ಮಾರುಕಟ್ಟೆಯಲ್ಲಿ ವ್ಯಾಪಾರದ ವಿಷಯಕ್ಕೆ ಬಂದರೆ, ಒಂದು ವಿಷಯ ಸದಾ ಚಿಂತೆಗೀಡು ಮಾಡುತ್ತದೆ. ಕೆಲವರ ಹತ್ತಿರ ಅತ್ಯುತ್ತಮ ಉತ್ಪನ್ನ ಇರುತ್ತದೆ. ಅದ್ಭುತ ಸೇವೆಯನ್ನೂ ಒದಗಿಸುತ್ತಾರೆ.( Business success secrets ) ಆದರೂ ಅವರು ತನ್ನ ಪ್ರಾಡಕ್ಟ್ ಮಾರಾಟ ಮಾಡುವಲ್ಲಿ ವಿಫಲರಾಗುತ್ತಾರೆ. ಅಥವಾ ಪರದಾಡುತ್ತಿರುತ್ತಾರೆ. ಮತ್ತೊಬ್ಬರು ತಮ್ಮ ಉತ್ಪನ್ನ ಅಷ್ಟು ಚೆನ್ನಾಗಿರದಿದ್ದರೂ, ಹಾಟ್ ಕೇಕ್‌ನಂತೆ ಮಾರಾಟ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಅರೆ, ಇದು ಹೇಗೆ ಸಾಧ್ಯವಾಗುತ್ತದೆ ಎಂದು ನೀವು ತಲೆ ಕೆರೆದುಕೊಂಡು ಆಲೋಚಿಸಬಹುದು. ಇದರ ಹಿಂದಿನ ಸೀಕ್ರೇಟ್ ಏನೆಂದರೆ-ಅವರು ತಮ್ಮನ್ನು ಅದ್ಭುತವಾಗಿ ಮಾರಾಟ ಮಾಡುವ ಕಲೆಯನ್ನು ತಿಳಿದಿರುತ್ತಾರೆ!
ನೀವು ಬಹಳ ಸೊಗಸಾದ ಪ್ರಾಡಕ್ಟ್ ಅಭಿವೃದ್ಧಿಪಡಿಸಿರಬಹುದು, ಅದನ್ನು ಸ್ಪರ್ಧಾತ್ಮಕ ದರದಲ್ಲೂ ಬಿಡುಗಡೆಗೊಳಿಸಿರಬಹುದು. ಆದರೆ ನಿಮ್ಮನ್ನು ನೀವೇ ಮಾರಾಟ ಮಾಡುವ ಕಲೆ ಗೊತ್ತಿರದಿದ್ದರೆ ಅಂಥ ಬಿಸಿನೆಸ್ ನಿಮ್ಮ ಕೈ ಹಿಡಿಯುವುದಿಲ್ಲ. ಹಾಗಂತ ಇಷ್ಟೇ ಹೇಳಿದರೆ ಸಾಕಾಗುವುದಿಲ್ಲ, ವಿವರಣೆ ಅಗತ್ಯ.
ನೋಡಿ, ನೀವು ಮೊದಲನೆಯದಾಗಿ ನಿಜಕ್ಕೂ ಜನರಿಗೆ ಉಪಯೋಗವಾಗುವ ಉತ್ಪನ್ನವನ್ನು ಮಾರಾಟ ಮಾಡಬೇಕು. ಅದು ನಿಮ್ಮ ಆತ್ಮ ವಿಶ್ವಾಸವನ್ನೂ ಹೆಚ್ಚಿಸಬೇಕು. ನೀವು ನಿಮ್ಮ ಪ್ರಾಡಕ್ಟ್‌ಗೆ ಇಷ್ಟು ದರ ಇದೆ ಎಂದು ಹೇಳಿಕೊಳ್ಳಲು ನಾಚಿಕೊಳ್ಳಬೇಕಿಲ್ಲ. ಆದರೆ ಅದು ಗ್ರಾಹಕರಿಗೆ ತಕ್ಕ ಮೌಲ್ಯವನ್ನು ನಿಜಕ್ಕೂ ನೀಡುವಂತೆ ಶ್ರೇಷ್ಠವಾಗಿರಬೇಕು.
