Site icon Vistara News

Business Guide : ಸೇಲ್ಸ್‌ನಲ್ಲಿ ಮಾತು ಅಂದ್ರೆ ಅತ್ಯುತ್ತಮ ಬಂಡವಾಳ

business plan

ದೇಶದ ಪ್ರಧಾನ ಮಂತ್ರಿಗಳನ್ನು ಗಮನಿಸಿ, ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಅವರ ಮನೋಜ್ಞ, ಪರಿಣಾಮಕಾರಿ ಭಾಷಣಗಳು ( Business Guide) ಜನರನ್ನು ಪ್ರಭಾವಿತಗೊಳಿಸುವುದನ್ನು ಕಾಣಬಹುದು. ಪ್ರಧಾನಿಗಳ ಭಾಷಣವನ್ನು ಆಲಿಸಲೆಂದೇ ಅಸಂಖ್ಯಾತ ಮಂದಿ ಸೇರುತ್ತಾರೆ. ಅದು ಅವರ ಹಲವಾರು ಕೌಶಲಗಳಲ್ಲಿ ಒಂದಾಗಿದೆ. ಇವತ್ತು ಎಲ್ಲ ಕ್ಷೇತ್ರಗಳಲ್ಲಿಯೂ ಪಬ್ಲಿಕ್‌ ಸ್ಪೀಕಿಂಗ್‌ ಎನ್ನುವುದು ಮಹತ್ವ ಗಳಿಸಿದೆ. ನೀವು ಸೇಲ್ಸ್‌ನಲ್ಲಿ ಇರಲೇಬೇಕೆಂದಿಲ್ಲ, ಕಾರ್ಪೊರೇಟ್‌ ಕಂಪನಿಯ ಮ್ಯಾನೇಜರ್‌ ಆಗಿದ್ದರೂ, ಪಬ್ಲಿಕ್‌ ಸ್ಪೀಕಿಂಗ್‌ ಕೌಶಲ ಅಗತ್ಯವಾಗುತ್ತದೆ. ಕಂಪನಿಯ ಮೀಟಿಂಗ್‌ನಲ್ಲಿ, ಕಂಪನಿಯನ್ನು ಪ್ರತಿನಿಧಿಸಿ ಮತ್ತೊಂದು ಕಡೆ ನೀಡುವ ಉಪನ್ಯಾಸವೇ ಇರಬಹುದು, ಸಂಭವನೀಯ ಗ್ರಾಹಕರೊಡನೆ ನಡೆಸುವ ಮೀಟಿಂಗ್‌ ಇರಬಹುದು, ಪಬ್ಲಿಕ್‌ ಸ್ಪೀಕಿಂಗ್‌ ಕೌಶಲ ಮುಖ್ಯವಾಗುತ್ತದೆ.

ನೀವು ಸೇಲ್ಸ್‌ ಕ್ಷೇತ್ರದಲ್ಲಿ ಯಶಸ್ಸು ಗಳಿಸಬೇಕಿದ್ದರೆ ಪಬ್ಲಿಕ್‌ ಸ್ಪೀಕಿಂಗ್‌ ಸ್ಕಿಲ್‌ ಅನಿವಾರ್ಯ. ನೀವು ಉತ್ತಮ ಸೇಲ್ಸ್‌ ಪರ್ಸನ್‌ ಆಗಿರದಿದ್ದರೆ, ನಿಮಗೆ ಪಬ್ಲಿಕ್‌ ಸ್ಪೀಕಿಂಗ್‌ ಸ್ಕಿಲ್‌ ಚೆನ್ನಾಗಿ ಇರದಿದ್ದರೆ, ವೈಯಕ್ತಿಕವಾಗಿ ಭೇಟಿ ಮಾಡಿ ಮಾತನಾಡಬಹುದು. ಆದರೆ ಇದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಪಬ್ಲಿಕ್‌ ಸ್ಪೀಕಿಂಗ್‌ನಲ್ಲಿ ಒಂದೇ ಸಲ ಸಾವಿರಾರು ಮಂದಿಯನ್ನು ಪ್ರಭಾವಿತಗೊಳಿಸಬಹುದು. ಅಷ್ಟೇಕೆ, ಲಕ್ಷಾಂತರ ಮಂದಿಯನ್ನೂ ತಲುಪಬಹುದು. ಸತತ ಅಭ್ಯಾಸದ ಮೂಲಕ ಉತ್ತಮ ವಾಗ್ಮಿಯಾಗಲು ಸಾಧ್ಯವಿದೆ.

