ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (Compressed Natural Gas – CNG)ಬಳಕೆಯ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಅಂತಹ ವಾಹನ ಸವಾರರಿಗೆ ಕಹಿ ಸುದ್ದಿಯೊಂದು ಹೊರ ಬಿದ್ದಿದೆ. ಸಿಎನ್‌ಜಿ ಬೆಲೆ ಕೆಜಿಗೆ 1 ರೂ. ಹೆಚ್ಚಾಗಿದೆ. ತುಸು ಸಮಾಧಾನದ ಸುದ್ದಿ ಎಂದರೆ ಬೆಂಗಳೂರಿನಲ್ಲಿ ಬೆಲೆ ಏರಿಕೆಯಾಗಿಲ್ಲ. ದೆಹಲಿ, ನೋಯ್ಡಾ, ಗ್ರೇಟರ್ ನೋಯ್ಡಾ, ಗಾಜಿಯಾಬಾದ್, ಮೀರತ್, ಶಾಮ್ಲಿ, ಮುಜಾಫರ್‌ನಗರ ಮತ್ತು ರಾಜಸ್ಥಾನ ರೇವಾರಿಯದ ಗ್ರಾಹಕರಿಗೆ ಬೆಲೆ ಹೆಚ್ಚಳದ ಶಾಕ್ ತಟ್ಟಲಿದೆ (CNG Price).
ದೆಹಲಿ ಮತ್ತು ಪಕ್ಕದ ನಗರಗಳಲ್ಲಿ ಸಿಎನ್‌ಜಿ ಬೆಲೆಯನ್ನು ಶನಿವಾರದಿಂದಲೇ (ಜೂನ್ 22) ಪ್ರತಿ ಕೆ.ಜಿ.ಗೆ 1 ರೂ. ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಈಗ ಸಿಎನ್‌ಜಿ ಪ್ರತಿ ಕೆ.ಜಿ.ಗೆ 75.09 ರೂ. ಇದೆ, ಹಿಂದಿನ ದರ 74.09 ರೂ. ಆಗಿತ್ತು. ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಬೆಲೆ ಪ್ರತಿ ಕೆ.ಜಿ.ಗೆ 78.70 ರೂ.ಗಳಿಂದ 79.70 ರೂ.ಗೆ ಏರಿಕೆಯಾಗಿದೆ. ಆದಾಗ್ಯೂ ಗುರುಗ್ರಾಮದಲ್ಲಿ ಸಿಎನ್‌ಜಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇತ್ತ ಪೈಪ್ ಮೂಲಕ ಪೂರೈಕೆಯಾಗುವ ಅಡುಗೆ ಅನಿಲದ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
ಸಿಎನ್‌ಜಿ ಪೂರೈಸುವ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (Indraprastha Gas Ltd-IGL) ಬೆಲೆ ಹೆಚ್ಚಳಕ್ಕೆ ಕಾರಣಗಳನ್ನು ಬಹಿರಂಗಪಡಿಸಿಲ್ಲ. ಪೂರೈಕೆಯ ಕುಸಿತದಿಂದ ಸಂಸ್ಥೆ ಈಗ ಅನಿಲವನ್ನು ಹೆಚ್ಚು ಆಮದು ಮಾಡಿಕೊಳ್ಳಬೇಕಾಗಿರುವುದರಿಂದ ದರವನ್ನು ಏರಿಕೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ನೆಲ ಮತ್ತು ಸಮುದ್ರದ ತಳದಿಂದ ಪಂಪ್ ಮಾಡಲಾದ ನೈಸರ್ಗಿಕ ಅನಿಲವನ್ನು ವಾಹನಗಳನ್ನು ಚಲಾಯಿಸಲು ಸಿಎನ್‌ಜಿ ಆಗಿ ಪರಿವರ್ತಿಸಲಾಗುತ್ತದೆ. ಆದರೆ ದೇಶೀಯ ಬೇಡಿಕೆಗೆ ಅನುಗುಣವಾಗಿ ಸಿಎನ್‌ಜಿ ಉತ್ಪಾದನೆ ಆಗುತ್ತಿಲ್ಲ. ಹೀಗಾಗಿ ಆಮದು ಮಾಡಿಕೊಳ‍್ಳಬೇಕಾದ ಅನಿವಾರ್ಯತೆ ಇದೆ. ಐಜಿಎಲ್ ಬೇಡಿಕೆಯ ಶೇ. 66-67ರಷ್ಟು ಸಿಎನ್‌ಜಿ ಉತ್ಪಾದಿಸುತ್ತಿದೆ. ಉಳಿದವುಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.
