ಮುಂಬಯಿ: ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರ ಉರುಳಿರುವುದರಿಂದ, ಹಾಗೂ ಬಿಜೆಪಿ-ಶಿಂಧೆ ಶಿವಸೇನಾ ಸಾರಥ್ಯದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಕೇಂದ್ರ ಸರ್ಕಾರದ ಮಹತ್ತ್ವಾಕಾಂಕ್ಷೆಯ ಬುಲೆಟ್ ರೈಲು ಯೋಜನೆ ಚುರುಕಾಗುವ ನಿರೀಕ್ಷೆ ಇದೆ.
ಅಹಮದಾಬಾದ್-ಮುಂಬಯಿ ನಡುವಣ ಹೈಸ್ಪೀಡ್ ಬುಲೆಟ್ ರೈಲು ಯೋಜನೆಗೆ ಶಿವಸೇನಾ-ಕಾಂಗ್ರೆಸ್- ಎನ್‌ಸಿಪಿ ನೇತೃತ್ವದ ಅಘಾಡಿ ಸರ್ಕಾರ ಅಡ್ಡಿಪಡಿಸಿತ್ತು. ಮಹಾರಾಷ್ಟ್ರದಲ್ಲಿ ಇದನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದಿತ್ತು. ಇದರ ಪರಿಣಾಮ ಅಹಮದಾಬಾದ್‌ನಿಂದ ಯೋಜನೆಯ ಕಾಮಗಾರಿ ಆರಂಭವಾಗಿದ್ದರೂ, ಮಹಾರಾಷ್ಟ್ರದ ಭಾಗದಲ್ಲಿ ಮಂದಗತಿಯಲ್ಲಿತ್ತು. ಸ್ವತಃ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಲವು ಸಂದರ್ಭಗಳಲ್ಲಿ ಇದನ್ನು ಪ್ರಸ್ತಾಪಿಸಿದ್ದರು. ಅಘಾಡಿ ಸರ್ಕಾರ ಅಗತ್ಯ ಭೂಮಿ, ಅರನ್ಯ ಇಲಾಖೆಯ ಕ್ಲಿಯರೆನ್ಸ್ ನೀಡಲು ನಿರಾಕರಿಸಿತ್ತು.
ಬುಲೆಟ್ ರೈಲು ಯೋಜನೆಗೆ ಸಂಬಂಧಿಸಿ ಗುಜರಾತ್‌ನಲ್ಲಿ ೯೯% ಭೂಸ್ವಾಧೀನ ನಡೆದಿದ್ದರೆ, ಮಹಾರಾಷ್ಟ್ರದಲ್ಲಿ ೭೧% ಮಾತ್ರ ಆಗಿದೆ.
ಮುಂಬಯಿನಲ್ಲಿ ಭೂಗತ ಮೆಟ್ರೊ ರೈಲ್ವೆ ಕಾಮಗಾರಿ ಕೂಡ ಕುಂಠಿತವಾಗಿತ್ತು. ಇದೀಗ ರಾಜ್ಯದಲ್ಲಿ ಅಧಿಕಾರ ಬದಲಾವಣೆ ಆಗಿರುವುದರಿಂದ ಬುಲೆಟ್ ರೈಲು ಯೋಜನೆ ಕಾಮಗಾರಿ ಚುರುಕಾಗುವ ನಿರೀಕ್ಷೆ ಇದೆ.