ನವ ದೆಹಲಿ: ಕೇಂದ್ರ ಸರ್ಕಾರ ನಾನಾ ವಿಶೇಷ ಡಿಟಿಎಚ್ ಸೇವೆ ಪೂರೈಕೆದಾರ ಕಂಪನಿಗಳ ( DTH ) ಲೆಕ್ಕಪತ್ರಗಳ ಬಗ್ಗೆ ವಿಶೇಷ ಆಡಿಟ್ ನಡೆಸಲಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಸಿಎಜಿಗೆ ( ಪ್ರಧಾನ ಲೆಕ್ಕ ಪರಿಶೋಧಕರು) ಈ ಸಂಬಂಧ ಪತ್ರ ಬರೆದಿದ್ದು, ಎಲ್ಲ ಡಿಟಿಎಚ್ ಸೇವಾ ಪೂರೈಕೆದಾರ ಕಂಪನಿಗಳ ಆಡಿಟ್ ನಡೆಸುವಂತೆ ತಿಳಿಸಿದೆ.
ಹೀಗಾಗಿ ಡಿಟಿಎಚ್ ಕಂಪನಿಗಳು ತಮ್ಮ ಆದಾಯ ಲೆಕ್ಕಾಚಾರದಲ್ಲಿ ಲೋಪ ದೋಷಗಳನ್ನು ಹೊಂದಿವೆಯೇ ಎಂಬ ಅನುಮಾನ ಉಂಟಾಗಿದೆ.
ಡಿಟಿಎಚ್ ಕಂಪನಿಗಳು ತಮ್ಮ ಆದಾಯದ ಬಗಗೆ ಸರಿಯಾದ ಲೆಕ್ಕಪತ್ರ ಇಟ್ಟುಕೊಂಡಿವೆಯೇ ಎಂಬುದರ ಬಗ್ಗೆ ಸಿಎಜಿ ಮೂಲಕ ತನಿಖೆ ನಡೆಸಲು ಸರ್ಕಾರ ಉದ್ದೇಶಿಸಿದೆ. ಇದರಿಂದ ಲೈಸೆನ್ಸ್ ಶುಲ್ಕವನ್ನು ಸಮರ್ಪಕವಾಗಿ ವಿಧಿಸಲಿ ಸರ್ಕಾರಕ್ಕೆ ಅನುಕೂಲವಾಗಲಿದೆ. ಏಕೆಂದರೆ ಡಿಟಿಎಚ್ ಕಂಪನಿಗಳು ತಮ್ಮ ವಾರ್ಷಿಕ ಆದಾಯದಲ್ಲಿ 8% ಅನ್ನು ಲೈಸೆನ್ಸ್ ಶುಲ್ಕವಾಗಿ ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ.
ಈಗ ಏರ್‌ಟೆಲ್ ಡಿಜಿಟಲ್ ಟಿವಿ, ಟಾಟಾ ಪ್ಲೇ, ಡಿಶ್ ಟಿವಿ, ಸನ್ ಡೈರೆಕ್ಟ್ ಆದಾಯ ಲೆಕ್ಕಾಚಾರ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂದು ಸರ್ಕಾರ ಶಂಕಿಸಿದೆ. ಡಿಟಿಎಚ್ ಕಂಪನಿಗಳು ಕಳೆದ ಮೇನಲ್ಲಿ ಲೈಸೆನ್ಸ್ ಶುಲ್ಕ ಮನ್ನಾವನ್ನು ನಿರೀಕ್ಷಿಸಿದ್ದವು. ಕಳೆದ ಕೆಲ ವರ್ಷಗಳಲ್ಲಿ ಗ್ರಾಹಕರ ಸಂಖ್ಯೆ ಇಳಿಕೆ ಆಗಿರುವ ಕಾರಣವನ್ನು ಕಂಪನಿಗಳು ಮುಂದಿಟ್ಟಿದ್ದವು.
ಡಿಟಿಎಚ್ ಲೈಸೆನ್ಸ್ ಶುಲ್ಕದ ಬಾಬ್ತು ಸರ್ಕಾರದ ಬೊಕ್ಕಸಕ್ಕೆ 2022-23ರಲ್ಲಿ 1000 ಕೋಟಿ ರೂ.ಗೂ ಹೆಚ್ಚು ಆದಾಯ ಸಂಗ್ರಹವಾಗುವ ನಿರೀಕ್ಷೆ ಇದೆ.