ನವ ದೆಹಲಿ: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ಜುಲೈ ೩೧ರ ಗಡುವನ್ನು ವಿಸ್ತರಿಸಬೇಕು ಎಂದು ಚಾರ್ಟರ್ಡ್ ಅಕೌಂಟೆಂಟ್‌ಗಳು ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರೂ ಒತ್ತಾಯಿಸುತ್ತಿದ್ದಾರೆ.
ಟ್ವಿಟರ್‌ನಲ್ಲಿ #Extend_due_date_immediately ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ. ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಅವರು ಜುಲೈ ೨೨ರಂದು ಐಟಿಆರ್ ಸಲ್ಲಿಕೆಯ ಗಡುವು ವಿಸ್ತರಣೆಯ ಪ್ರಸ್ತಾಪ ಸರ್ಕಾರದ ಪರಿಶೀಲನೆಯಲ್ಲಿ ಇಲ್ಲ ಎಂದು ಹೇಳಿದ ಬಳಿಕ ಇಂಥ ಅಭಿಯಾನ ಶುರುವಾಗಿದೆ.
ಇದುವರೆಗೆ ೩ ಕೋಟಿ ಐರಿಆರ್ ಸಲ್ಲಿಕೆ: ಈ ಜುಲೈ ೨೫ರ ತನಕ ೩ ಕೋಟಿ ಐಟಿಆರ್‌ಗಳು ಸಲ್ಲಿಕೆಯಾಗಿವೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.
ಕನಿಷ್ಠ ೧ ತಿಂಗಳು ವಿಸ್ತರಣೆಗೆ ಒತ್ತಾಯ: ಆಲ್ ಇಂಡಿಯಾ ಫೆಡರೇಷನ್ ಆಫ್ ಟ್ಯಾಕ್ಸ್ ಪ್ರಾಕ್ಟೀಶನರ್ಸ್ (ಎಐಎಫ್‌ಟಿಪಿ) ಸಂಘಟನೆಯು ಐಟಿ ರಿಟರ್ನ್ ಸಲ್ಲಿಕೆಯ ಗಡುವನ್ನು ಕನಿಷ್ಠ ೧ ತಿಂಗಳಿನ ಮಟ್ಟಿಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದೆ. ಈ ಸಂಘಟನೆಯಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗಳು, ಹಣಕಾಸು ಸಲಹೆಗಾರರು ಇದ್ದಾರೆ.
” ಜುಲೈ ೩೧ರ ಗಡುವು ತಪ್ಪಿದರೆ ಬಡ್ಡಿ ಹಾಗೂ ದಂಡ ಅನ್ವಯವಾಗುತ್ತದೆ. ಕಳೆದ ವರ್ಷ ೫.೮೯ ಕೋಟಿ ಐಟಿಆರ್‌ಗಳು ಸಲ್ಲಿಕೆಯಾಗಿತ್ತು. ಕಳೆದ ವರ್ಷ ೨೦೨೧ರ ಡಿಸೆಂಬರ್ ೩೧ರ ತನಕ ಗಡುವು ವಿಸ್ತರಣೆಯಾಗಿತ್ತು. ಈ ವರ್ಷ ಇನ್ನೂ ಹೆಚ್ಚಿನ ರಿಟರ್ನ್‌ಗಳು ಸಲ್ಲಿಕೆಯಾಗುವ ಸಾಧ್ಯತೆ ಇದೆ. ಇದುವರೆಗೆ ಕೇವಲ ೩ ಕೋಟಿ ರಿಟರ್ನ್‌ಗಳು ಸಲ್ಲಿಕೆಯಾಗಿವೆ. ಹೀಗಾಗಿ ಗಡುವನ್ನು ವಿಸ್ತರಿಸಬೇಕುʼʼ ಎಂದು ಸುಭೋಧ್ ಕುಮಾರ್ ಎಂಬುವರು ಒತ್ತಾಯಿಸಿದ್ದಾರೆ. ನೂತನ ಐಟಿ ವೆಬ್ ಪೋರ್ಟಲ್‌ನಲ್ಲಿ ತಾಂತ್ರಿಕ ಅಡಚಣೆಗಳು ಈಗಲೂ ಸಂಪೂರ್ಣವಾಗಿ ಬಗೆಹರಿದಿಲ್ಲ ಎಂದು ಹಲವು ತೆರಿಗೆದಾರರು, ನೆಟ್ಟಿಗರು ದೂರಿದ್ದಾರೆ.
ಕಳೆದ ೭ ವರ್ಷಗಳಲ್ಲಿ ಐಟಿ ರಿಟರ್ನ್ ಗಡುವು ವಿಸ್ತರಣೆ
ಮೌಲ್ಯಮಾಪನಾ ವರ್ಷ | ಗಡುವು | ವಿಸ್ತರಣೆ |
2021-22 | 31/07/2021 | 31/12/2021 |
2020-21 | 31/07/2020 | 10/01/2021 |
2019-20 | 31/07/2019 | 31/08/2019 |
2018-19 | 31/07/2018 | 31/08/2018 |
2017-18 | 31/07/2017 | 05/08/2017 |
2016-17 | 31/07/2016 | 05/08/2016 |