ಚಂಡೀಗಢ: ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಉತ್ತೇಜನದಿಂದ ಸಾವಿರಾರು ಎಕರೆಗಳಲ್ಲಿ ಕ್ಯಾಪ್ಸಿಕಂ (ದೊಣ್ಣೆ ಮೆಣಸಿನಕಾಯಿ) ಬೆಳೆದಿದ್ದ ರೈತರಿಗೆ ಆಘಾತ ಉಂಟಾಗಿದೆ. ಮಾರುಕಟ್ಟೆಯಲ್ಲಿ ರೈತರಿಗೆ ಸಿಗುವ (Capsicum price crash) ದರ ಪ್ರತಿ ಕೆ.ಜಿಗೆ ಕೇವಲ 1 ರೂ.ಗೆ ಕುಸಿದಿದೆ. ಇದರ ಪರಿಣಾಮ ಆಕ್ರೋಶಗೊಂಡಿರುವ ರೈತರು ಬೆಳೆಯನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ರೈತರು ತಾವು ಬೆಳೆದಿರುವ ಕ್ಯಾಪ್ಸಿಕಂಗೆ ಬೆಲೆ ನೆಲಕಚ್ಚಿರುವುದನ್ನು ಕಂಡು ಹತಾಶೆಯಿಂದ ಬೀದಿಗಿಳಿದಿದ್ದಾರೆ.
ಪಂಜಾಬ್ ಸಿಎಂ ಮನವಿ ಮೇರೆಗೆ ನಾವು ಜಮೀನಿನ ಒಂದು ಭಾಗದಲ್ಲಿ ಕ್ಯಾಪ್ಸಿಕಂ ಬೆಳೆದಿದ್ದೆವು. ಆದರೆ ಈಗ ಅದಕ್ಕೆ ಸಿಗುತ್ತಿರುವ 1 ರೂ. ದರ ಕೇಳಿ ಆಘಾತವಾಗಿದೆ ಎಂದು ರೈತರು ಹೇಳಿದ್ದಾರೆ.
ಕಾರಣವೇನು?
ರಾಜ್ಯದ ತೋಟಗಾರಿಕಾ ಇಲಾಖೆಯ ಪ್ರಕಾರ ಪಂಜಾಬ್‌ನ ಮಾನ್ಸಾ, ಫಿರೋಜ್‌ಪುರ, ಸಂಗ್ರೂರ್ ಜಿಲ್ಲೆಯಲ್ಲಿ 1,500 ಹೆಕ್ಟೇರ್ ಪ್ರದೇಶಗಳಲ್ಲಿ ಕ್ಯಾಪ್ಸಿಕಂ ಬೆಳೆಯಲಾಗಿತ್ತು. ಆದರೆ ಹವಾಮಾನ ಬದಲಾವಣೆಯೇ ದರ ಕುಸಿತಕ್ಕೆ ಪ್ರಮುಖ ಕಾರಣ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ. ಈ ವರ್ಷ ಚಳಿಗಾಲ ವಿಸ್ತರಣೆಯಾಗಿದ್ದರಿಂದ ಹಲವು ರಾಜ್ಯಗಳಲ್ಲಿ ವ್ಯಾಪಕವಾಗಿ ಕ್ಯಾಪ್ಸಿಕಂ ಬೆಳೆಯಲಾಗಿದೆ. ಇದರಿಂದ ದರ ಕುಸಿದಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.
ಮಾರುಕಟ್ಟೆಗೆ ಸಾಮಾನ್ಯವಾಗಿ ಜನವರಿ-ಫೆಬ್ರವರಿ ವೇಳೆಯಲ್ಲಿ ಮಹಾರಾಷ್ಟ್ರ-ಮಧ್ಯಪ್ರದೇಶದಿಂದ ಕ್ಯಾಪ್ಸಿಕಂ ಬರುತ್ತದೆ. ಬಳಿಕ ಮಾರ್ಚ್ ಅಂತ್ಯ ಅಥವಾ ಏಪ್ರಿಲ್‌ನಿಂದ ಪಂಜಾಬ್‌ನಿಂದ ಸಿಗುತ್ತದೆ. ಆದರೆ ಈ ಸಲ ಏಕಕಾಲಕ್ಕೆ ಎಲ್ಲ ರಾಜ್ಯಗಳಿಂದ ಮಾರುಕಟ್ಟೆಗೆ ಕ್ಯಾಪ್ಸಿಕಂ ಬಂದಿದೆ. ಆದ್ದರಿಂದ ಬೆಳೆಯನ್ನು ಶೀಥಲೀಕರಣ ಘಟಕಗಳಲ್ಲಿ ದಾಸ್ತಾನಿಡುವಂತೆ ಮತ್ತು ದರ ಬಂದಾಗ ಮಾರುವಂತೆ ಅಧಿಕಾರಿಗಳು ರೈತರಿಗೆ ಮನವಿ ಮಾಡಿದ್ದಾರೆ. ತಮ್ಮ ಬೆಳೆಯನ್ನು ಕೋಲ್ಕೊತಾ ಮತ್ತಿತರ ಕಡೆಗೆ ಸಾಗಿಸಿ ಮಾರಾಟ ಮಾಡುವಂತೆ ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮೆಣಸಿನ ಕಾಯಿ ದರ ಕುಸಿತ ಸಂಭವ:
ಪಂಜಾಬ್‌ನಲ್ಲಿ ಹಸಿ ಮೆಣಸಿನಕಾಯಿ ದರ ಕೂಡ ಪ್ರತಿ ಕೆ.ಜಿಗೆ 9 ರೂ.ಗೆ ಕುಸಿದಿದ್ದು, ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಸಾಮಾನ್ಯವಾಗಿ ಅಮೃತಸರ ಮಾರುಕಟ್ಟೆಯಲ್ಲಿ ಕೆಜಿಗೆ 20-25 ರೂ. ಇರುತ್ತಿತ್ತು. ಈ ನಡುವೆ ರಿಟೇಲ್ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಕ್ಯಾಪ್ಸಿಕಂ ದರ 20-30 ರೂ. ಶ್ರೇಣಿಯಲ್ಲಿದೆ. ಏಪ್ರಿಲ್ ಮೊದಲ ವಾರದಲ್ಲಿ 70-80 ರೂ. ಇತ್ತು.
ಕೃಷಿ ಕಾಯಿದೆ ವಿರೋಧಿಸಿದ್ದರ ಪರಿಣಾಮ?
ಪಂಜಾಬ್ ನೂತನ ಕೃಷಿ ಕಾಯಿದೆಯನ್ನು ಪ್ರಬಲವಾಗಿ ವಿರೋಧಿಸಿತ್ತು. ಕೃಷಿ ಕಾಯಿದೆಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿತ್ತು. ಒಂದು ವೇಳೆ ವಿರೋಧಿಸದಿರುತ್ತಿದ್ದರೆ, ಕ್ಯಾಪ್ಸಿಕಂ ಅನ್ನು ದೇಶದ ನಾನಾ ರಾಜ್ಯಗಳಿಗೆ ಮುಕ್ತವಾಗಿ ಸಾಗಿಸಿ ಮಾರಾಟ ಮಾಡಲು ಸಾಧ್ಯವಾಗುತ್ತಿತ್ತು. ಹಾಗೂ ದರ ಕುಸಿತ ಆಗುತ್ತಿರಲಿಲ್ಲ ಎಂದು ಜಾಲತಾಣಗಳಲ್ಲಿ ನೆಟ್ಟಿಗರು ಹೇಳಿದ್ದಾರೆ.