ನವ ದೆಹಲಿ: ಟಾಟಾ ಗ್ರೂಪ್ ತೆಕ್ಕೆಯಲ್ಲಿರುವ ಏರ್ ಇಂಡಿಯಾ ವಿರುದ್ಧ ಕಳೆದ ಮೂರು ತಿಂಗಳಲ್ಲಿ ಪ್ರಯಾಣಿಕರಿಂದ ೧,೦೦೦ ದೂರುಗಳನ್ನು ಕೇಂದ್ರ ಸರ್ಕಾರ ಸ್ವೀಕರಿಸಿದೆ. ವಿಮಾನಯಾನ ವಲಯದ ಸಮಕಾಲೀನ ಬಿಕ್ಕಟ್ಟನ್ನು ಇದು ಬಿಂಬಿಸಿದೆ.
ಟಿಕೆಟ್ ದರದ ರಿಫಂಡ್, ವಿಮಾನಗಳ ಓವರ್ ಬುಕಿಂಗ್, ಸಿಬ್ಬಂದಿಯ ಸೇವೆಯಲ್ಲಿ ಲೋಪಗಳಿಗೆ ಸಂಬಂಧಿಸಿ ದೂರುಗಳು ದಾಖಲಾಗಿವೆ ಎಂದು ನಾಗರಿಕ ವಿಮಾನಯಾನ ಖಾತೆ ಸಹಾಯಕ ಸಚಿವ ವಿಕೆ ಸಿಂಗ್ ತಿಳಿಸಿದ್ದಾರೆ. ಟಾಟಾ ಗ್ರೂಪ್ ಕಳೆದ ಜನವರಿ ೨೭ರಂದು ಏರ್ ಇಂಡಿಯಾವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಏರ್ ಇಂಡಿಯಾ ಹರಾಜಿನ ಬಿಡ್ ಅನ್ನು ಗೆದ್ದಿತ್ತು.
೧೪ ಲಕ್ಷ ರೂ. ದಂಡ: ನಾಗರಿಕ ವಿಮಾನಯಾನ ಸಚಿವಾಲಯವು ವಾಯುಯಾನಕ್ಕೆ ಸಂಬಂಧಿಸಿದ ಅಹವಾಲುಗಳನ್ನು ಸ್ವೀಕರಿಸುತ್ತದೆ. ಏರ್ ಟಿಕೆಟ್ ಹೊಂದಿದ್ದರೂ, ಪ್ರಯಾಣಕರಿಗೆ ವಿಮಾನಕ್ಕೆ ಪ್ರವೇಶ ನಿರಾಕರಿಸಿದ್ದಕ್ಕಾಗಿ ಹಾಗೂ ಬಳಿಕ ಪರಿಹಾರವನ್ನೂ ನೀಡದ್ದಕ್ಕೆ ಏರ್ ಇಂಡಿಯಾಗೆ ೧೪ ಲಕ್ಷ ರೂ.ಗಳ ದಂಡವನ್ನು ಡಿಜಿಸಿಎ ಕಳೆದ ಜೂನ್ ೧೪ರಂದು ವಿಧಿಸಿತ್ತು.
ಏರ್‌ಲೈನ್‌ಗಳು ಟಿಕೆಟ್ ಇದ್ದರೂ ಪ್ರಯಾಣಿಕರಿಗೆ ಪ್ರವೇಶ ನಿರಾಕರಿಸುವ ಅಕ್ರಮಗಳು ನಡೆಯುತ್ತಿವೆ. ಸಕಾಲಕ್ಕೆ ಪ್ರಯಾಣಿಕರು ಏರ್‌ಪೋರ್ಟ್‌ಗೆ ತಲುಪಿದ್ದರೂ ಇಂಥ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಈ ರೀತಿ ಪ್ರವೇಶ ನಿರಾಕರಿಸಿದರೆ ಅಂಥ ಪ್ರಯಾಣಿಕರಿಗೆ ಏರ್‌ಲೈನ್ ಪರಿಹಾರ ಮತ್ತು ಸಹಕಾರ ನೀಡಬೇಕು ಎಂದು ಡಿಸಿಸಿಎ ತಿಳಿಸಿದೆ.
ನವೀಕರಣಕ್ಕೆ ಯತ್ನ: ಏರ್ ಇಂಡಿಯಾದ ನವೀಕರಣಕ್ಕೆ ಟಾಟಾ ಗ್ರೂಪ್ ಯತ್ನಿಸುತ್ತಿದೆ. ಇದರ ಭಾಗವಾಗಿ ಏರ್‌ಬಸ್ ಎ೩೫೦ ವಿಮಾನದ ಮುಖ್ಯ ಪೈಲಟ್ ಆಗಿ ಸಂದೀಪ್ ಗುಪ್ತ ಅವರನ್ನು ನೇಮಿಸಿದೆ. ಬೋಯಿಂಗ್ ಮತ್ತು ಏರ್‌ಬಸ್‌ನಿಂದ ಹೊಸ ವಿಮಾನಗಳನ್ನು ಖರೀದಿಸುವ ನಿರೀಕ್ಷೆ ಇದೆ.