ಬೆಂಗಳೂರು: ಬೆಂಗಳೂರು ಮೂಲದ ಏರೋಸ್ಪೇಸ್ ಮತ್ತು ರಕ್ಷಣಾ ವಲಯದ ಸಾರ್ವಜನಿಕ ಕಂಪನಿಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಿಂದ (Hindustan Aeronautics ltd) ಕೇಂದ್ರ ಸರ್ಕಾರ 3.5% ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಕಂಪನಿಯಲ್ಲಿ ಸರ್ಕಾರ 75.15% ಷೇರು ಪಾಲನ್ನು ಹೊಂದಿದೆ. ಪ್ರತಿ ಷೇರಿಗೆ 2,450 ರೂ.ಗಳಂತೆ ಮಾರಾಟ ನಿರೀಕ್ಷಿಸಲಾಗಿದೆ. ಅಂದರೆ ಬುಧವಾರದ ಮಾರುಕಟ್ಟೆ ದರ ಹೋಲಿಸಿದರೆ 6.7% ಡಿಸ್ಕೌಂಟ್ ದರದಲ್ಲಿ ಸಿಗಲಿದೆ.
ಈ ಷೇರು ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ 2,867 ಕೋಟಿ ರೂ. ದೊರೆಯುವ ನಿರೀಕ್ಷೆ ಇದೆ. ಈಗ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ 87,800 ಕೋಟಿ ರೂ. ಆಗಿದೆ. ಎಚ್‌ಎಎಲ್ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. 1940 ರಲ್ಲಿ ಕಂಪನಿಯನ್ನು ಸ್ಥಾಪಿಸಲಾಗಿತ್ತು. ಆಗ ಕಂಪನಿಗೆ ಹಿಂದೂಸ್ತಾನ್ ಏರ್ ಕ್ರಾಫ್ಟ್ ಎಂಬ ಹೆಸರಿತ್ತು. 2022ರಲ್ಲಿ ಕಂಪನಿಯು 24620 ಕೋಟಿ ರೂ. ಆದಾಯ ಗಳಿಸಿತ್ತು.
ಕೇಂದ್ರ ಸರ್ಕಾರ 2020ರಲ್ಲಿ ಎಚ್‌ಎಎಲ್‌ನಿಂದ 15% ಷೇರನ್ನು ಮಾರಾಟ ಮಾಡಿತ್ತು. ಇದರಿಂದ 5,000 ಕೋಟಿ ರೂ. ಸಂಗ್ರಹಿಸಿತ್ತು. ಹೂಡಿಕೆದಾರರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿತ್ತು. ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಸರ್ಕಾರ ಸಾರ್ವಜನಿಕ ಕಂಪನಿಗಳಿಂದ ಬಂಡವಾಳ ಹಿಂತೆಗೆತದ ಮೂಲಕ 31,100 ಕೋಟಿ ರೂ. ಸಂಗ್ರಹಿಸಿದೆ.