ನವ ದೆಹಲಿ: ಮೈಕ್ರೊಸಾಫ್ಟ್‌ನ ನೂತನ ಸಮೀಕ್ಷೆಯ ಪ್ರಕಾರ 70% ಭಾರತೀಯರು ಚಾಟ್‌ಜಿಪಿಟಿ, (ChatGPT ) ಮೈಕ್ರೊಸಾಫ್ಟ್ ಬಿಂಗ್ ಚಾಟ್, ಗೂಗಲ್ ಬಾರ್ಡ್ ಇತ್ಯಾದಿ ಕೃತಕ ಬುದ್ಧಿಮತ್ತೆ ಆಧರಿತ ಟೂಲ್ಸ್‌ಗಳ ಪರಿಣಾಮ (AI) ತಮ್ಮ ಉದ್ಯೋಗ ನಷ್ಟವಾಗುವ ಭೀತಿ ಎದುರಿಸುತ್ತಿದ್ದಾರೆ.
ಮೈಕ್ರೊಸಾಫ್ಟ್ ತನ್ನ ವರ್ಕ್ ಟ್ರೆಂಡ್ ಇಂಡೆಕ್ಸ್ 2023 ವರದಿಯನ್ನು (Will AI fix work) ಬಿಡುಗಡೆಗೊಳಿಸಿದ್ದು, ಇದರ ಪ್ರಕಾರ 74% ಭಾರತೀಯ ಉದ್ಯೋಗಿಗಳು ಎಐನಿಂದ ತಮ್ಮ ಜಾಬ್ ಹೋಗಬಹುದು ಎಂಬ ಅನಿಶ್ಚಿತತೆ ಎದುರಿಸುತ್ತಿದ್ದಾರೆ. ಭಾರತ ಸೇರಿದಂತೆ 31 ದೇಶಗಳಲ್ಲಿ 31,000 ಜನರನ್ನು ಸಮೀಕ್ಷೆಯಲ್ಲಿ ಸಂದರ್ಶಿಸಲಾಗಿತ್ತು.
ಜಗತ್ತಿನಾದ್ಯಂತ ಚಾಟ್‌ಜಿಪಿಟಿಗೆ ಕಂಡರಿಯದಷ್ಟು ಬೇಡಿಕೆ ಸೃಷ್ಟಿಯಾಗಿದೆ. ಗ್ರಾಹಕ ಸೇವೆ, ಬ್ಯಾಂಕಿಂಗ್, ಮಾಧ್ಯಮ ಸೇರಿದಂತೆ ಬಹುತೇಕ ವಲಯಗಳಲ್ಲಿ ಚಾಟ್‌ಜಿಪಿಟಿ ತನ್ನ ಛಾಪು ಮೂಡಿಸುವ ನಿರೀಕ್ಷೆ ಇದೆ. (ChatGPT) ಕೃತಕ ಬುದ್ದಿಮತ್ತೆ (artificial intelligence) ಟೂಲ್ಸ್ ಆಗಿರುವ ಚಾಟ್‌ಜಿಪಿಟಿ, ಗೂಗಲ್‌ನ ಬಾರ್ಡ್ (bard) ಮೊದಲಾದವುಗಳ ಮಾರಾಟ ವೃದ್ಧಿಸಲಿದ್ದು, 2032ರ ವೇಳೆಗೆ ಇವುಗಳ ವಹಿವಾಟು ಮೌಲ್ಯವೇ 1.3 ಲಕ್ಷ ಕೋಟಿ ಡಾಲರ್‌ಗೆ ( 106 ಲಕ್ಷ ಕೋಟಿ ರೂ.) ದಾಟಬಹುದು ಎಂದು ಅಂದಾಜಿಸಲಾಗಿದೆ.
ಎಐ ಟೂಲ್ಸ್‌ಗಳ ಬಳಕೆ ಬಗ್ಗೆ ತರಬೇತಿ, ಮೂಲಸೌಕರ್ಯ ಅಭಿವೃದ್ಧಿಗೆ ಅನುಕೂಲವಾಗಲಿದೆ. 10 ವರ್ಷಗಳಲ್ಲಿ ವಹಿವಾಟು 42% ಹೆಚ್ಚಳವಾಗಬಹುದು. ಎಐ ಸಿಸ್ಟಮ್‌ಗೆ ಬೇಕಿರುವ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆಯೂ ಆಗಲಿದೆ. ಮುಂದಿನ ಹತ್ತು ವರ್ಷಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಲಿದೆ. ಐಟಿ ವೆಚ್ಚದ ಭಾಗವಾಗಿ ಇದು ಸೇರ್ಪಡೆಯಾಗಲಿದೆ. ಜಾಹೀರಾತು ವೆಚ್ಚ, ಸೈಬರ್ ಸೆಕ್ಯುರಿಟಿ ಅಭಿವೃದ್ಧಿಗೆ ಹೂಡಿಕೆಯೂ ಜರುಗಲಿದೆ ಎಂದು ವರದಿಯಾಗಿದೆ.