ಕಂಪನಿಗಳಲ್ಲಿ ಸೇಲ್ಸ್‌ ಪಿಚ್‌ ಮಾಡಲು ಉತ್ತಮ ಪಬ್ಲಿಕ್‌ ಸ್ಪೀಕಿಂಗ್‌ ಕೌಶಲ ಬೇಕು. ನಿಮ್ಮ ಪ್ರಾಡಕ್ಟ್‌ ಅಥವಾ ಸೇವೆಯನ್ನು ಮತ್ತೊಬ್ಬರಿಗೆ ಸಮರ್ಥವಾಗಿ ತಿಳಿಸಲು ಮಾತಿನ ಕೌಶಲ ನಿರ್ಣಾಯಕ. ನಿಮ್ಮನ್ನು ನೀವು ಬ್ರಾಂಡ್‌ ಮಾಡಲು ಕೂಡ ಮಾತುಗಾರಿಕೆಯ ಕಲೆ ಮುಖ್ಯ. ಇದು ನಿಮಗೆ ಸಂಭವನೀಯ ಗ್ರಾಹಕರ ಜತೆಗೆ ಬೇಗ ಸಂವಹನ ನಡೆಸಲು ಹಾದಿ ಸುಗಮಗೊಳಿಸುತ್ತದೆ.

ಸೇಲ್ಸ್‌ನಲ್ಲಿ ಮಾಡುವ ಕೆಲ ತಪ್ಪುಗಳನ್ನು ತಿಳಿಯೋಣ. ಸೇಲ್ಸ್‌ನಲ್ಲಿ ನಿಮ್ಮ ಉತ್ಪನ್ನ ಅಥವಾ ಸೇವೆಗಳ ಕುರಿತು ಅತ್ಯಲ್ಪ ಮಾಹಿತಿ ನೀಡುವುದು ಸೂಕ್ತವಲ್ಲ. ಆದರೆ ಅತಿಯಾಗುವುದೂ ತರವಲ್ಲ. ನೀವು ಅತಿ ಕಡಿಮೆ ಮಾಹಿತಿ ನೀಡಿದರೆ, ನಿಮ್ಮ ಗ್ರಾಹಕನಿಗೆ ಆತನಿಗೆ ಬೇಕಾಗಿರುವುದು ಸಿಗುತ್ತದೆಯೇ ಎಂಬುದು ತಿಳಿಯದೇ ಹೋಗಬಹುದು. ನೀವು ನಿಮ್ಮ ಉತ್ಪನ್ನದ ಬಗ್ಗೆ ಅತಿಯಾದ ವಿವರಣೆ ಕೊಟ್ಟರೆ, ಗ್ರಾಹಕರಿಗೆ ಬೋರ್‌ ಹೊಡೆಸಬಹುದು. ಖರೀದಿಸುವ ಆಸಕ್ತಿಯೇ ಹೊರಟು ಹೋಗಬಹುದು. ಎರಡನೆಯದಾಗಿ ನಿಮ್ಮ ಪ್ರಾಡಕ್ಟ್‌ನ ವಿಶೇಷತೆಯನ್ನು, ಫೀಚರ್‌ಗಳನ್ನು ನಿಮ್ಮ ಇಷ್ಟಾನುಸಾರ ಅಥವಾ ಆದ್ಯತೆಯನ್ವಯ ಹೇಳಬಾರದು. ಪ್ರತಿಯೊಬ್ಬ ಗ್ರಾಹಕನಿಗೂ ಆತನದ್ದೇ ಆದ್ಯತೆ ಇರುತ್ತದೆ. ಅದಕ್ಕೆ ಅನುಸಾರ ಮಾಹಿತಿಯನ್ನು ನಿರೀಕ್ಷಿಸುತ್ತಾನೆ. ನಿಮ್ಮ ಉತ್ಪನ್ನದ ವಿಶೇಷ ಗುಣಲಕ್ಷಣಗಳನ್ನು ಗ್ರಾಹಕರಿಗೆ ತಿಳಿಸಲು ಮರೆಯದಿರಿ.

ಸಂದರ್ಭಾನುಸಾರ ಮಾತನಾಡಲು ಮತ್ತು ಸೇಲ್ಸ್‌ ಅವಕಾಶವನ್ನು ಹುಡುಕುವುದು ಕೂಡ ಮುಖ್ಯವಾಗುತ್ತದೆ. ನಿಮ್ಮನ್ನು ನೀವೇ ಹುರಿದುಂಬಿಸುವುದು, ಪ್ರೇರೇಪಣೆ ನೀಡುವುದು ಕೂಡ ಅವಶ್ಯಕ. ನಿಮ್ಮ ಹಳೆಯ ಅಭ್ಯಾಸಗಳೇ ನಿಮಗೆ ತೊಡಕಾಗುತ್ತಿದ್ದರೆ ಅವುಗಳನ್ನು ಕೈಬಿಟ್ಟು ಹೊಸ ಅವತಾರಕ್ಕೆ ಸಜ್ಜಾಗಿ. ಹಳೆಯದನ್ನು ಕಳಚಿಕೊಳ್ಳಲು ಹಿಂದೇಟು ಹಾಕದಿರಿ.

Exit mobile version