ಹೊಸದಿಲ್ಲಿ: ಎರಡು ಸುತ್ತುಗಳಲ್ಲಿ ನಡೆದಿರುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಕಡಿತದ ಪರಿಣಾಮ ಕೇಂದ್ರ ಸರಕಾರದ ಬೊಕ್ಕಸಕ್ಕೆ ವಾರ್ಷಿಕ 2.2 ಲಕ್ಷ ಕೋಟಿ ರೂ. ತೆರಿಗೆ ನಷ್ಟವಾಗಲಿದೆ. ಹಾಗೂ ಈ ನಷ್ಟವನ್ನು ಕೇಂದ್ರ ಸರಕಾರವೇ ಸಂಪೂರ್ಣವಾಗಿ ಭರಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ತಿಳಿಸಿದ್ದಾರೆ.
ಕೇಂದ್ರ ಸರಕಾರ ಕಳೆದ ಶನಿವಾರ (ಮೇ.21) ಪೆಟ್ರೋಲ್ ಮೇಲೆ ಲೀಟರ್‌ಗೆ 8 ರೂ. ಹಾಗೂ ಡೀಸೆಲ್ ಮೇಲೆ 6 ರೂ. ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಈ ಹಿಂದೆ 2021ರ ನವೆಂಬರ್‌ನಲ್ಲಿ ಕೇಂದ್ರ ಸರಕಾರ ಪೆಟ್ರೋಲ್ ಮೇಲೆ ಲೀಟರ್‌ಗೆ 5 ರೂ. ಹಾಗೂ ಡೀಸೆಲ್ ಮೇಲೆ 10 ರೂ. ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು.
ಈ ತೆರಿಗೆ ಕಡಿತದಿಂದ ರಾಜ್ಯಗಳಿಗೆ ಕೇಂದ್ರದಿಂದ ನೀಡುವ ತೆರಿಗೆ ಹಂಚಿಕೆಯ ಪಾಲಿನಲ್ಲಿ ವ್ಯತ್ಯಾಸವಾಗುವುದಿಲ್ಲ. ನಷ್ಟವನ್ನು ಕೇಂದ್ರ ಸರಕಾರವೇ ಭರಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.
ಪ್ರತಿಪಕ್ಷಗಳ ಆರೋಪ ನಿರಾಕರಿಸಿದ ವಿತ್ತ ಸಚಿವೆ
ಅಬಕಾರಿ ಸುಂಕ ಕಡಿತದ ಪರಿಣಾಮ ರಾಜ್ಯಗಳಿಗೆ ಕೇಂದ್ರ ಸರಕಾರದಿಂದ ಲಭಿಸುವ ತೆರಿಗೆ ಆದಾಯದಲ್ಲಿ ನಷ್ಟವಾಗಲಿದೆ ಎಂಬ ಪ್ರತಿಪಕ್ಷಗಳ ಆರೋಪಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.
” ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರಸ್ತೆ ಮತ್ತು ಮೂಲ ಸೌಕರ್ಯ ಸೆಸ್ ಮೂಲಕ ಸಂಗ್ರಹಿಸುವ ಆದಾಯದಲ್ಲಿ ಕಡಿತ ಮಾಡಲಾಗಿದೆ. ಇದು ರಾಜ್ಯಗಳ ಜತೆಗೆ ಹಂಚಿಕೊಳ್ಳುವ ಸೆಸ್ ಅಲ್ಲ. ಆದ್ದರಿಂದ ಕೇಂದ್ರ ಸರಕಾರವು ಪೆಟ್ರೋಲ್ ಮೇಲೆ ಲೀಟರ್‌ಗೆ 8 ರೂ. ಹಾಗೂ ಡೀಸೆಲ್ ಮೇಲೆ ಲೀಟರ್‌ಗೆ 6 ರೂ. ಅಬಕಾರಿ ಸುಂಕ ಕಡಿತಗೊಳಿಸಿರುವುದರಿಂದ ರಾಜ್ಯ ಸರಕಾರಗಳಿಗೆ ತೆರಿಗೆ ಆದಾಯ ನಷ್ಟವಾಗುವುದಿಲ್ಲʼʼ ಎಂದು ನಿರ್ಮಲಾ ಸೀತಾರಾಮನ್ ವಿವರಿಸಿದರು.
