ನವ ದೆಹಲಿ: ಚೀನಾದ ಆಟೊಮೊಬೈಲ್ ದಿಗ್ಗಜ ಗ್ರೇಟ್ ವಾಲ್ ಮೋಟಾರ್, ಭಾರತದಲ್ಲಿ ತನ್ನ ೭,೮೯೫ ಕೋಟಿ ರೂ.ಗಳ ಯೋಜನೆಯನ್ನು ರದ್ದುಪಡಿಸಿದೆ.
ಹೀಗಾಗಿ ಭಾರತದಲ್ಲಿನ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ೧೧ ಉದ್ಯೋಗಿಗಳಿಗೆ ಮೂರು ತಿಂಗಳಿನ ವೇತನ ಮತ್ತು ಒಂದು ವರ್ಷದ ವೇರಿಯೆಬಲ್ ಪೇ ಕೊಟ್ಟು ಮನೆಗೆ ಕಳಿಸಿದೆ ಎಂದು ವರದಿಯಾಗಿದೆ.
ಚೀನಾದ ಈ ಕಂಪನಿಯು ೭,೮೯೫ ಕೋಟಿ ರೂ. ಹೂಡಿಕೆಯೊಂದಿಗೆ ಪುಣೆಯಲ್ಲಿರುವ ಜನರಲ್ ಮೋಟಾರ್ ಉತ್ಪಾದನಾ ಘಟಕವನ್ನು ಖರೀದಿಸಲು ಯೋಜಿಸಿತ್ತು. ಇದರಿಂದ ಸಾವಿರಾರು ಮಂದಿಗೆ ಉದ್ಯೋಗವೂ ಸಿಗುತ್ತಿತ್ತು. ಆದರೆ ಇದಕ್ಕೆ ಸರ್ಕಾರದ ಅನುಮೋದನೆ ಲಭಿಸಿರಲಿಲ್ಲ.
೨೦೨೦ರ ಜೂನ್‌ನಲ್ಲಿ ಲಡಾಕ್ ವಲಯದ ಗಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತೀಯ ಸೇನೆಯ ನಡುವೆ ಸಂಘರ್ಷ ನಡೆದ ಬಳಿಕ, ಭಾರತದಲ್ಲಿ ಚೀನಾದ ಹೂಡಿಕೆಯನ್ನು ಸರ್ಕಾರ ಆಳವಾದ ಪರಿಶೀಲನೆಗಳಿಗೆ ಒಳಪಡಿಸಿದೆ. ಚೀನಾ ಮೂಲದ ನೂರಾರು ಮೊಬೈಲ್ ಆ್ಯಪ್ ಗಳನ್ನು ನಿಷೇಧಿಸಿತ್ತು.
ಕಂಪನಿಯ ಚಟುವಟಿಕೆಗಳಿಗೆ ಸಂಬಂಧಿಸಿ ಸರ್ಕಾರದ ನಿಗಾ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ೨೦೨೨ರ ಮಾರ್ಚ್‌ನಲ್ಲಿ ಪ್ಲಾನಿಂಗ್ ಮತ್ತು ಸ್ಟ್ರಾಟಜಿ ವಿಭಾಗದ ಮುಖ್ಯಸ್ಥ ಕೌಶಿಕ್ ಗಂಗೂಲಿ ತಮ್ಮ ರಾಜೀನಾಮೆಯನ್ನು ಪ್ರಕಟಿಸಿದ್ದರು. ಸೇಲ್ಸ್ ವಿಭಾಗದ ಮುಖ್ಯಸ್ಥ ಹರ್ದೀಪ್ ಬ್ರಾರ್ ಕಂಪನಿ ತೊರೆದು ಕಿಯಾ ಮೋಟಾರ್‌ಗೆ ಸೇರಿದ್ದರು.
ಎಫ್‌ಡಿಐ ನೀತಿ ಬದಲಾವಣೆ ಎಫೆಕ್ಟ್
ಗಲ್ವಾನ್ ಸಂಘರ್ಷದ ಬಳಿಕ ಭಾರತ ತನ್ನ ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿಯಲ್ಲಿ ಬದಲಾವಣೆ ಮಾಡಿತ್ತು. ತನ್ನ ಜತೆ ಗಡಿಯನ್ನು ಹಂಚಿಕೊಂಡಿರುವ ದೇಶಗಳಿಂದ ಬರುವ ವಿದೇಶಿ ನೇರ ಬಂಡವಾಳ ಹೂಡಿಕೆ ಕುರಿತ ನೀತಿಗಳನ್ನು ಬಿಗಿಗೊಳಿಸಿತ್ತು. ಪ್ರಸ್ತಾಪಗಳನ್ನು ಹೆಚ್ಚಿನ ಪರಿಶೀಲನೆಗೆ ಒಳಪಡಿಸಲು ಶುರು ಮಾಡಿತ್ತು. ಗ್ರೇಟ್ ವಾಲ್ ಮೋಟಾರ್ ಹೂಡಿಕೆ ಯೋಜನೆಯೂ ಅಂಥ ತೀವ್ರ ಪರಿಶೀಲನೆಗೆ ಒಳಗಾಗಿತ್ತು.
ಬ್ರೆಜಿಲ್‌ನತ್ತ ಚೀನಿ ಕಂಪನಿಯ ಚಿತ್ತ
ಭಾರತದಲ್ಲಿ ಹೂಡಿಕೆ ಯೋಜನೆಯನ್ನು ರದ್ದುಪಡಿಸಿರುವ ಗ್ರೇಟ್ ವಾಲ್ ಮೋಟಾರ್, ಬ್ರೆಜಿಲ್‌ನಲ್ಲಿ ಹೂಡಿಕೆಗೆ ಮುಂದಾಗಿದೆ. ಬ್ರೆಜಿಲ್‌ನ ಆಟೊಮೊಬೈಲ್ ಉತ್ಪಾದನಾ ಘಟಕವೊಂದನ್ನು ಖರೀದಿಸಿರುವ ಗ್ರೇಟ್ ವಾಲ್ ಮೋಟಾರ್, ೧೫,೭೯೦ ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಹೀಗಿದ್ದರೂ, ಭಾರತೀಯ ಮಾರುಕಟ್ಟೆಯ ಅಧ್ಯಯನವನ್ನು ಕೈಗೊಳ್ಳುವುದಾಗಿ ಕಂಪನಿ ತಿಳಿಸಿದೆ.