೆ ಸೇಲ್ಸ್‌ ಪ್ರೊಫೆಷನಲ್ಸ್‌ ಬೇಕೇಬೇಕು. ಇವತ್ತು ಸ್ಪರ್ಧೆ ಇಲ್ಲದ ಮಾರುಕಟ್ಟೆ ಇಲ್ಲ. ಹೀಗಾಗಿ ಸೇಲ್ಸ್‌ ತಜ್ಞರ ಅವಶ್ಯಕತೆ ಇರುತ್ತದೆ.

Exit mobile version