ಬೆಂಗಳೂರು: ಜಾರಿ ನಿರ್ದೇಶನಾಲಯವು ( Enforcement Directorate ) ಶುಕ್ರವಾರ ಚೀನಿ ಪ್ರಜೆಗಳ ನಿಯಂತ್ರಣದಲ್ಲಿದ್ದ 3 ಫಿನ್‌ಟೆಕ್ ಕಂಪನಿಗಳ ವಿರುದ್ಧ ಲೋನ್ ಆ್ಯಪ್‌ಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿಯನ್ನು ದಾಖಲಿಸಿದೆ. ಹಲವಾರು ಎನ್‌ಬಿಎಫ್‌ಸಿಗಳು ಮತ್ತು ಇತರ ಕಂಪನಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಕುರಿತ ತನಿಖೆ ನಡೆಯಲಿದೆ. ಪೇಮೆಂಟ್ ಗೇಟ್‌ವೇ ರೇಜರ್‌ಪೇ ವಿರುದ್ಧ ಕೂಡ ತನಿಖೆಯಾಗಲಿದೆ.
ಬೆಂಗಳೂರಿನಲ್ಲಿರುವ ಪಿಎಂಎಲ್‌ಎ ಕೋರ್ಟ್ ಪ್ರಕರಣದ ವಿಚಾರಣೆ ನಡೆಸಲಿದೆ. ಚಾರ್ಜ್‌ಶೀಟ್‌ನಲ್ಲಿ ಒಟ್ಟು 7 ಕಂಪನಿಗಳು ಮತ್ತು ಐವರು ಆರೋಪಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಚೀನಿ ಪ್ರಜೆಗಳ ಒಡೆತನದಲ್ಲಿರುವ ಮ್ಯಾಡ್ ಎಲಿಫೆಂಟ್ ನೆಟ್‌ವರ್ಕ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಬಾರ್ಯೊನಿಕ್ಸ್ ಟೆಕ್ನಾಲಜಿ, ಕ್ಲೌಡ್ ಅಟ್ಲಾಸ್ ಫ್ಯೂಚರ್ ಟೆಕ್ನಾಲಜಿ ವಿರುದ್ಧ ಆರೋಪ ಪಟ್ಟಿ ದಾಖಲಾಗಿದೆ.
ಬೆಂಗಳೂರಿನ ಸಿಐಡಿ ಪೊಲೀಸರು ಹಲವಾರು ಕಡೆಗಳಿಂದ ಬಂದ ದೂರನ್ನು ಆಧರಿಸಿ ಕೇಸ್ ದಾಖಲಿಸಿದ್ದರು. ಫಿನ್ ಟೆಕ್ ಕಂಪನಿಗಳ ರಿಕವರಿ ಏಜೆಂಟರಿಂದ ಡಿಜಿಟಲ್ ಸಾಲಕ್ಕೆ ಸಂಬಂಧಿಸಿ ದೌರ್ಜನ್ಯವನ್ನು ಗ್ರಾಹಕರು ಎದುರಿಸಿದ್ದರು.
ಜಾರಿ ನಿರ್ದೇಶನಾಲಯವು ಈ ಹಿಂದೆ ಚೀನಾದ ನಿಯಂತ್ರಣದಲ್ಲಿರುವ ಹಲವಾರು ಸಾಲದ ಆ್ಯಪ್‌ಗಳ ಮೇಲೆ ದಾಳಿ ನಡೆಸಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ಅಡಿಯಲ್ಲಿ ಕ್ರಮ ಜರುಗಿಸಲಾಗಿತ್ತು. ಕಳೆದ ವರ್ಷ ಸೆಪ್ಟೆಂಬರ್ 14ರಂದು ದಿಲ್ಲಿ, ಮುಂಬಯಿ, ಬೆಂಗಳೂರು, ಗಾಜಿಯಾಬಾದ್, ಲಖನೌ, ಗಯಾದಲ್ಲಿ ಶೋಧ ಕಾರ್ಯಾಚರಣೆ ನಡೆದಿತ್ತು.