ನಿಜಕ್ಕೂ ಸೇಲ್ಸ್ ಎಂದರೇನು? ಉದಾಹರಣೆಗೆ ನಿಮ್ಮ ಮನೆಗೆ ಯಾರಾದರೂ ವಿಮೆ ಕಂಪನಿಯ ಏಜೆಂಟ್, ನೆಟ್ ವರ್ಕ್ ಮಾರ್ಕೆಟಿಂಗ್ ಪ್ರತಿನಿಧಿ, ರಿಯಲ್ ಎಸ್ಟೇಟ್ ಬ್ರೋಕರ್ ಬರುತ್ತಿದ್ದಾರೆ ( Business Guide ) ಎಂದು ಭಾವಿಸಿ. ನಿಮ್ಮ ನಿರೀಕ್ಷೆ ಏನಿರುತ್ತದೆ?
-ಅವನು ನನಗೆ ಮೋಸ ಮಾಡಿಯಾನು, ತುಂಬಾ ಚೆನ್ನಾಗಿ ಅವರ ಪ್ರಾಡಕ್ಟನ್ನು ಹೊಗಳಿ, ಕೊನೆಗೆ ಮಾರಾಟ ಮಾಡಿ ಯಾಮಾರಿಸಬಹುದು, ನನ್ನ ಸಮಯವನ್ನು ವ್ಯರ್ಥಗೊಳಿಸಬಹುದು, ಬೋರಿಂಗ್ ಸೇಲ್ಸ್ ಪ್ರಸೆಂಟೇಶನ್ ಮಾಡಬಹುದು, ಮಾತಿನಲ್ಲಿ ಮರುಳುಗೊಳಿಸಬಹುದು..ಹೀಗೆಲ್ಲಾ ಆಲೋಚನೆಗಳು ಬರಬಹುದಲ್ಲವೇ. ಇದು ವಾಸ್ತವ. ಅನೇಕ ಮಂದಿ ಸೇಲ್ಸ್ ಅಂದ್ರೆ ಹೀಗೆಯೇ ಇರುತ್ತದೆ ಎಂದು ಭಾವಿಸಿ, ಹೇರಳ ಆದಾಯಕ್ಕೆ ದಾರಿ ಮಾಡಿಕೊಡುವುದಿದ್ದರೂ, ಆ ಕ್ಷೇತ್ರಕ್ಕೆ ಬರಲು ಹಿಂದೇಟು ಹಾಕುವುದೂ ಇದೆ.
ಆದ್ದರಿಂದ ಮೊದಲನೆಯದಾಗಿ ನೀವು ಸೇಲ್ಸ್ ಬಿಸಿನೆಸ್‌ಗೆ ಪದಾರ್ಪಣೆ ಮಾಡಲು ಬಯಸುವುದಿದ್ದರೆ, ಅದರ ಬಗ್ಗೆ ಇರುವ ನೆಗೆಟಿವ್ ಭಾವನೆಗಳನ್ನು ಬಿಡಿ. ಹಾಗಾದರೆ ನಿಜಕ್ಕೂ ಸೇಲ್ಸ್ ಎಂದರೇನು?
ನಿಜವಾಗಿಯೂ ಸೇಲ್ಸ್ ಎಂದರೆ ಇತರರಿಗೆ ಸಹಾಯ ಮಾಡುವುದು. ಯಾವುದಾದರೂ ಒಂದು ವಸ್ತುವನ್ನು ಅಥವಾ ಸೇವೆಯನ್ನು ಮಾರಾಟ ಮಾಡಿ ಅವರ ಬದುಕನ್ನು, ಸಮಯವನ್ನು ಹಾಳು ಮಾಡುವುದಂತೂ ಅಲ್ಲವೇ ಅಲ್ಲ. ಸೇಲ್ಸ್ ಅಂದರೆ ಜನರಿಂದ ತಿರಸ್ಕಾರಕ್ಕೆ ಗುರಿಯಾಗುವ ವೃತ್ತಿ ಅಲ್ಲ. ಬಿಸಿನೆಸ್ ಸಲಹೆಗಾರ ಭೂಪೇಂದ್ರ ಸಿಂಗ್ ರಾಥೋರ್ ಒಂದು ಮಾತನ್ನು ಹೇಳುತ್ತಾರೆ- 2007ರಲ್ಲಿ ಯಾರೋ ಒಬ್ಬರು ಬಿಸಿನೆಸ್ ಟ್ರೈನಿಂಗ್ ಕೋರ್ಸ್ ಅನ್ನು ಮಾರಾಟ ಮಾಡಿದರು. ಆಗ ಅದಕ್ಕೆ 7,000 ರೂ. ಖರ್ಚಾಗಿತ್ತು. ಹತ್ತು ವರ್ಷಗಳಲ್ಲಿ 75 ಕೋಟಿ ರೂ. ಗಳಿಸಲು ಅದರಿಂದ ಸಾಧ್ಯವಾಯಿತು. ಅದಕ್ಕೂ ಮೊದಲು ಹತ್ತು ವರ್ಷಗಳಲ್ಲಿ ನನಗೆ ಗಳಿಸಲು ಸಾಧ್ಯವಾಗಿದ್ದು ಕೇವಲ 25 ಲಕ್ಷ ರೂ. ಮಾತ್ರ. ಇದು ಮ್ಯಾಜಿಕ್ ಅಲ್ಲ. ಆದರೆ ನಿಜ. ಹಾಗಾದರೆ ಆತ ನನಗೆ ಮೋಸ ಮಾಡಿದ್ದಾನೆಯೇ, ಇಲ್ಲ, ಅನೂಹ್ಯವಾಗಿ ಸಹಾಯ ಮಾಡಿದ. ಹಾಗಂತ ಎಲ್ಲರೂ ಭೂಪೇಂದ್ರ ಸಿಂಗ್ ರಾಥೋರ್ ಆಗಲು ಸಾಧ್ಯವಿಲ್ಲ. ಅದು ಬೇರೆ ಪ್ರಶ್ನೆ.