ನೀವು ಒಂದು ಅದ್ಭುತ ವಸ್ತುವನ್ನು ಮಾರಾಟ ಮಾಡುತ್ತಿದ್ದೀರಿ ಎಂಬುದು ನಿಮಗೆ ಸ್ಪಷ್ಟವಾದ ಬಳಿಕ ನಮ್ಮಲ್ಲೊಂದು ಆತ್ಮ ವಿಶ್ವಾಸ ವೃದ್ಧಿಸುತ್ತದೆ. ಅದು ನಿಮ್ಮ ವ್ಯಾಪಾರವನ್ನೂ ನೂರ್ಮಡಿಸಬಲ್ಲುದು. ಲೇಖಕ ಮತ್ತು ಚಿಂತಕ ಸಿಮನ್ ಸಿನೆಕ್ ಟೆಡ್ ಟಾಕ್‌ನಲ್ಲಿ ಹೀಗೆನ್ನುತ್ತಾರೆ- ನೀವು ಮಾಡುವುದನ್ನು ಜನ ಖರೀದಿಸುವುದಿಲ್ಲ, ನೀವು ಯಾವುದಕ್ಕಾಗಿ ಮಾಡುತ್ತೀರಿ ಎಂಬುದನ್ನು ಆಧರಿಸಿ ಖರೀದಿಸುತ್ತಾರೆ. ನೀವು ನಿಮ್ಮ ಉತ್ಪನ್ನ ಅಥವಾ ಸೇವೆಯನ್ನು ಆರು ವರ್ಷದ ಮಗುವಿಗೂ ಅರ್ಥವಾಗುವ ಹಾಗೆ ವಿವರಿಸದಿದ್ದರೆ, ನಿಮಗೂ ಅದು ಅರ್ಥವಾಗಿಲ್ಲ ಎಂದರ್ಥ ಎನ್ನುತ್ತಾರೆ ಅಲ್ಬರ್ಟ್ ಐನ್‌ಸ್ಟೀನ್.
ಇದನ್ನೂ ಓದಿ: Money Guide: ಹೋಮ್‌ಲೋನ್ ಪಡೆಯುವ ಮುನ್ನ ಈ ಅಂಶಗಳನ್ನು ಗಮನಿಸಿ
ಎಲ್ಲ ಬಿಸಿನೆಸ್‌ಗಳೂ ಜನರ ಜತೆಗೆ ಬೆರೆಯುವುದರಲ್ಲಿದೆ. ಗ್ರಾಹಕರ ವಿಶ್ವಾಸವನ್ನು ಹೇಗೆ ಗಳಿಸುತ್ತೀರಿ ಎಂಬುದರ ಮೇಲಿದೆ. ಒಂದು ಸಲ ವಿಶ್ವಾಸ ಗಳಿಸಿದರೆ ನಿಮ್ಮ ಉತ್ಪನ್ನ ಯಶಸ್ವಿಯಾಗಿ ಮಾರಾಟವಾಗುತ್ತದೆ. ಸಣ್ಣ ಬಿಸಿನೆಸ್‌ನಲ್ಲಿ ಮಾಲೀಕರು ಮತ್ತು ಬಿಸಿನೆಸ್ ನಡುವೆ ವ್ಯತ್ಯಾಸವೇ ಇರುವುದಿಲ್ಲ. ನೀವು ನಿಮ್ಮ ಬಿಸಿನೆಸ್ ಅನ್ನು ಮಾರ್ಕೆಟ್ ಮಾಡುವಾಗ, ವಾಸ್ತವವಾಗಿ ನಿಮ್ಮನ್ನು ನೀವೇ ಮಾರ್ಕೆಟಿಂಗ್ ಮಾಡುತ್ತಿರುತ್ತೀರಿ. ಆದರೆ ಪ್ರತಿಯೊಬ್ಬರಿಗೂ ಅದು ಸಾಧ್ಯವಾಗುವುದಿಲ್ಲ. ಹೀಗಾಗಿ ನಿಮ್ಮ ಬಿಸಿನೆಸ್ ಮತ್ತು ನಿಮ್ಮನ್ನು ನೀವೇ ಮಾರುವ ಕಲೆಯನ್ನು ತಿಳಿದುಕೊಳ್ಳಿ ಎನ್ನುತ್ತಾರೆ ತಜ್ಞರು.
ಹಾಗಾದರೆ ನಿಮ್ಮನ್ನು ನೀವು ಮಾರುವಾಗ ಗೊತ್ತಿರಬೇಕಿರುವ ಕೌಶಲಗಳು ಯಾವುದು? ಆತ್ಮ ವಿಶ್ವಾಸ ಇರಲಿ. ವೃತ್ತಿಪರವಾಗಿ ಕಾನ್ಫಿಡೆನ್ಸ್ ಅನ್ನೋದು ಅತ್ಯಾಕರ್ಷಕವಾಗಿರುತ್ತದೆ. ಗ್ರಾಹಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಿ. ಅವರಿಗೆ ಇ-ಮೇಲ್ ಕಳಿಸಿ, ಮೆಸೇಜ್ ರವಾನಿಸಿ, ದೂರವಾಣಿ ಕರೆ ಮಾಡಿ. ಕಾರ್ಯಕ್ರಮಗಳನ್ನು ಆಯೋಜಿಸಿ..ಇದೆಲ್ಲವೂ ನಿಮ್ಮನ್ನು ನೀವು ಮಾರ್ಕೆಟಿಂಗ್ ಮಾಡಲು ಸಹಕಾರಿ.
