Site icon Vistara News

Chilli price | ಮಾರುಕಟ್ಟೆಯ ಸೀಸನ್‌ನಲ್ಲೂ ಇಳಿಕೆಯಾಗದ ಮೆಣಸಿನಕಾಯಿ ದರ

chilli

ಹೂವಪ್ಪ ಐ ಹೆಚ್.
ಬೆಂಗಳೂರು : ಮೆಣಸಿನಕಾಯಿ ಸೀಸನ್ ಬಂದರೆ ‌ಅದರ ಬೆಲೆ ಕಡಿಮೆಯಾಗುತ್ತದೆ (Chilli price) ಎಂಬ ಗ್ರಾಹಕರ ನಿರೀಕ್ಷೆ ಈ ವರ್ಷ ಹುಸಿಯಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬ್ಯಾಡಗಿ ಮೆಣಸಿನಕಾಯಿಯ ಆವಕ ಈ ಸಲ ಕಡಿಮೆಯಾಗಿದೆ. ಕಳೆದ ನವೆಂಬರ್‌ನಲ್ಲಿ ಸುರಿದ ಮಳೆಯಿಂದ ಮೆಣಸಿನಕಾಯಿ ಬೆಳೆಗೆ ಹಾನಿಯಾಗಿದ್ದು, ಶೇ. 30 ಇಳುವರಿ ಕುಸಿದಿದೆ. ಹೀಗಾಗಿ ಮಾರುಕಟ್ಟೆಗೆ ಮೆಣಸಿನಕಾಯಿ ಆವಕ ಕಡಿಮೆಯಾಗಿದೆ. ಇದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಸಾಮಾನ್ಯವಾಗಿ, ನವೆಂಬರ್-ಡಿಸೆಂಬರ್‌ನಲ್ಲಿ ಮಾರುಕಟ್ಟೆಗೆ ಒಂದು ಲಕ್ಷದಷ್ಟು ಚೀಲ ಬ್ಯಾಡಗಿ ಮೆಣಸು ಪೂರೈಕೆಯಾಗುತ್ತಿತ್ತು. ಆದರೆ ಈ ವರ್ಷ ಕೇವಲ 45-50 ಸಾವಿರ ಚೀಲಗಳಿಗೆ ಪೂರೈಕೆ ಕುಸಿದಿದೆ.

ಪ್ರತಿ ವರ್ಷ ಹಾವೇರಿ, ಗದಗ, ಬಳ್ಳಾರಿ, ಧಾರವಾಡ, ರಾಯಚೂರು, ಬಾಗಲಕೋಟೆ ಹಾಗೂ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಮೆಣಸಿನಕಾಯಿ ಬರುತ್ತದೆ. ಆದರೆ ನವೆಂಬರ್‌ನಲ್ಲಿ ಈ ಪ್ರದೇಶಗಳಲ್ಲಿ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಇಳುವರಿ ಮತ್ತು ಗುಣಮಟ್ಟ ಕುಸಿದಿದೆ ಎನ್ನುತ್ತಾರೆ ಬ್ಯಾಡಗಿ ಮೆಣಸಿನಕಾಯಿ ವ್ಯಾಪಾರಿಗಳು.

ಈ ಬಾರಿ ಮಾರುಕಟ್ಟೆಗೆ ಬಂದಿರುವ ಮೆಣಸಿನಕಾಯಿಯ ಗುಣಮಟ್ಟ ಕಡಿಮೆಯಾಗಿದ್ದು, ಮಳೆಯಿಂದಾಗಿ ಬೆಳೆಗೆ ಫಂಗಸ್ ರೋಗ ತಗುಲಿತ್ತು. ತಿಳಿ ಕೆಂಪು ಬಣ್ಣಕ್ಕೆ ಹೆಸರುವಾಸಿಯಾಗಿದ್ದ ಬ್ಯಾಡಗಿ ಮೆಣಸಿನಕಾಯಿ ಕಳೆಗುಂದಿದ್ದು, ಯೋಗ್ಯ ಬೆಲೆ ಸಿಗದೆ ರೈತರ ಚಿಂತೆಗೆ ಕಾರಣವಾಗಿದೆ. ಬ್ಯಾಡಗಿ ಮೆಣಸಿನಕಾಯಿಯಿಂದ ಒಲಿಯೊರೆಸಿನ್ ಎಣ್ಣೆಯನ್ನು ಹೊರತೆಗೆದು ರಫ್ತು ಮಾಡಲಾಗುತ್ತಿದೆ. ಹೀಗಾಗಿ ಭಾರಿ ಬೇಡಿಕೆಯಿದೆ. ಆದರೆ ಈ ಸಲ ಗುಣಮಟ್ಟ ಕುಸಿದಿದೆ. ಹೀಗಾಗಿ ರೈತರಿಗೆ ಸರ್ಕಾರ ನೆರವು ನೀಡಬೇಕು ಎಂದು ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ಒತ್ತಾಯಿಸಿದರು.

ಮಾರುಕಟ್ಟೆಯಲ್ಲಿ ದರ ವಿವರ

ಬ್ಯಾಡಗಿ ಮಾರುಕಟ್ಟೆಯ ಹರಾಜಿನಲ್ಲಿ ಡಬ್ಬಿ ಮೆಣಸಿನಕಾಯಿಯ ದರ ಕಳೆದ ವರ್ಷ ಕ್ವಿಂಟಾಲ್‌ಗೆ 16,009 ರೂ.ಗಳಿಂದ 51,786 ರೂ. ತನಕ ಇತ್ತು. ಈ ವರ್ಷ 25,000 ರೂ.ಗಳಿಂದ 56,199 ರೂ. ತನಕ ದರ ಲಭಿಸಿದೆ. ಅದೇ ರೀತಿ, ಬ್ಯಾಡಗಿ ಕಡ್ಡಿ ತಳಿ ಮೆಣಸಿನಕಾಯಿಗೆ ಕಳೆದ ವರ್ಷ ಪ್ರತಿ ಕ್ವಿಂಟಾಲ್‌ಗೆ 12,589 ರೂ.ಗಳಿಂದ 36,899 ರೂ. ತನಕ ದರ ಇತ್ತು. ಈ ವರ್ಷ 23,100 ರೂ.ಗಳಿಂದ 47,119 ರೂ. ತನಕ ಮಾರಾಟವಾಗಿದೆ.
ಬೆಂಗಳೂರು ಮಾರುಕಟ್ಟೆಯಲ್ಲಿ ಬ್ಯಾಡಗಿ ತಳಿ ಕ್ವಿಂಟಾಲ್ ಗೆ 42,000 ರೂ.ಗಳಿಂದ 52,000 ರೂ.ಗೆ ಮಾರಾಟವಾಗಿದೆ. ಗುಂಟೂರು ತಳಿ 27,000 ರೂ.ಗಳಿಂದ 28,500 ರೂ. ತನಕ ವಿಕ್ರಯವಾಗಿದೆ.

Exit mobile version