ಕಳೆದ ವರ್ಷ ಚಾಟ್‌ಜಿಪಿಟಿ ಬಿಡುಗಡೆಯಾದ ಬಳಿಕ ಜಗತ್ತಿನಾದ್ಯಂತ ಎಐ ತಂತ್ರಜ್ಞಾನದ ಬೇಡಿಕೆ ವೃದ್ಧಿಸಿತ್ತು. ಅಮೆಜಾನ್ ಡಾಟ್‌ಕಾಮ್‌ನ ಕ್ಲೌಡ್ ವಿಭಾಗ, ಗೂಗಲ್‌ನ ಮಾತೃಸಂಸ್ಥೆ ಆಲ್ಫಬೆಟ್, ಎನ್‌ವಿದ್ಯಾ ಕಾರ್ಪ್, ಮೈಕ್ರೊಸಾಫ್ಟ್ ಇತ್ಯಾದಿ ಕಂಪನಿಗಳು ಎಐ ತಂತ್ರಜ್ಞಾನ ಅಭಿವೃದ್ಧಿಗೆ ಭರ್ಜರಿ ಹೂಡಿಕೆಯನ್ನು ಮಾಡಿವೆ.
ಇದನ್ನೂ ಓದಿ: Question Paper Leak: ಲೋಕಸೇವಾ ಆಯೋಗದ ಪರೀಕ್ಷೆ: ತೆಲಂಗಾಣದಲ್ಲಿ ಚಾಟ್‌ಜಿಪಿಟಿ ಬಳಸಿ ಚೀಟ್ ಮಾಡಿದ್ದು ಹೀಗೆ!
ಐಫೋನ್ ತಯಾರಕ ಆ್ಯಪಲ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಚಾಟ್‌ಜಿಪಿಟಿ ಬಳಸದಂತೆ ನಿರ್ಬಂಧಿಸಿದೆ. (Apple employees) ಚಾಟ್ ಜಿಪಿಟಿ (ChatGPT) ಹಾಗೂ ಇತರ ಕೃತಕ ಬುದ್ದಿಮತ್ತೆ ಆಧಾರಿತ (artificial intelligence) ಸಾಧನಗಳನ್ನು ಬಳಸದಂತೆ ಸೂಚಿಸಿದೆ. ಇದಕ್ಕೆ ಕಾರಣವೂ ಇದೆ.
ಆ್ಯಪಲ್ ಕಂಪನಿಯು ಈಗ ತನ್ನದೇ ಆದ ಕೃತಕ ಬುದ್ದಿಮತ್ತೆ ಯೋಜನೆಗಳನ್ನು ಹೊಂದಿದೆ. ತನ್ನದೇ ಚಾಟ್ ಜಿಪಿಟಿ ಮಾದರಿಯ ಟೂಲ್ಸ್ ಅಭಿವೃದ್ಧಿಗೆ ಮುಂದಾಗಿದೆ. ಹೀಗಾಗಿ ಎಐ ಟೆಕ್ನಾಲಜಿ ಬಳಸುವ ಉದ್ಯೋಗಿಗಳ ರಹಸ್ಯ ಡೇಟಾಗಳು ಸೋರಿಕೆಯಾಗುವ ಆತಂಕವನ್ನು ಎದುರಿಸುತ್ತಿದೆ. ಹೀಗಾಗಿ ಚಾಟ್ ಜಿಪಿಟಿ ಬಳಸದಂತೆ ನಿಷೇಧಿಸಿದೆ.
ಮೈಕ್ರೊಸಾಫ್ಟ್ ಮಾಲಿಕತ್ವದ ಗಿಟ್ ಹಬ್ಸ್ ಕೊಪೈಲೆಟ್ ಎಂಬ ಎಐ ಟೂಲ್ ಅನ್ನೂ ಬಳಸದಿರುವಂತೆ ಸೂಚಿಸಿದೆ. ಇದನ್ನು ಸಾಫ್ಟ್‌ವೇರ್ ಕೋಡ್ ಅನ್ನು ಆಟೊಮ್ಯಾಟಿಕ್ ಆಗಿ ರಚಿಸಲು ಬಳಸಬಹುದು. ಕಳೆದ ತಿಂಗಳು ಚಾಟ್ ಜಿಪಿಟಿಯ ರೂವಾರಿ ಓಪನ್ ಎಐ ಸಂಸ್ಥೆಯು ಚಾಟ್ ಜಿಪಿಟಿಯಲ್ಲಿ ಬಳಕೆದಾರರ ಸಂಭಾಷಣೆಯ ಹಿಸ್ಟರಿಯನ್ನು ಸೇವ್ ಮಾಡಲು ಸಾಧ್ಯವಿಲ್ಲ ಎಂದಿತ್ತು.