ಸಾಮಾಜಿಕವಾಗಿ ನಿಮಗೆ ಹೆಚ್ಚು ಬೆರೆಯಲು ಆಗುವುದಿಲ್ಲ, ಪರಿಸ್ಥಿತಿಗೆ ಅಷ್ಟಾಗಿ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದಿದ್ದರೂ, ಅನನ್ಯವಾಗಿರಲು ಒಂದು ದಾರಿ ಕಂಡುಕೊಳ್ಳಿ. ನೀವು ಅಂತರ್ಮುಖಿಯಾಗಿರುವುದಕ್ಕೆ ಹೆಮ್ಮೆಪಡಿರಿ. ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅದು ನಿಮಗೆ ಎದ್ದು ನಿಲ್ಲಲು ಲೈಸೆನ್ಸ್ ನಿರಾಕರಿಸಬಾರದು. ನಿಂತುಕೊಳ್ಳಲು ಆಗದಿದ್ದವರು ತಮ್ಮನ್ನು ತಾವು ಮಾರಿಕೊಳ್ಳಲಾರರು. ಏಕೆಂದರೆ ಅವರು ಎಂದಿಗೂ ಗಮನಕ್ಕೆ ಬರುವುದಿಲ್ಲ.
ನಿಮ್ಮ ಗ್ರಾಹಕರು ತಮ್ಮ ತೊಂದರೆಗಳು ಏನು ಎಂಬುದನ್ನು ಗುರುತಿಸಬಲ್ಲರು. ಅವರಿಗೆ ಯಾರಾದರೂ ಒಳಹೊಕ್ಕು, ವಿವರಗಳನ್ನು ತಿಳಿದು ನಿಖರವಾಗಿ ಪರಿಹಾರ ಸೂಚಿಸುವವರು ಬೇಕು. ಅಂಥ ಪರಿಹಾರ ಸೂಚಿಸಿ. ನೀವು ನಿಮ್ಮನ್ನು ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಹರಿಕಾರ ಎಂದು ಬಿಂಬಿಸಿದರೆ ಜನ ಸೀರಿಯಸ್ ಆಗಿ ಕೇಳಲಾರರು. ಬದಲಿಗೆ ಅವರ ಸಮಸ್ಯೆಗಳನ್ನು ಹೇಗೆ ಪರಿಹರಿಸಬಲ್ಲಿರಿ ಎಂಬುದನ್ನು ತಿಳಿಸಿ.
ನೀವು ಏನು, ನಿಮ್ಮ ವ್ಯಕ್ತಿತ್ವ ಏನು ಎಂಬುದನ್ನು ನೀವು ಮಾತನಾಡಿ ತಿಳಿಸಬೇಕಿಲ್ಲ, ನೀವು ಮಾತನಾಡದೆಯೂ ಇತರರ ಜತೆಗೆ ಸಂವಹನ ನಡೆಸುತ್ತಿರುತ್ತೀರಿ. ನೇರವಾಗಿ ಕುಳಿತುಕೊಳ್ಳಿ, ಅನವಶ್ಯಕವಾಗಿ ಹುಬ್ಬು ಹಾರಿಸದಿರಿ, ತೋಳೇರಿಸದಿರಿ. ಇದೆಲ್ಲವೂ ನಿಮ್ಮನ್ನು ಮಾರುವಾಗ ಗಮನಾರ್ಹ ಅಂಶವಾಗುತ್ತದೆ. ಜನರೆಲ್ಲರೂ ಒಂದಿಲ್ಲೊಂದು ತೊಂದರೆ ಬಗ್ಗೆ ಹೇಳಿಕೊಳ್ಳುತ್ತಾರೆ. ಆದರೆ ಸಕಾರಾತ್ಮಕ ವ್ಯಕ್ತಿಗಳನ್ನು ಬಯಸುತ್ತಾರೆ. ಆದ್ದರಿಂದ ಅಂಥ ಸಕಾರಾತ್ಮಕ ವ್ಯಕ್ತಿ ನೀವಾಗಿರಿ. ನೀವು ಸಂದೇಶ ರವಾನಿಸುವುದು ಒಂದು ಅಂಶವಷ್ಟೇ, ಆದರೆ ನಿಮ್ಮನ್ನು ನೀವೇ ಮಾರಿಕೊಳ್ಳುವುದು ಎಂದರೆ ಕೇವಲ ಸರಿಯಾದ ಪದಗಳನ್ನು ಆಡುವುದಲ್ಲ. ನೀವು ಆತ್ಮ ವಿಶ್ವಾಸಿಯಾಗಿರಬೇಕು. ಸಮಸ್ಯೆಗಳನ್ನು ಪರಿಹರಿಸುವ ರೂವಾರಿಯಾಗಬೇಕು. ಸಕಾರಾತ್ಮಕ ವ್ಯಕ್ತಿಯಾಗಿರಬೇಕು.