ಕೇಂದ್ರ ಸರಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಬಳಿಕ ವ್ಯಾಟ್ ಇಳಿಸಲು ರಾಜ್ಯ ಸರಕಾರಗಳ ಮೇಲೆ ಒತ್ತಡ ಸೃಷ್ಟಿಯಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯ ಸರಕಾರಗಳು ವ್ಯಾಟ್ ಇಳಿಸಲು ಪರಿಶೀಲಿಸುತ್ತಿದ್ದರೆ, ಇತರ ರಾಜ್ಯ ಸರಕಾರಗಳು ಆಕ್ಷೇಪಿಸಿವೆ. ಡಿಎಂಕೆ ನೇತೃತ್ವದ ತಮಿಳುನಾಡು ಸರಕಾರ, ರಾಜ್ಯಗಳಿಂದ ತೆರಿಗೆ ಕಡಿತ ನಿರೀಕ್ಷಿಸುವುದು ಸರಿಯಲ್ಲ ಎಂದು ಪ್ರತಿಪಾದಿಸಿದೆ. 2021ರ ನವೆಂಬರ್‌ನಲ್ಲಿ ಕೇಂದ್ರ ಸರಕಾರ ತೆರಿಗೆ ಕಡಿತ ಮಾಡಿರುವುದರಿಂದ ರಾಜ್ಯ ಸರಕಾರಕ್ಕೆ 1 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ತಮಿಳುನಾಡಿನ ವಿತ್ತ ಸಚಿವ ಪಲನಿವೇಲ್ ತ್ಯಾಗರಾಜನ್ ಹೇಳಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಕೇಂದ್ರ ಅಬಕಾರಿ ಸುಂಕ ಕಡಿತಗೊಳಿಸಿದಾಗ ವ್ಯಾಟ್ ಇಳಿಸಲು ನಿರಾಕರಿಸಿದ್ದ ಮಹಾರಾಷ್ಟ್ರ, ಕೇರಳ, ರಾಜಸ್ತಾನ ಸರಕಾರಗಳು ಈಗ ಅಲ್ಪ ಪ್ರಮಾಣದಲ್ಲಿ ಕಡಿತಗೊಳಿಸಿವೆ. ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರಕಾರ ಪೆಟ್ರೋಲ್ ಮೇಲೆ ಲೀಟರ್‌ಗೆ 2.08ರೂ. ಹಾಗೂ ಡೀಸೆಲ್ ಮೇಲೆ 1.44 ರೂ. ವ್ಯಾಟ್ ಕಡಿತಗೊಳಿಸಿವೆ.
ಹೆಚ್ಚುವರಿ 2 ಲಕ್ಷ ಕೋಟಿ ರೂ. ವೆಚ್ಚ ಸಂಭವ
ಕೇಂದ್ರ ಸರಕಾರವು 2022-23ರಲ್ಲಿ ಹಣದುಬ್ಬರ ಅಥವಾ ಬೆಲೆ ಏರಿಕೆಯನ್ನು ನಿಯಂತ್ರಿಸಲು ಹೆಚ್ಚುವರಿ 2 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಲು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಎರಡು ಸುತ್ತಿನ ಇಂಧನ ತೆರಿಗೆ ಕಡಿತದಿಂದ ಸರಕಾರದ ಬೊಕ್ಕಸಕ್ಕೆ 1 ಲಕ್ಷ ಕೋಟಿ ರೂ, ನಷ್ಟವಾಗಲಿದೆ. ಇದರ ಜತೆಗೆ ಹೆಚ್ಚುತ್ತಿರುವ ಹಣದುಬ್ಬರದಿಂದ ಸಂಕಷ್ಟದಲ್ಲಿರುವ ಜನತೆಯ ನೆರವಿಗೆ ಹೆಚ್ಚುವರಿ ವೆಚ್ಚ ಮಾಡಲು ಸರಕಾರ ಮುಂದಾಗಿದೆ. ಹೀಗಾಗಿ 2 ಲಕ್ಷ ಕೋಟಿ ರೂ. ಖರ್ಷು ಮಾಡುವ ನಿರೀಕ್ಷೆ ಇದೆ ಎಂದು ಇಬ್ಬರು ಹಿರಿಯ ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದು ಸುತ್ತಿನ ತೆರಿಗೆ ಕಡಿತ ನಿರೀಕ್ಷೆ
ಕಚ್ಚಾ ತೈಲ ದರ ಹೆಚ್ಚಳ ಮುಂದುವರಿದರೆ ಕೇಂದ್ರ ಸರಕಾರ ಮತ್ತೊಂದು ಸುತ್ತಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ಕಡಿತ ಮಾಡುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಸಗಟು ಹಣದುಬ್ಬರ ಶೇ.15.08 ಕ್ಕೆ ಏರಿಕೆ