ಬೀಜಿಂಗ್: ಚೀನಾ ೨೯ ಯುದ್ಧ ವಿಮಾನಗಳನ್ನು ತೈವಾನ್‌ನ ಸಮೀಪ ಇರುವ ತನ್ನ ವಾಯುನೆಲೆಗೆ ತಂದು ನಿಲ್ಲಿಸಿದ್ದು, ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಈ ವರ್ಷ ಮೂರನೇ ಬಾರಿಗೆ ಈ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ಚೀನಾ ತನ್ನ ಯುದ್ಧ ವಿಮಾನಗಳನ್ನು ತಂದು ನಿಲ್ಲಿಸಿದೆ ಎಂದು ತೈವಾನ್ ತಿಳಿಸಿದೆ.
ಇದರಲ್ಲಿ ೬ ಎಚ್-೬ ಬಾಂಬರ್‌ಗಳು, ಎಲೆಕ್ಟ್ರಾನಿಕ್ ವಾರ್‌ಫೇರ್, ಗುಪ್ತಚರ ಉದ್ದೇಶಕ್ಕೆ ಬಳಸುವ ಏರ್‌ಕ್ರಾಫ್ಟ್ ಕೂಡ ಸೇರಿದೆ ಎಂದು ತಿಳಿಸಿದೆ.
ಕಳೆದ ಜನವರಿಯಲ್ಲಿ ಚೀನಾ ೩೯ ಜೆಟ್‌ಗಳು ಮತ್ತು ೩೦ ಯುದ್ಧ ವಿಮಾನಗಳೊಂದಿಗೆ ತೈವಾನ್‌ನ ರಕ್ಷಣಾ ವಲಯವನ್ನು ಪ್ರವೇಶಿಸಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ೫೬ ಯುದ್ಧ ವಿಮಾನಗಳು ಬಂದಿತ್ತು.
ತೈವಾನ್ ತನ್ನಿಂದ ಬೇರ್ಪಟ್ಟಿರುವ, ಆದರೆ ತನಗೆ ಸೇರಿದ ಭಾಗ ಎಂದು ಚೀನಾ ವಾದಿಸುತ್ತದೆ. ಬಲವಂತವಾಗಿಯಾದರೂ ತೈವಾನ್ ಅನ್ನು ಚೀನಾ ಜತೆಗೆ ವಿಲೀನ ಮಾಡುವುದಾಗಿ ಬೆದರಿಸುತ್ತಿದೆ.
ಚೀನಾ ವಿರುದ್ಧದ ತೈವಾನ್ ಹೋರಾಟಕ್ಕೆ ಅಮೆರಿಕ ಬೆಂಬಲಿಸುತ್ತಿದೆ. ಹೀಗಾಗಿ ಚೀನಾ-ಅಮೆರಿಕ ನಡುವೆಯೂ ಇಲ್ಲಿ ಸಂಘರ್ಷ ಏರ್ಪಟ್ಟಿದೆ. ಒಂದು ವೇಳೆ ಚೀನಾ, ತೈವನ್ ಅನ್ನು ಅತಿಕ್ರಮಿಸಲು ಯತ್ನಿಸಿದರೆ ಅಮೆರಿಕ ಮಿಲಿಟರಿ ಕಾರ್ಯಾಚರಣೆ ಮೂಲಕ ಮಧ್ಯಪ್ರವೇಶಿಸಲಿದೆ ಎಂದು ಅಧ್ಯಕ್ಷ ಜೋ ಬೈಡೆನ್ ಅವರು ಜಪಾನ್‌ನಲ್ಲಿ ಮೇ ೨೩ರಂದು ಎಚ್ಚರಿಸಿದ್ದರು. ಇದಾದ ಬಳಿಕ ಉಭಯ ರಾಷ್ಟ್ರಗಳ ನಡುವೆ ತೈವಾನ್ ವಿಷಯದಲ್ಲಿ ವಿವಾದ ಉಲ್ಬಣಿಸಿದೆ.