Site icon Vistara News

ಬೆಂಗಳೂರಿನಲ್ಲಿ ಐಕಿಯದ ಮೆಗಾ ಮಳಿಗೆಯನ್ನು ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿ, ಸ್ವಿಡನ್ ಮೂಲದ ಗೃಹ ಪೀಠೋಪಕರಣಗಳ ಮಾರಾಟ ಕಂಪನಿ ‘ಐಕಿಯ’ ದ ಬೃಹತ್ ಮಳಿಗೆಯನ್ನು ಉದ್ಘಾಟಿಸಿದರು.

ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಭಾರತದಲ್ಲಿ ಸ್ವೀಡನ್ ರಾಯಭಾರಿ ಕ್ಲಾಸ್ ಮೊಲಿನ್, ಐಕಿಯ ಇಂಡಿಯಾ‌ (IKEA) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂಸನ್ ಪುಲ್ವೇಲರ್, ಐಕಿಯಾ ಕರ್ನಾಟಕದ ಮಾರುಕಟ್ಟೆ ವ್ಯವಸ್ಥಾಪಕರಾದ ಆಂಜೆ ಹಿಮ್, ಮೊದಲಾದವರು ಉಪಸ್ಥಿತರಿದ್ದರು.‌

೩,೦೦೦ ಕೋಟಿ ರೂ. ಹೂಡಿಕೆ

ಈ ಸಂದರ್ಭ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ದಾವೋಸ್‌ನಲ್ಲಿ ಐಕಿಯದ ಸಿಇಒ ಜತೆ ಮಾತುಕತೆ ನಡೆದಿತ್ತು. ಕಂಪನಿ ಕರ್ನಾಟಕದಲ್ಲಿ ೩,೦೦೦ ಕೋಟಿ ರೂ. ಹೂಡಿಕೆ ಮಾಡಲು ನಿರ್ಧರಿಸಿದೆ. ಸ್ಥಳೀಯರಿಗೆ ೭೫% ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ. ಸ್ಥಳೀಯರಿಗೆ, ಸ್ಥಳೀಯ ಕರಕುಶಕರ್ಮಿಗಳಿಗೆ ಹೆಚ್ಚಿನ ಉದ್ಯೋಗ ಕಲ್ಪಿಸಬೇಕು. ಇಲ್ಲಿನದ್ದೇ ಕಚ್ಚಾ ವಸ್ತುಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದ್ದೇವೆ ಎಂದು ವಿವರಿಸಿದರು.

ಸ್ಥಳೀಯರಿಗೆ ಉದ್ಯೋಗ

ಮಳಿಗೆ ಪ್ರಾರಂಭವಾದುದರಿಂದ ಸ್ಥಳೀಯ ಕುಶಲಕರ್ಮಿಗಳಾದ, ಬಡಗಿಗಳು, ಶಿಲ್ಪಕಾರರು, ಉತ್ಪಾದಕರಿಗೆ ಅವಕಾಶ ದೊರೆಯುತ್ತದೆ. ಶೇ 27 ರಷ್ಟು ಅವಕಾಶ ನೀಡುವುದಾಗಿ ಹೇಳಿದ್ದಾರೆ. ಅದನ್ನು ಹೆಚ್ಚಿಗೆ ಮಾಡುವಂತೆ ಮನವಿ ಮಾಡಲಾಗಿದೆ. ಇನ್ನಷ್ಟು ಮಳಿಗೆಗಳನ್ನು ತೆಗೆಯಬೇಕು. ಒಂದು ಮಳಿಗೆಯಲ್ಲಿ ಒಂದು ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯುತ್ತದೆ. ಬೆಂಗಳೂರಿಗೆ ಆ ಸಾಮರ್ಥ್ಯವಿದೆ. ಬೆಂಗಳೂರು ದಕ್ಷಿಣದಲ್ಲಿ ಮಳಿಗೆ ತೆರೆಯಲು ತಿಳಿಸಲಾಗಿದೆ ಎಂದರು. ಬೆಂಗಳೂರಿನಲ್ಲಿಯೇ ಮೊದಲ ಮಳಿಗೆ ಪ್ರಾರಂಭಿಸಬೇಕೆಂಬ ಉದ್ದೇಶ ಐಕಿಯ ಸಂಸ್ಥೆಗೆ ಇತ್ತು. ಆದರೆ ಸಹಕಾರ ದೊರೆಯಲಿಲ್ಲ. ನಂತರ ಬಹಳ ಕಷ್ಟಪಟ್ಟು ಸ್ಥಳ ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಗಳು ತಿಳಿಸಿದರು.

ಮಧ್ಯಮವರ್ಗದವರ ಕನಸು ನನಸಾಗಿಸಲು ಸಹಕಾರಿ

ಐಕಿಯದಲ್ಲಿ ಉತ್ತಮ ಗುಣಮಟ್ಟದ, ಬಾಳಿಕೆ ಬರುವ ಹಾಗೂ ಕೈಗೆಟುಕುವ ಬೆಲೆಯ ಪೀಠೋಪಕರಣಗಳಿವೆ. ಸಾಮಾನ್ಯ ಜನರಿಗೆ, ಮಧ್ಯಮವರ್ಗದವರ ಕನಸು ನನಸಾಗಿಸಲು ಇದು ಸಹಕಾರಿಯಾಗಿದೆ. ಉದ್ಯಮ ಬೆಳೆಯಬೇಕು ಹಾಗೂ ಉದ್ಯೋಗಾವಕಾಶಗಳು ಹೆಚ್ಚಬೇಕು ಎಂಬ ಕಾರಣಕ್ಕಾಗಿ ನಾವು ಇಂತಹ ಉದ್ಯಮಗಳಿಗೆ ಪ್ರೋತ್ಸಾಹ ನೀಡಲೇಬೇಕು ಎಂದರು.

Exit mobile version