ವಿವಿಧ ನಗರದಲ್ಲಿನ ದರ (ಪ್ರತಿ ಕೆಜಿಗೆ)
ನಗರ | ಹಿಂದಿನ ದರ (ರೂ.ಗಳಲ್ಲಿ) | ಪರಿಷ್ಕೃತ ದರ (ರೂ.ಗಳಲ್ಲಿ) |
ದೆಹಲಿ | 74.09 | 75.09 |
ನೋಯ್ಡಾ | 78.70 | 79.70 |
ಗ್ರೇಟರ್ ನೋಯ್ಡಾ | 78.70 | 79.70 |
ಗಾಜಿಯಾಬಾದ್ | 78.70 | 79.70 |
ಅಜ್ಮೀರ್ | 81.94 | 82.94 |
ಪಾಲಿ | 80.94 | 81.94 |
ರಾಜ್ಸಮಂದ್ | 80.94 | 81.94 |
ಇದನ್ನೂ ಓದಿ: GST Council meeting : ಹೊಸ ತೆರಿಗೆ ಪ್ರಕಾರ ಯಾವುದು ಅಗ್ಗ ಮತ್ತು ದುಬಾರಿ?
ಜನರಿಗೆ ಸಿದ್ದರಾಮಯ್ಯ ಸರ್ಕಾರ ಶಾಕ್; ಪೆಟ್ರೋಲ್, ಡೀಸೆಲ್ ಬೆಲೆ 3 ರೂ. ಏರಿಕೆ
ಕರ್ನಾಟಕದಲ್ಲಿ ಇತ್ತೀಚೆಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಒಂದು ಲೀಟರ್ ಪೆಟ್ರೋಲ್‌ಗೆ 3 ರೂ. ಹಾಗೂ ಡೀಸೆಲ್‌ಗೆ 3.5 ರೂ. ಹೆಚ್ಚಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಇದರಿಂದ ಒಂದು ಲೀಟರ್ ಡೀಸೆಲ್‌ಗೆ 89.20 ರೂ. ಲೀಟರ್ ಪೆಟ್ರೋಲ್‌ಗೆ 103 ರೂ. ಆಗಿದೆ.
ಪೆಟ್ರೋಲ್‌ಗೆ ರಾಜ್ಯ ಸರ್ಕಾರವು ಇದುವರೆಗೆ ಶೇ. 25.92ರಷ್ಟು ಮಾರಾಟ ತೆರಿಗೆ ವಿಧಿಸುತ್ತಿತ್ತು. ಇದನ್ನು ಶೇ. 3.9ರಷ್ಟು ಹೆಚ್ಚಳ ಮಾಡಿದೆ. ಈಗ ಒಟ್ಟು ಶೇ. 29.84ರಷ್ಟು ತೆರಿಗೆ ವಸೂಲಿ ಮಾಡುತ್ತಿದೆ. ಇನ್ನು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ. 4.1ರಷ್ಟು ಏರಿಕೆ ಮಾಡಲಾಗಿದ್ದು, ರಾಜ್ಯ ಸರ್ಕಾರ ಇನ್ನು ಶೇ. 18.44ರಷ್ಟು ತೆರಿಗೆ ವಸೂಲಿ ಮಾಡುತ್ತಿದೆ.