ನವ ದೆಹಲಿ: ಭಾರತದಲ್ಲಿಯೇ ಆ್ಯಪಲ್‌ನ ಏರ್‌ಪೋಡ್ ಇಯರ್‌ಫೋನ್ ಉತ್ಪಾದನೆಗೆ ತೈವಾನ್ ಮೂಲದ ಗುತ್ತಿಗೆದಾರ ಕಂಪನಿಯಾದ ಫಾಕ್ಸ್‌ಕಾನ್ ಸಜ್ಜಾಗಿದೆ. (AirPod) ಹಾಗೂ 1640 ಕೋಟಿ ರೂ. ಹೂಡಿಕೆ (200 ದಶಲಕ್ಷ ಡಾಲರ್) ಮಾಡಿ ಉತ್ಪಾದನಾ ಘಟಕವನ್ನು ನಿರ್ಮಿಸಲಿದೆ. ಫಾಕ್ಸ್‌ಕಾನ್ ವಿಶ್ವದ ಅತಿ ದೊಡ್ಡ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಕ ಕಂಪನಿಯಾಗಿದ್ದು, 70%ರಷ್ಟು ಐಫೋನ್‌ಗಳನ್ನು (iPhone) ಉತ್ಪಾದಿಸುತ್ತಿದೆ. ಮೊಟ್ಟ ಮೊದಲ ಬಾರಿಗೆ ಫಾಕ್ಸ್‌ಕಾನ್ ತನ್ನ ವೈವಿಧ್ಯಮಯ ಉತ್ಪನ್ನಗಳ ಉತ್ಪಾದನೆಯನ್ನು ಚೀನಾ ಬದಲು ಭಾರತಕ್ಕೆ ವರ್ಗಾಯಿಸುತ್ತಿದೆ.
ಭಾರತದಲ್ಲೇ ಉತ್ಪಾದಿಸಲು ಆ್ಯಪಲ್ ಸೂಚನೆ?
ಮೂಲಗಳ ಪ್ರಕಾರ ಫಾಕ್ಸ್ ಕಾನ್ ತೆಲಂಗಾಣದಲ್ಲಿ 200 ದಶಲಕ್ಷ ಡಾಲರ್ ( ಅಂದಾಜು 1,640 ಕೋಟಿ ರೂ.) ಮೌಲ್ಯದ ಹೂಡಿಕೆಯನ್ನು ಮಾಡಲಿದೆ. ಫಾಕ್ಸ್‌ಕಾನ್‌ಗೆ ಎಷ್ಟು ಮೊತ್ತದ ಆರ್ಡರ್ ಲಭಿಸಿದೆ ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ. ಏರ್‌ಪೋಡ್ ಉತ್ಪಾದನೆಯಲ್ಲಿ ಲಾಭಾಂಶ ಕಡಿಮೆಯಾಗಿರುವುದರಿಂದ ಉತ್ಪಾದನೆಯನ್ನು ಮಾಡಬೇಕೇ ಅಥವಾ ಜೋಡಣೆಗೆ ಮಾತ್ರ ಸೀಮಿತವಾಗಿರಬೇಕೇ ಎಂಬ ಚರ್ಚೆಯನ್ನು ಫಾಕ್ಸ್‌ಕಾನ್ ಆಂತರಿಕವಾಗಿ ನಡೆಸಿತ್ತು. ಬಳಿಕ ಆ್ಯಪಲ್ ಜತೆಗಿನ ವ್ಯವಹಾರಿಕ ಬಾಂಧವ್ಯ ವೃದ್ಧಿ ದೃಷ್ಟಿಯಿಂದ ಒಪ್ಪಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಭಾರತದಲ್ಲೇ ಉತ್ಪಾದಿಸಲು ಆ್ಯಪಲ್ ಸೂಚಿಸಿತ್ತು.