ಒಬ್ಬ ವ್ಯಕ್ತಿ ವಾಚು ಮಾರಾಟ ಮಾಡುತ್ತಿದ್ದಾನೆ ಎಂದು ಭಾವಿಸಿ. ಆತನ ವಾಚು ಖರೀದಿಸುವ ವ್ಯಕ್ತಿ ಸಮಯದ ಹಿಂದೆ ಬೀಳುತ್ತಾನೆ. ಸಮಯದ ಬಗ್ಗೆ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಕಾಲ ಹರಣ ಮಾಡದೆ ಬದುಕಿನಲ್ಲಿ ಏಳಿಗೆ ಕಾಣಬಹುದು. ಒಬ್ಬಾತ ದಿನ ಪತ್ರಿಕೆ ಮಾರಾಟ ಮಾಡುತ್ತಿದ್ದಾನೆ ಎಂದು ಇಟ್ಟುಕೊಳ್ಳಿ. ಅದನ್ನು ಖರೀದಿಸಿ ಓದುವವರು ಜಗತ್ತಿನ ಆಗು ಹೋಗುಗಳ ಬಗ್ಗೆ ಇತರರಿಗಿಂತ ಹೆಚ್ಚು ತಿಳುವಳಿಕೆ ಹೊಂದಬಹುದು. ಹಾಗೆ ಓದಿದ್ದನ್ನು ಬದುಕಿನಲ್ಲೂ ಅಳವಡಿಸಿ ಸುಧಾರಣೆಯ ಹಾದಿಯಲ್ಲಿ ಮುನ್ನಡೆಯಬಹುದು. ಏರ್ ಕಂಡೀಶನರ್ ಮಾರುವ ವ್ಯಕ್ತಿ, ತನ್ನ ಗ್ರಾಹಕರಿಗೆ ಕೂಲಾಗಿದ್ದು ಬಿಡಲು ಸಹಕರಿಸುತ್ತಾನೆ. ಇದು ಕೆಲ ಉದಾಹರಣೆಗಳು ಮಾತ್ರ.
ಇದನ್ನೂ ಓದಿ: Money Guide : ಹಣದ ಬಗ್ಗೆ ಈಗ ಮಧ್ಯಮ ವರ್ಗದ ಜನ ಹೇಗೆ ಯೋಚಿಸಬೇಕು?
ಸೇಲ್ಸ್ ಪ್ರಕ್ರಿಯೆ ನಿಮ್ಮ ವ್ಯಕ್ತಿತ್ವವನ್ನೇ ಪರಿವರ್ತಿಸುತ್ತದೆ. ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಉತ್ಪನ್ನ ಮತ್ತು ಸೇವೆಗಳ ಬಗ್ಗೆ ಖಚಿತತೆಯನ್ನು ನೀವು ಹೊಂದಿರಬೇಕು. ಆಗ ಮಾತ್ರ ಅದನ್ನು ಗ್ರಾಹಕರಿಗೆ ವರ್ಗಾಯಿಸಲು ಸಾಧ್ಯ. ನೀವು ಗ್ರಾಹಕರಿಗೆ ಸಹಾಯ ಮಾಡಲು ಸಮರ್ಥರಿದ್ದೀರಿ ಎಂಬ ಸಕಾರಾತ್ಮಕ ಮನೋಭಾವ ಇದ್ದಾಗ ಗ್ರಾಹಕರಲ್ಲೂ ನಿಮ್ಮ ಬಗ್ಗೆ ವಿಶ್ವಾಸ ಮೂಡುತ್ತದೆ. ವ್ಯಾಪಾರ ಹೆಚ್ಚುತ್ತದೆ.